ಪಾದಯಾತ್ರೆಯಿಂದ ಜೀವನಯಾತ್ರೆ ಸುಗಮ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದಲ್ಲಿ ಅಹೋರಾತ್ರಿ ಜಾಗರಣೆ, ಶಿವ ಪಂಚಾಕ್ಷರಿ ಪಠಣಕ್ಕೆ ಚಾಲನೆ

 

ಬೆಳ್ತಂಗಡಿ: ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ಇರುತ್ತದೆ. ಪಾದಯಾತ್ರೆಯಿಂದ ದೋಷಗಳ ನಿವಾರಣೆಯಾಗಿ, ಮಾನಸಿಕ ಪರಿವರ್ತನೆಯೊಂದಿಗೆ ಜೀವನಯಾತ್ರೆ ಸುಗಮವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭ ಅಹೋ ರಾತ್ರಿ ಜಾಗರಣೆ ಹಾಗೂ ಶಿವ ಪಂಚಾಕ್ಷರಿ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿವನಾಮ ಸ್ಮರಣೆಯಿಂದ ಸರ್ವ ದೋಷಗಳ ನಿವಾರಣೆಯಾಗುತ್ತದೆ.

ಉತ್ತಮವಾದ ಸಾತ್ವಿಕ ಆಹಾರ ಸೇವನೆಯೊಂದಿಗೆ ದೇಹದ ರಕ್ಷಣೆ ಮಾಡಬೇಕು. ದೇಹಕ್ಕೆ ಜೀವವೇ ಚೈತನ್ಯ. ದೃಢ ಸಂಕಲ್ಪದೊಂದಿಗೆ, ವ್ರತ-ನಿಯಮಗಳ ಪಾಲನೆಯೊಂದಿಗೆ, ಬದ್ಧತೆಯಿಂದ ದೇಹ ದಂಡನೆಯೊಂದಿಗೆ ಪಾದಯಾತ್ರೆ ಮಾಡಿದಾಗ ನಮ್ಮ ವಿಷಯಾಸಕ್ತಿ ಕಡಿಮೆಯಾಗಿ ದೋಷಗಳ ನಿವಾರಣೆಯಾಗುತ್ತದೆ. ನಾವು ಗುಣಗ್ರಾಹಿಗಳಾಗಿ ಸನ್ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ. ಶಿವನು ಇಂದ್ರಿಯಗಳ ಅಧಿಪತಿ. ವಿಷಕಂಠನಾದುದರಿಂದ ಭಕ್ತರ ಎಲ್ಲಾ ದೋಷಗಳನ್ನು ಸ್ವೀಕರಿಸಿ ಲೋಕಕ್ಕೆ ಮಂಗಳವನ್ನುಂಟುಮಾಡುವ ದೇವರು ಕಣ್ಣಿನ ರೆಪ್ಪೆ ಕಣ್ಣಿನ ರಕ್ಷಣೆ ಮಾಡುವಂತೆ ನಮಗೆ ಅರಿವಿಲ್ಲದೆ ದೇವರು ಭಕ್ತರ ರಕ್ಷಣೆಯನ್ನು ಮಾಡುತ್ತಾನೆ ಎಂದರು.

ಮೊಬೈಲ್ ದೂರವಿಡಿ:
ಇಂದು ಮೊಬೈಲ್ ‌ವ್ಯಸನದಂತೆ ಆಗಿದೆ. ಅದರಿಂದಾಗಿ‌ ಅಪಾಯಗಳೂ ಉಂಟಾಗುತ್ತಿವೆ. ಮುಖ್ಯವಾಗಿ ಏಕಾಗ್ರತೆಯನ್ನು ಕೆಡಿಸುವುದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಶಿವರಾತ್ರಿಯಂದು ಮೊಬೈಲ್ ಫೋನ್ ಬಳಸದೆ ಪ್ರಯತ್ನ ಮಾಡಬಹುದು. ಅದೇ ರೀತಿ ವಾರದಲ್ಲಿ ಒಂದು ದಿನವಾದರೂ ಮೊಬೈಲ್ ಫೋನ್ ಬಳಕೆ ನಿಷೇಧಿಸಲು ಪ್ರಯತ್ನಿಸಿ, ಬದಲಾವಣೆ ಗುರುತಿಸಬೇಕು ಎಂದು ಸಲಹೆ ನೀಡಿದರು.

ಅಹೋ ರಾತ್ರಿ ನಾಲ್ಕು ಜಾವಗಳಲ್ಲಿ ಭಕ್ತರು ಅಭಿಷೇಕ ಸೇವೆ ಮಾಡಿ ಧನ್ಯತೆಯನ್ನು ಹೊಂದಿದರು.ಸುಮಾರು 30 ಸಾವಿರಕ್ಕಿಂತಲೂ ಅಧಿಕ ಭಕ್ತರು ರಾಜ್ಯದ ವಿವಿಧೆಡೆಯಿಂದ ಪಾದಯಾತ್ರೆಗಳ ಮೂಲಕ ಆಗಮಿಸಿದರು ಅವರಿಗೆ ಶ್ರೀ ಕ್ಷೇತ್ರದ ವತಿಯಿಂದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗಿತ್ತು .ಭಕ್ತಾಧಿಗಳು ಬೆಳಗ್ಗಿನವರೆಗೆ ಶಿವನಾಮ ಸ್ಮರಣೆ ಮಾಡುತ್ತ ಜಾಗರಣೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಮಾಣಿಲದ ಮೋಹನದಾಸ ಸ್ವಾಮೀಜಿ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಉಪಸ್ಥಿತರಿದ್ದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!