ವಿದ್ಯುತ್ ವ್ಯತ್ಯಯದಿಂದ ವಿದ್ಯಾರ್ಥಿಗಳು, ರೈತರು ಕಂಗಾಲು: ಬೆಳ್ತಂಗಡಿ ಮೆಸ್ಕಾಂ ಇಲಾಖೆ ಕಚೇರಿ ಮುಂಭಾಗ ಮಾಜಿ‌ ಶಾಸಕ ವಸಂತ ಬಂಗೇರ ಆಕ್ರೋಶ: ನಗರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಸಮರ್ಪಕ ವಿದ್ಯುತ್ ಪೂರೈಕೆ, ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ಕೇಂದ್ರ ಹಾಗೂ ರಾಜ್ಯ ಸರಕಾರ ರೈತರನ್ನು ಮತ್ತು ಜನಸಾಮಾನ್ಯರನ್ನು ಕತ್ತಲೆಯಲ್ಲಿ ಹಾಕಿ ಅನ್ಯಾಯ ಮಾಡುತ್ತಿದ್ದು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ತೊಂದರೆ ಅನುಭವಿಸುತ್ತಿದ್ದು 15 ದಿನದೊಳಗೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸದಿದ್ದಲ್ಲಿ ಬೃಹತ್ ಮಟ್ಟದಲ್ಲಿ ಕೃಷಿಕರನ್ನು ಸೇರಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಬುಧವಾರ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಳ್ತಂಗಡಿ ಮೆಸ್ಕಾಂ ಇಲಾಖೆಯ ಮುಂಭಾಗದಲ್ಲಿ

ಅಸಮರ್ಪಕ ವಿದ್ಯುತ್ ವ್ಯವಸ್ಥೆ ಹಾಗೂ ಪೆಟ್ರೋಲ್, ಗ್ಯಾಸ್ ಮತ್ತು ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ರೈತರಿಗೆ, ಬಡ ಕುಟುಂಬಗಳಿಗೆ ವಿದ್ಯುತ್ ನೀಡಬೇಕು. ಇದರಲ್ಲಿ ರಾಜಕೀಯ ಸಲ್ಲದು ಎಂದರು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ, ತಾಲೂಕಿನ ಕಡಿರುದ್ಯಾವರ, ಕಿಲ್ಲೂರು, ಮುಂತಾದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಅಧಿಕವಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಸರಕಾರ ಸ್ಪಂದಿಸಿ ರೈತರ ನೆರವಿಗೆ ಬರಬೇಕು. ಇಲ್ಲವಾದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಜಿ.ಪಂ ಸದಸ್ಯ ಶಾಹುಲ್ ಹಮೀದ್, ಪಕ್ಷದ ಮುಖಂಡರಾದ ಮೋಹನ್ ಕಲ್ಮಂಜ, ಜಗದೀಶ್ ಮಾತನಾಡಿದರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಪ.ಪಂ. ಸದಸ್ಯ ಜಗದೀಶ್ ಡಿ., ಪಕ್ಷದ ಮುಖಂಡರಾದ ಮನೋಹರ್ ಕುಮಾರ್ ಎ., ನಾಗರಾಜ್ ಲಾಯಿಲ, ಜಯವಿಕ್ರಮ, ಮೆಹಬೂಬ್, ಅಬ್ದುಲ್ ರೆಹಮಾನ್ ಪಡ್ಪು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

error: Content is protected !!