ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದಲ್ಲಿ ಶಿವರಾತ್ರಿ ಪ್ರಯುಕ್ತ ಗುರುವಾರ ರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಬಳಿಕ ಶುಕ್ರವಾರ ಮುಂಜಾನೆ ರಥೋತ್ಸವ ನಡೆಯಿತು.
ಧರ್ಮಾಧಿಕಾರಿ ಡಾ. ಡಿ. ಧೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಗುರುವಾರ ಸಂಜೆ ಗಂಟೆ 6 ರಿಂದ ಶುಕ್ರವಾರ ಬೆಳಗ್ಗಿನ ಜಾವದವರೆಗೆ ನಾಲ್ಕು ಜಾವಗಳಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಭಕ್ತರಿಂದ ಅಭಿಷೇಕ ಸೇವೆ ನಡೆಯಿತು. ವಿಶೇಷ ಪೂಜೆ, ಅರ್ಚನೆಗಳ ಬಳಿಕ ರಥೋತ್ಸವ ನಡೆಯಿತು.
ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆವರೆಗೆ ಶಿವಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಿತು. ಶಂಖ, ಜಾಗಟೆ, ಕೊಂಬು, ಕಹಳೆ, ವೀರಗಾಸೆ, ಕರಗ, ಡೊಳ್ಳು ಕುಣಿತ ಮೊದಲಾದ ಜಾನಪದ ಕಲಾವಿದರು ರಾತ್ರಿಯಿಡಿ ನಾದಪ್ರಿಯ ಶಿವನಿಗೆ ಕಲಾಸೇವೆ ನಡೆಸಿದರು.
ನಾಡಿನೆಲ್ಲೆಡೆಯಿಂದ ಆಗಮಿಸಿದ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಹೊಂದಿದರು.