ಧರ್ಮಸ್ಥಳ: ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳ ಗಡಣ ಆಗಮಿಸುತ್ತಿದ್ದು, ಭಕ್ತರ ಸ್ವಾಗತಿಸಲು ಧರ್ಮಸ್ಥಳ ಸಜ್ಜುಗೊಂಡಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮುಖ್ಯ ಪ್ರವೇಶ ದ್ವಾರ ಬಳಿ ಸ್ವಾಗತ ಕಚೇರಿ ರಚಿಸಿದ್ದು, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿದರು.
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಮಾಹಿತಿ ಕೇಂದ್ರ, ಸುಸಜಿತ ಪ್ರಥಮ ಚಿಕಿತ್ಸಾ ಆಸ್ಪತ್ರೆ, ಕೆ.ಎಸ್. ಆರ್.ಟಿ.ಸಿ. ಸಾರಿಗೆ ನಿಯಂತ್ರಕರ ಕಚೇರಿ, ಪೊಲೀಸ್ ಸೇವಾ ಕೇಂದ್ರ ತೆರೆಯಲಾಗಿದೆ. ಭಕ್ತರಿಗೆ ಹಾಗೂ ಪಾದಯಾತ್ರಿಗಳಿಗೆ ಉಚಿತ ಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ಸಕಲ ವ್ಯವಸ್ಥೆ:
ಧರ್ಮಸ್ಥಳದಲ್ಲಿರುವ ವಸತಿ ಛತ್ರಗಳಲ್ಲಿ ಪಾದಯಾತ್ರಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಮಾ. 10 ರಂದು ಉಜಿರೆಯಲ್ಲಿರುವ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಪಾದಯಾತ್ರಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಬೂಡುಜಾಲು, ಸತ್ಯನಪಲ್ಕೆ, ಚಾರ್ಮಾಡಿ, ಉಜಿರೆ ಮತ್ತು ಧರ್ಮಸ್ಥಳದಲ್ಲಿ ಎಸ್.ಡಿ.ಎಂ. ಆಸ್ಪತ್ರೆಯ ಉಚಿತ ಸೇವಾ ಕೇಂದ್ರ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಅಂಬುಲೆನ್ಸ್ ಸೇವೆ ಲಭ್ಯವಿದೆ.
ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಹಾಸನದ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.
ಕ್ಷೇತ್ರಕ್ಕೆ ಆಗಮಿಸುತ್ತಿರುವ ಪಾದಯಾತ್ರಿಗಳು:
ಬೆಂಗಳೂರು, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಧರ್ಮಸ್ಥಳ ಪಾದಯಾತ್ರಾ ಸಮಿತಿಗಳನ್ನು ರಚಿಸಿಕೊಂಡು ಇಪ್ಪತ್ತು ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳು ಧರ್ಮಸ್ಥಳಕ್ಕೆ ಆಗಮಿಸುವ ಕುರಿತು ಮಾಹಿತಿ ನೀಡಿದ್ದಾರೆ.
ಮಾ.11ರಂದು ವಿಶೇಷ ಪೂಜೆ:
ಮಹಾಶಿವರಾತ್ರಿ ಅಂಗವಾಗಿ ಮಾ.11ರಂದು ಗುರುವಾರ ವಿಶೇಷ ಪೂಜೆ, ಅರ್ಚನೆಗಳ ಸಹಿತ ಶಿವನಾಮ ಸ್ಮರಣೆ, ಭಜನೆ, ರಥೋತ್ಸವ ನಡೆಯುತ್ತದೆ. ಸಂಜೆ 6 ಗಂಟೆಯಿಂದ ಬೆಳಗ್ಗಿನವರೆಗೆ ನಾಲ್ಕು ಜಾವಗಳಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಪೂಜೆಗಳು, ಅರ್ಚನೆಗಳು, ಭಜನೆ, ಸತ್ಸಂಗ, ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ನಡೆಯುತ್ತದೆ.