ಉಜಿರೆ: ಬೆಳ್ತಂಗಡಿ ತಾಲೂಕಿನಲ್ಲಿ ಉಂಟಾದ ನೆರೆ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಅಶಕ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚುತ್ತಿರುವ ಉಜಿರೆ ಜನಾರ್ಧನ ಸ್ವಾಮಿ ಸೇವಾ ಸಮಿತಿ ‘ಬದುಕು ಕಟ್ಟೋಣ ಬನ್ನಿ’ ತಂಡದ ನೇತೃತ್ವದಲ್ಲಿ ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಮಂಗಳೂರು, ಎ.ಜೆ. ಹಾಸ್ಪಿಟಲ್ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ನೆರೆ, ಕೋವಿಡ್ ನಿಂದ ನಲುಗಿರುವ ಸಂದರ್ಭದಲ್ಲಿ ಜನರಿಗೆ ಅವರ ಜೀವನಕ್ಕೆ ವಿಶ್ವಾಸ ತುಂಬುವ ಮೂಲಕ ಸೇವೆ ನಮ್ಮದು, ಬದುಕು ನಿಮ್ಮದು ಧ್ಯೇಯ ವಾಕ್ಯದಂತೆ ಕೆಲಸವನ್ನು ಮಾಡಿದ ಮೋಹನ ಕುಮಾರ್ ರಾಜೇಶ್ ಪೈ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡ ಇದೀಗ ಬೃಹತ್ ರಕ್ತದಾನ ಮಾಡುವ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೋಹನ್ ಉಜಿರೆ, ಈಗಾಗಲೇ ಕೃಷಿ, ಸ್ವಚ್ಛತೆ, ಹಾಗೂ ಇನ್ನಿತರ ಸಮಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಬದುಕು ನಿಮ್ಮದು ಸೇವೆ ನಮ್ಮದು ಎಂಬ ಧ್ಯೇಯದಡಿ ಒಂದಷ್ಟು ಯುವಕರನ್ನು ಒಟ್ಟುಗೂಡಿಸಿಕೊಂಡು ರಚಿತವಾದ ಈ ತಂಡ ರಕ್ತದಾನ ಮಾಡುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡುವ ಉದ್ದೇಶದಿಂದ ಈ ದಿನ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ .ಅದಲ್ಲದೆ ರಕ್ತದಾನ ಮಾಡಿದ ಪ್ರತಿಯೊಬ್ಬರನ್ನೂ ಗೌರವಿಸುತ್ತಿದ್ದೇವೆ ಅವರು ಇನ್ನೂ ಮುಂದೆಯೂ ರಕ್ತದಾನ ಮಾಡಲು ಮುಂದೆ ಬರಬೇಕು ಅಲ್ಲದೆ ಸಮಾಜದ ಇತರರಿಗೂ ಪ್ರೇರಣೆ ಆಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಕಳೆದ ನೆರೆ ಸಂದರ್ಭದಲ್ಲಿ ತಾಲೂಕಿನ ಯುವಕರ ತಂಡವನ್ನು ರಚಿಸಿಕೊಂಡು ನೆರೆಯಲ್ಲಿ ಸಂಕಷ್ಟಕ್ಕೊಳಗಾದವರಿಗೆ ನೆರವಿನ ಹಸ್ತ ನೀಡಿ ಅವರ ಬಾಳಿನಲ್ಲಿ ಭರವಸೆಯನ್ನು ಮೂಡಿಸಿದ್ದ ಬದುಕು ಕಟ್ಟೋಣ ಬನ್ನಿ ತಂಡ ರಕ್ತದಾನ ಎಂಬ ಸಂಕಲ್ಪದಡಿ ಈ ಕಾರ್ಯಕ್ರಮ ಆಯೋಜಿಸಿರುವುದು ಎಲ್ಲ ಸಂಘ ಸಂಸ್ಥೆಗಳಿಗೂ ಮಾದರಿ ಎಂದರು.
ಪ್ರಸಿದ್ಧ ತುಳು ಚಲನ ಚಿತ್ರ ಕಲಾವಿದ ಅರವಿಂದ ಬೋಳಾರ್ ಮಾತನಾಡಿ ದಾನಗಳಲ್ಲಿ ಮಹಾದಾನ ರಕ್ತದಾನ. ರಕ್ತವನ್ನು ಒಬ್ಬನ ದೇಹದಿಂದ ಮಾತ್ರ ಪಡೆಯಲು ಸಾಧ್ಯವೇ ಹೊರತು ಅದನ್ನು ಬೇರೆ ಎಲ್ಲಿಂದಲೋ ಸಾಧ್ಯವಿಲ್ಲ ಅದ್ದರಿಂದ ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳುವ ಮೂಲಕ ಉತ್ತಮವಾದ ರಕ್ತವನ್ನು ಇನ್ನೊಬ್ಬರಿಗೆ ನೀಡಬೇಕು. ಜನರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆ ಇದೆ ಅದನ್ನು ಹೋಗಲಾಡಿಸಿ ಇನ್ನಷ್ಟು ಯುವಕರು ರಕ್ತದಾನ ಮಾಡುವಂತಾಗಬೇಕು ರಕ್ತದಾನದಿಂದ ಆರೋಗ್ಯ ವೃದ್ದಿಸುತ್ತದೆ ಹೊರತು ಹಾನಿಯಿಲ್ಲ ಎಂದರು.
ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಮಾತನಾಡಿ ಉಜಿರೆಯಲ್ಲಿ ಕಳೆದ ಎರಡು ವರುಷಗಳ ಹಿಂದೆ ಪ್ರಾರಂಭವಾದ ಈ ತಂಡ ಈಗಾಗಲೇ ಹಲವು ಸೇವಾ ಯೋಜನೆಗಳನ್ನು ಶಿಸ್ತು ಬದ್ದವಾಗಿ ಆಯೋಜಿಸಿ ಜನಮೆಚ್ಚುಗೆ ಗಳಿಸಿ ಇದೀಗ ಇಂತಹ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ ರಾವ್ ವಹಿಸಿದ್ದರು.ವೇದಿಕೆಯಲ್ಲಿ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಷಾ ಆರ್ ಶೆಟ್ಟಿ, ರಾಜೇಶ್ ಪೈ , ಉಪಸ್ಥಿತರಿದ್ದರು ತಿಮ್ಮಯ್ಯ ನಾಯ್ಕ ಕಾರ್ಯ ಕ್ರಮ ನಿರ್ವಹಿಸಿದರು. ಶಾಸಕ ಹರೀಶ್ ಪೂಂಜ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ರಕ್ತದಾನಿಗಳನ್ನು ಅಭಿನಂದಿಸಿದರು.
ಈ ಬೃಹತ ರಕ್ತದಾನ ಶಿಬಿರದಲ್ಲಿ ಸುಮಾರು 15 ಸಂಘ ಸಂಸ್ಥೆಗಳ ಕಾರ್ಯಕರ್ತರ ನೆರವಿನಿಂದ 310 ಯುನಿಟ್ ರಕ್ತ ಸಂಗ್ರಹವಾಯಿತು.