ಕೇವಲ 8.96 ಸೆಕೆಂಡ್ ನಲ್ಲಿ 100 ಮೀ. ಓಟ!: ಮತ್ತೊಮ್ಮೆ ವಿಶ್ವದ ಚಿತ್ತ ಸೆಳೆದ ಕಂಬಳ ಓಟಗಾರ ಶ್ರೀನಿವಾಸ ಗೌಡ: ಪೆರ್ಮುಡದಲ್ಲಿ ಸೂರ್ಯ-ಚಂದ್ರ ಕರೆಯಲ್ಲಿ ಹೊಸ ದಾಖಲೆ

ಬೆಳ್ತಂಗಡಿ: ವೇಗದ ಓಟಗಾರ ಉಸೇನ್ ಬೋಲ್ಟ್ ವೇಗವನ್ನೂ ಮೀರಿ ಓಟದ ಸಾಧನೆ‌ ಮಾಡಿ ಸುದ್ದಿಯಾಗಿದ್ದ, ಕಂಬಳ‌ ಓಟಗಾರ ಮಿಜಾರ್ ಅಶ್ವತ್ಥಪುರದ ಶ್ರೀನಿವಾಸ ಗೌಡ ಅವರು ಮತ್ತೊಮ್ಮೆ ದೇಶದ ಚಿತ್ತ ಸೆಳೆದಿದ್ದಾರೆ‌. ಈ ಬಾರಿ ಪೆರ್ಮುಡ ಸೂರ್ಯ- ಚಂದ್ರ ಜೋಡುಕರೆ ಕಂಬಳದಲ್ಲಿ ಕೇವಲ 8.96 ಸೆಕೆಂಡ್ ನಲ್ಲಿ 100 ಮೀ. ದಾಟುವ ಮೂಲಕ ದಾಖಲೆಗಳನ್ನು ಮುರಿದು ಮತ್ತೊಂದು ಹೊಸ ಸಾಧನೆ ಮಾಡಿದ್ದಾರೆ.


ಬೆಳ್ತಂಗಡಿ ತಾಲೂಕಿನ ಪೆರ್ಮುಡದಲ್ಲಿ ನಡೆಯುತ್ತಿರುವ ಸೂರ್ಯ ಚಂದ್ರ ಜೋಡುಕರೆ ಕಂಬಳದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಪೆರ್ಮುಡ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳನ್ನು 125 ಮೀಟರ್ ಉದ್ದದ ಪೆರ್ಮುಡ ಕಂಬಳದ ಕರೆಯಲ್ಲಿ ಕೇವಲ 11.21 ಸೆಕೆಂಡ್ ನಲ್ಲಿ ಗುರಿ ತಲುಪಿಸಿದ್ದಾರೆ. ಈ ವೇಗವನ್ನು100 ಮೀಟರ್ ಗೆ ಹೋಲಿಸಿದಾಗ ಇವರು 8.96 ಸೆಕೆಂಡ್ ನಲ್ಲಿ ಗುರಿ ಮುಟ್ಟಿದಂತಾಗುತ್ತದೆ. 2020 ರಲ್ಲಿ ಮಿಜಾರ್ ಅಶ್ವತ್ಥ ಪುರ ಶ್ರೀನಿವಾಸ ಗೌಡ ಅವರು 9.55 ಸೆಕೆಂಡ್ ನಲ್ಲಿ ಗುರಿ ತಲುಪಿ ದಾಖಲೆಗೈದಿದ್ದರು. ಅದನ್ನು ಅಕ್ಕೇರಿ ಸುರೇಶ್ ಶೆಟ್ಟಿ ಇರ್ವತ್ತೂರು ಆನಂದ ಇವರ ದಾಖಲೆಗಳನ್ನು ಕ್ರಮವಾಗಿ ಮುರಿದಿದ್ದರು. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಬಜಗೋಳಿ ನಿಶಾಂತ್ ಶೆಟ್ಟಿ 9.19 ಸೆಕೆಂಡ್ ನಲ್ಲಿ ದಾಖಲೆ ಮಾಡಿದ್ದರು. ಇದೀಗ ಮತ್ತೆ ಮಿಜಾರ್ ಶ್ರೀನಿವಾಸ ಗೌಡ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಕಂಬಳ‌ ಓಟಗಾರರನ್ನು ಗುರುತಿಸಿ ಅವರಿಗೆ ತರಬೇತಿ ನೀಡಬೇಕು ‌ಎನ್ನುವ ವಿಚಾರ ಮತ್ತೆ ಮುನ್ನೆಲೆಗೆ‌‌ ಬರುವ ಸೂಚನೆ ಲಭಿಸಿದೆ. ಸಾಧನೆ ಮೆರೆದ ಕಂಬಳ ಓಟಗಾರ ಶ್ರೀನಿವಾಸಗೌಡ ಅವರಿಗೆ ‘ಪ್ರಜಾ ಪ್ರಕಾಶ ನ್ಯೂಸ್’ ತಂಡದ ಶುಭಾಶಯಗಳು.

error: Content is protected !!