ಬೆಳ್ತಂಗಡಿ: ಯಾರದೋ ಗುಲಾಮರಾಗಿ ಯಾರದೋ ಅಸ್ತ್ರವಾಗಿ ಈ ಬದುಕನ್ನು ವ್ಯರ್ಥಗೊಳಿಸಬಾರದು. ಜ್ಞಾನದ ಚಿಂತನೆಯಿಲ್ಲದೆ ಬಡವರಾಗಿದ್ದೇವೆ. ಜ್ಞಾನದ ತವಕ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ ಎಂದು ಶ್ರೀ ಕ್ಷೇತ್ರ ಬಲ್ಯೊಟ್ಟುವಿನ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಶಿಕ್ಷಣ, ಉದ್ಯೋಗ, ಸೇವೆ ಎಂಬ ಸಂಕಲ್ಪದೊಂದಿಗೆ ನಾರಾವಿಯ ಸನ್ನಿಧಿ ಪ್ಯಾಲೇಸ್ ಡೊಂಕಬೆಟ್ಟುವಿನಲ್ಲಿ ಆರಂಭವಾದ ಬಿರ್ವ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಟ್ರಸ್ಟ್ ಲೋಗೋ ಅನಾವರಣ ಮಾಡುವುದರ ಮೂಲಕ ಟ್ರಸ್ಟ್ ನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. 44 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ವಿದ್ಯಾದಾನದ ಮಹತ್ತರವಾದ ಕೆಲಸ ಹಮ್ಮಿಕೊಂಡಿರುವ ಟ್ರಸ್ಟ್‌ನ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಶಾಸಕ ಹರೀಶ್ ಪೂಂಜ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾದಾನದಂತಹ ಟ್ರಸ್ಟ್‌ನ ಈ ಕಾರ್ಯ ಇತಿಹಾಸದ ಪುಟಗಳ ಒಳ್ಳೆಯ ಕೆಲಸಗಳಲ್ಲಿ ಒಂದು. ಈ ಟ್ರಸ್ಟ್‌ನ ಸೇವಾ ಕಾರ್ಯಗಳಿಗೆ ರೂ. 1 ಲಕ್ಷವನ್ನು ಪ್ರಾರಂಭಿಕವಾಗಿ ನೀಡಲಾಗುವುದು ಎಂದರು.
ಸಾಧಕರನ್ನು ಹಾಗೂ ವಿದ್ಯಾರ್ಥಿಗಳನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ಗೌರವಿಸಿ ಮಾತನಾಡಿ, ಬಿರ್ವ ಚಾರಿಟೇಬಲ್ ಟ್ರಸ್ಟ್ ಸದಸ್ಯರಲ್ಲಿ ಅವರ ಮನೆಯ ವಿಚಾರಕ್ಕಿಂತ ಹೆಚ್ಚಾಗಿ ಸಮಾಜದ ಬಡವರ ಬಗ್ಗೆ ಕಾಳಜಿ ಇದೆ. ಟ್ರಸ್ಟ್‌ನ ಪ್ರಯೋಜನ ಪಡೆದುಕೊಂಡ ವಿದ್ಯಾರ್ಥಿಗಳು ತಾವು ಉನ್ನತ ಹಂತಕ್ಕೆ ತಲುಪಿದಾಗ ಟ್ರಸ್ಟ್ ಗೆ ತನ್ನಿಂದಾದ ನೆರವನ್ನು ಕೊಡುವಂತಾಗಬೇಕು. ಪ್ರತಿಯೊಬ್ಬರೂ ಟ್ರಸ್ಟ್‌ನ ನಿಬಂಧನೆಗಳನ್ನು ಪಾಲಿಸಬೇಕು ಎಂದರು.
ಬಿರ್ವ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ವೀರಮ್ಮ ಸಂಜೀವ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಧರಣೇಂದ್ರ ಕುಮಾರ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಬಿ.ಸುವರ್ಣ, ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಹೈಕೋರ್ಟ್ ವಕೀಲ ರಕ್ಷಿತ್ ಶಿವರಾಂ, ಬೆಳ್ತಂಗಡಿ ವಕೀಲ ಮನೋಹರ್ ಕುಮಾರ್ ಇಳಂತಿಲ, ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾಲತ, ನಾರಾವಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ವೇಣೂರು ಯುವವಾಹಿನಿ ಅಧ್ಯಕ್ಷ ಅರುಣ್ ಕೋಟ್ಯಾನ್, ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಕ್ಷಿತಾ ಇದ್ದರು.
ಕ್ರೀಡಾರತ್ನ ಪ್ರಶಸ್ತಿ ವಿಜೇತ ಯುವರಾಜ ಜೈನ್, ನಿವೃತ್ತ ಯೋಧ ಸುನೀಲ್ ರಾಜ್, ವಿಕಲಚೇತನ ಸಾಧಕ ಸುಶಾಂತ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಪ್ರಬಂಧ, ಭಾಷಣ, ಬಲಿಯೇಂದ್ರ ಲೆಪ್ಪೋಲೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಟ್ರಸ್ಟ್ ಮೂಲಕ ಶಿಕ್ಷಣ ಪಡೆಯಲು ಆಯ್ಕೆಯಾದ 44 ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ಹಾಗೂ ಬರೆಯುವ ಪುಸ್ತಕ ನೀಡಿ ಅಭಿನಂದಿಸಲಾಯಿತು. ವೇಣೂರು ಯುವವಾಹಿನಿ ಘಟಕದಿಂದ ಟ್ರಸ್ಟ್‌ನ ಅಧ್ಯಕ್ಷೆ ವೀರಮ್ಮ ಸಂಜೀವ ಸಾಲಿಯಾನ್ ಹಾಗೂ ಸದಸ್ಯರನ್ನು ಗೌರವಿಸಲಾಯಿತು.
ಉಪನ್ಯಾಸಕ ರಾಕೇಶ್ ಮೂಡಕೋಡಿ ಸ್ವಾಗತಿಸಿದರು. ಗಣೇಶ್ ಪೂಜಾರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಜ್ಞಾ ಓಡಿಲ್ನಾಳ ಹಾಗೂ ರಾಜೇಂದ್ರ ಕೋಟ್ಯಾನ್ ನಿರೂಪಿಸಿದರು. ವಕೀಲ ಸತೀಶ್ ಪಿ.ಎನ್. ವಂದಿಸಿದರು.