ಧರ್ಮಸ್ಥಳವನ್ನು ಮಾದರಿ ಗ್ರಾಮವನ್ನಾಗಿಸಲು ಪ್ರಯತ್ನಿಸಿ,ಡಾ. ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಗ್ರಾಮ ಪಂಚಾಯಿತಿ ಪ್ರತಿಯೊಬ್ಬ ಚುನಾಯಿತ ಸದಸ್ಯರೂ ಅವರ ಕ್ಷೇತ್ರದ ಜನ ಸಾಮಾನ್ಯರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ಸರ್ಕಾರದ ವಿವಿಧ ಇಲಾಖೆಗಳ ಮೂಲಕ ದೊರಕುವ ಯೋಜನೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಜನರಿಗೆ ತಿಳಿಸಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಎಲ್ಲರೂ ಒಮ್ಮತದಿಂದ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಕೆಲಸ ಮಾಡಿ, ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆಯೊಂದಿಗೆ ಗೌರವಯುತ ಜೀವನ ನಡೆಸುವಂತೆ ಚುನಾಯಿತ ಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.

ಅಧಿಕಾರ ವಿಕೇಂದ್ರೀಕರಣದ ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಹಾಗೂ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆ, ಬ್ಯಾಂಕ್‍ಗಳು ಹಾಗೂ ಸಹಕಾರಿ ಸಂಘಗಳ ಮೂಲಕ ಕಡಿಮೆ ಬಡ್ಡಿ ಹಾಗೂ ಶೂನ್ಯ ಬಡ್ಡಿಯಲ್ಲಿ ಸಾಲ, ವಿಮಾ ಸೌಲಭ್ಯ, ಕುಡಿಯುವ ನೀರು ಪೂರೈಕೆ, ನಿವೇಶನ ವಿತರಣೆ ಮೊದಲಾದ ಅನೇಕ ಉಪಯುಕ್ತ ಯೋಜನೆಗಳಿವೆ. ಇವುಗಳ ಬಗ್ಗೆ ಅಧಿಕೃತ ಮಾಹಿತಿ ಕಲೆ ಹಾಕಿ ಜನಸಾಮಾನ್ಯರಿಗೆ ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 9,830 ಫಲಾನುಭವಿಗಳು ಸ್ಪರ್ಧಿಸಿದ್ದು, 6,162 ಮಂದಿ ಆಯ್ಕೆಯಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

25 ಲಕ್ಷ ರೂ. ನೆರವು: ದೇವಸ್ಥಾನದ ವತಿಯಿಂದ ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಸದಸ್ಯರೊಬ್ಬರಿಗೆ ತಲಾ ಒಂದು ಲಕ್ಷದಂತೆ 5 ವರ್ಷದ ಅವಧಿಗೆ 25 ಲಕ್ಷ ರೂ. ನೆರವು ನೀಡುವುದಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಸದಸ್ಯರು ಅವಶ್ಯಕತೆಗಳನ್ನು ಗಮನಿಸಿ, ನೆರವಿನ ಸದುಪಯೋಗ ಮಾಡಬೇಕು ಎಂದು ಸಲಹೆ ನೀಡಿದರು.

ಒಳ್ಳೆಯ ಯೋಚನೆ ಹಾಗೂ ಯೋಜನೆಗಳೊಂದಿಗೆ ಧರ್ಮಸ್ಥಳವನ್ನು ಮಾದರಿ ಗ್ರಾಮವಾಗಿ ರೂಪಿಸಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.

ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯ ಮೋನಪ್ಪ ಗೌಡ ಮಾತನಾಡಿ, ಸ್ವ-ಸಹಾಯ ಸಂಘದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವದಿಂದ ತನಗೆ ಅಧ್ಯಕ್ಷ ಸ್ಥಾನ ದೊರಕಿದ್ದು ಗ್ರಾಮದ ಸರ್ವತೋಮುಖ ಪ್ರಗತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿ, ಧರ್ಮಸ್ಥಳದಲ್ಲಿ ಪ್ರವಾಸಿ ಮಂದಿರ, ವೃದ್ಧಾಶ್ರಮ, ನಿವೇಶನ ರಹಿತರಿಗೆ ನಿವೇಶನ ವಿತರಣೆ, ಅಲೆಮಾರಿಗಳಿಗೆ ವಸತಿ ವ್ಯವಸ್ಥೆ ಬಗ್ಗೆ ಸೂಕ್ತ ಕಾರ್ಯಕ್ರಮ ರೂಪಿಸಲಾಗುವುದು. ಯಾತ್ರಿಕರು ಹಾಗೂ ಸ್ಥಳೀಯ ನಿವಾಸಿಗಳಿಗೆ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುವುದು ಎಂದು ಭರವಸೆ ನೀಡಿದರು. ಧರ್ಮಸ್ಥಳವನ್ನು ವ್ಯಸನಮುಕ್ತ ಹಾಗೂ ತ್ಯಾಜ್ಯ ಮುಕ್ತ ಗ್ರಾಮವಾಗಿ ರೂಪಿಸುವುದಾಗಿ ಅವರು ದೃಢ ಸಂಕಲ್ಪ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿನ 25 ಮಂದಿ ಸದಸ್ಯರನ್ನೂ ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಜಮಾ ಉಗ್ರಾಣದ ಮುತ್ಸದ್ಧಿ ಬಿ. ಭುಜಬಲಿ ಸ್ವಾಗತಿಸಿದರು

ವಕೀಲ ರತ್ನವರ್ಮ ಬುಣ್ಣು, ಕೆ. ಮಹಾವೀರ ಅಜ್ರಿ, ಶುಭಶ್ಚಂದ್ರರಾಜ್, ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಧನ್ಯವಾದವಿತ್ತರು.

error: Content is protected !!