ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತ್ ವ್ಯವಸ್ಥಿತವಾಗಿ ಸ್ವಚ್ಛತಾ ಯೋಜನೆ ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಸ್ವಚ್ಛ ಭಾರತದ ಪರಿಕಲ್ಪನೆ ಹೊಂದಿದ್ದರು. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಮಹತ್ವ ಅರಿತು, ಹಳ್ಳಿ- ಹಳ್ಳಿಗಳಲ್ಲಿ ಸ್ವಚ್ಚತೆ ಜಾಗೃತಿ ಬೆಳೆಯಬೇಕು ಎಂಬುದಾಗಿ ಕರೆ ನೀಡಿದ್ದರು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶನಿವಾರ ಹಚ್ಚಾಡಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ಬಳಿ ನಡೆದ ಪಡಂಗಡಿ ಗ್ರಾಮ ಪಂಚಾಯತ್‌ನ ತ್ಯಾಜ್ಯ ವಿಂಗಡಣೆ ಜಾಗೃತಿ ಮೂಡಿಸುವ ವಿಶೇಷ ಆಂದೋಲನದ ಸಮಾರೋಪ ಕಾರ್ಯಕ್ರಮ ಹಾಗೂ ಸ್ವಚ್ಛ ಸಂಕೀರ್ಣ ಘಟಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಕಡೆಗಳಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಬೇಡಿಕೆ ಬರುವಂತಹ ಸಮಯದಲ್ಲೂ ಸ್ವಚ್ಚತಾ ಅಭಿಯಾನಕ್ಕೂ ಬೇಡಿಕೆ ಬರುತ್ತಿರುವುದು ಸ್ವಸ್ಥ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಲ್ಲಿ ಏಳುನೂರು ಕೋಟಿ ರೂ.ಗೂ ಅಧಿಕ ಅನುದಾನವನ್ನು ಮಂಜೂರುಗೊಳಿಸಿದ್ದು, ತಾಲೂಕಿನ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು ಎಂದರು.
ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ಪರಿಸರ ಸ್ವಚ್ಚ ಮಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುತ್ತಿರುವುದು ಅಭಿನಂದನೀಯ. ಇದರ ಜೊತೆಗೆ ಸಂಬಂದಪಟ್ಟ ಇಲಾಖೆಗಳು ಸ್ವಚ್ಚತಾ ಸಿಬ್ಬಂದಿಗಳಿಗೆ ಸೂಕ್ತ ವೇತನ ಮತ್ತು ಆರೋಗ್ಯ ಭದ್ರತೆಯನ್ನು ನಿಡಬೇಕು ಎಂದರು.
ಧ.ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ, ಪಂಚಾಯಿತಿ ಮಟ್ಟದಲ್ಲಿ ಸ್ವಚ್ಚತಾ ಆಂದೋಲನ ನಡೆಯುತ್ತಿರುವುದು ಅಭಿನಂದನೀಯ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ೩೮ ವರ್ಷಗಳಿಂದ ಯೋಜನೆಯ ಮೂಲಕ ಸ್ವಚ್ಚತೆಗೆ ಪ್ರಾಧಾನ್ಯತೆ ನೀಡುತ್ತಿದ್ದು ಇದೀಗ ಪಂಚಾಯಿತಿ ಮಟ್ಟದಲ್ಲಿ ಆಗುತ್ತಿರುವ ಸ್ವಚ್ಚತಾ ಕಾರ್ಯಕ್ರಮಕ್ಕೆ ಯೋಜನೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಸುಶೀಲ, ಕನ್ನಡಿಕಟ್ಟೆ ಮೊಹಿಯುದ್ದೀನ್ ಜುಮಾ ಮಸೀದಿಯ ಧರ್ಮಗುರು ಸಂಶುದ್ದೀನ್ ದಾರಿಮಿ, ಶಂಕರ ಶೆಟ್ಟಿ ಗರ್ಡಾಡಿ, ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ನಿತ್ಯಾನಂದ ಶೆಟ್ಟಿ ಪದೆಂಜಿಲ, ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಯಶವಂತ್, ಪಡಂಗಡಿ ಗ್ರಾ.ಪಂ ಉಪಾಧ್ಯಕ್ಷೆ ಕವಿತಾ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ವತಿಯಿಂದ 18 ಮಂದಿ ವಿಶೇಷ ಚೇತನರಿಗೆ ವಿವಿಧ ಸೌಲಭ್ಯಗಳನ್ನು ಶಾಸಕ ಹರೀಶ್ ಪೂಂಜಾ ವಿತರಿಸಿದರು. ತ್ಯಾಜ್ಯ ಸಂಗ್ರಹಕ್ಕೆ ಕಸದಬುಟ್ಟಿ ಹಾಗೂ ಗೋಣಿಚೀಲಗಳನ್ನು ವಿತರಿಸಲಾಯಿತು. ಸ್ವಚ್ಚತಾ ಮಾಹಿತಿ ಕುರಿತ ಕರಪತ್ರ ಬಿಡುಗಡೆಗೊಳಿಸಲಾಯಿತು. ಗ್ರಾಮದಲ್ಲಿ ಕಸ ಸಂಗ್ರಹಿಸುವ ಸ್ವಚ್ಚತಾ ವಾಹನಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಚ ಭಾರತ್ ಮಿಷನ್(ಗ್ರಾ) ದ.ಕ.ಜಿ.ಪಂ. ಉಪಕಾರ್ಯದರ್ಶಿ, ನೋಡೆಲ್ ಅಧಿಕಾರಿ ಕೆ. ಆನಂದ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಸದಸ್ಯ ಸಂತೋಷ್ ಕುಮಾರ್ ಜೈನ್ ಪಂಚಾಯಿತಿನ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ತಾ.ಪಂ. ಇಒ ಕುಸುಮಾಧರ್ ಸ್ವಾಗತಿಸಿದರು. ತಾ.ಪಂ ಸಂಯೋಜಕ ಜಯನಂದ ಲಾಯಿಲಾ ನಿರೂಪಿಸಿ, ಪಿಡಿಒ ಸಫನಾ ವಂದಿಸಿದರು.