ಬೆಳ್ತಂಗಡಿ: ಕೊರೋನಾ ಎರಡನೇ ಅಲೆಯಿಂದ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ.
ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದವರ ವಿರುದ್ಧ ಎಫ್ ಐಆರ್ ಹಾಕುವಂತೆ ಹೈಕೋರ್ಟ್ ಸೂಚಿಸಿದೆ. ಕೊರೊನಾ ಎರಡನೇ ಅಲೆಯ ಸೋಂಕು ದಿನ ಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಆದರೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಹಲವಾರು ಬೇಡಿಕೆಯನ್ನಿರಿಸಿ ಮುಷ್ಕರ ಮಾಡಿದ್ದರು. ಕೆಲಸಕ್ಕೆ ಹಾಜರಾಗದೇ ಬಸ್ ಗಳು ರಸ್ತೆಗೆ ಇಳಿದಿರಲಿಲ್ಲ. ದಿನ ಕಳೆದಂತೆ ಕೆಲವು ಬಸ್ ಗಳು ಮಾತ್ರ ರೂಟ್ ನಲ್ಲಿ ಓಡಾಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಮಾತ್ರ ಸಮಸ್ಯೆ ಇನ್ನು ಬಗೆಹರಿದಂತೆ ಕಾಣುತ್ತಿಲ್ಲ.
ಕೊರೋನಾ ಹಿನ್ನಲೆಯಲ್ಲಿ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಬೇಕು ಎನ್ನುವ ನಿಯಮವನ್ನು ಸರಕಾರಿ ಹಾಗೂ ಖಾಸಗಿ ಬಸ್ ಗಳು ಗಾಳಿಗೆ ತೂರುತ್ತಿದೆ. ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರವನ್ನು ಈ ಮೇಲಿನ ಚಿತ್ರಗಳನ್ನು ಗಮನಿಸಿದರೆ ಅರ್ಥವಾಗುತ್ತದೆ.
ಇದರಲ್ಲಿ ತಪ್ಪು ಯಾರದ್ದು ಅಂತ ವಿಮರ್ಶೆ ಮಾಡುವ ಕಾಲ ಬಂದೊದಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬರುವ ಬಸ್ಸೊಂದು ಮಿಸ್ ಆದರೆ ಕಾಲೇಜಿನ ಸಮಯಕ್ಕೆ ಹೋಗುವಂತಿಲ್ಲ. ಸಾಮಾಜಿಕ ಅಂತರ ಹಾಗೂ ಸೀಮಿತ ಆಸನ ಬಳಕೆ ಮಾಡಬೇಕು ಎನ್ನುವ ನಿಯಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ವಯ ಆಗುವಂತಿಲ್ಲ. ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಒಂದೇ ಬಸ್ಸಿನಲ್ಲಿ ನೇತಾಡಿಕೊಂಡು ಬರುವ ಪರಿಸ್ಥಿತಿಯನ್ನು ಸಾರಿಗೆ ಇಲಾಖೆ ಕಲ್ಪಿಸಿದೆ. ಹೆಚ್ಚುವರಿ ಬಸ್ ಗಳ ನಡೆಸದೆ ಈ ಇಕ್ಕಟ್ಟಿನ ಸಂದರ್ಭದಲ್ಲೂ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ.
ಈಗಾಗಲೇ ಕೆಲವು ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗಲಿದ್ದು, ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದಿನೇ ದಿನೇ ಸೋಂಕಿನ ಸಂಖ್ಯೆ ಏರಿಕೆ ಆಗುತ್ತಿದ್ದು, ಸೀಮಿತ ಪ್ರಯಾಣಿಕರನ್ನು ಕರೆದೊಯ್ಯಬೇಕಾದ ವಾಹನಗಳು ನಿಯಮವನ್ನು ಗಾಳಿಗೆ ತೂರುತ್ತಿರುವ ವಾಹನಗಳ ಮೇಲೆ ತೀವ್ರ ನಿಗಾ ವಹಿಸಿ, ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ಗಳನ್ನು ಗ್ರಾಮೀಣ ಪ್ರದೇಶದ ರೂಟ್ ಗಳಲ್ಲಿ ಓಡಿಸಬೇಕಾಗಿದೆ. ಕೊರೋನಾ ಸಂದರ್ಭ ವಾಹನಗಳು ಪಾಲಿಸಬೇಕಾದ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಬೇಕಾಗಿದೆ.