ಬರೋಡಾದಲ್ಲಿ‌ ತುಳು ಸಂಸ್ಕೃತಿ ಅನಾವರಣ ಜೊತೆ ಸಾಮಾಜಿಕ ಕಾರ್ಯ: ಬರೋಡಾ ತುಳು ಸಂಘಕ್ಕೆ ತುಳು ಸಾಹಿತ್ಯ ಅಕಾಡೆಮಿಯಿಂದ ಸಂಘಟನಾ ಪ್ರಶಸ್ತಿ

ಬೆಳ್ತಂಗಡಿ: ವೈದ್ಯರು, ವಕೀಲರು, ಐಎಎಸ್ ಅಧಿಕಾರಿಗಳು, ಉದ್ಯಮಿಗಳು ಹೀಗೆ‌ ಎಲ್ಲಾ ರೀತಿಯ ಉದ್ಯೋಗ ಮಾಡುವವರು ಸಮಾಜಮುಖಿ ಕಾರ್ಯ ಮಾಡುವ ಜೊತೆಗೆ‌ ಸಂಸ್ಕ್ರತಿ ರಕ್ಷಣೆ ಹಾಗೂ‌ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಿದ್ದಾರೆ. ಇವರೆಲ್ಲರಿಗೂ ಸ್ನೇಹ ಸೇತುವಾಗಿರುವುದು ‘ಬರೋಡ ತುಳು ಸಂಘ’. ಈ ಸಂಘಕ್ಕೆ ತುಳು ಸಾಹಿತ್ಯ ಅಕಾಡೆಮಿಯಿಂದ 2020ನೇ ಸಾಲಿನ ಸಂಘಟನಾ ಪ್ರಶಸ್ತಿ ಗೌರವ ಲಭಿಸಿದೆ.

ಗುಜರಾತ್ ರಾಜ್ಯದ ಬರೋಡಾದಲ್ಲಿ ಸಂಘಟನಾತ್ಮಕವಾಗಿ ಅಲ್ಲಿನ ತುಳುವರನ್ನು ಒಟ್ಟುಗೂಡಿಸಿ, ನಮ್ಮ ಭಾಷೆ, ಆಚಾರ- ವಿಚಾರಗಳನ್ನು ಉಳಿಸುವ ಉದ್ದೇಶದಿಂದ ಸುಮಾರು 32 ವರ್ಷಳ ಹಿಂದೆ ಆರಂಭಗೊಂಡಿದ್ದೇ ‘ಬರೋಡಾ ತುಳು‌ ಸಂಘ’.‌ ಆಗ ಎಸ್.ಕೆ. ಸಾಲಿಯಾನ್, ದಯಾನಂದ ಬೋಂಟ್ರ,ಜಯರಾಮ ಶೆಟ್ಟಿ ಹಾಗೂ ಇನ್ನಿತರ ಹಿರಿಯರ ನೇತೃತ್ವದಲ್ಲಿ ಸಂಘ ಸ್ಥಾಪನೆಯಾಗಿದೆ. ಇದೀಗ ಪ್ರಸ್ತುತ ಅಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರ ಅಧ್ಯಕ್ಷತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತುಳು ಸಂಪ್ರದಾಯ, ಹಬ್ಬಾಚರಣೆ, ಶೈಕ್ಷಣಿಕ, ಸಾಂಸ್ಕೃತಿಕ ಜೊತೆಗೆ ಸಾಮಾಜಿಕ ಚಟುವಟಿಕೆಗಳ ಮೂಲಕ‌ ಸದಾ ಕಾರ್ಯೋನ್ಮುಖವಾಗಿ ಗುರುತಿಸಿಕೊಂಡಿದ್ದು, ಕರ್ನಾಟಕ ರಾಜ್ಯ ಸರಕಾರದ ಅಂಗ ಸಂಸ್ಥೆಯಾದ ‘ತುಳು ಸಾಹಿತ್ಯ ಅಕಾಡೆಮಿಯು ಬರೋಡಾ ತುಳು ಸಂಘವನ್ನು ಗುರುತಿಸಿ ಗೌರವಿಸುತ್ತಿದೆ.

ದೇಶದಲ್ಲಿ ಸುಮಾರು 52 ತುಳು ಸಂಘಗಳು ಇದ್ದು ಎಲ್ಲಾ ಸಂಘಗಳ ಚಟುವಟಿಕೆ ಗಮನಿಸಿ, ಬರೋಡಾ ತುಳು ಸಂಘವನ್ನೂ ಆಯ್ಕೆ ಮಾಡಿಕೊಂಡಿದೆ. ಈ ಸಂಘದಲ್ಲಿ ‌ಸುಮಾರು‌ 1500ಕ್ಕೂ ಹೆಚ್ಚು ಜನ‌ ಸದಸ್ಯರಾಗಿದ್ದಾರೆ.

ತುಳು ಚಾವಡಿ

ಬರೋಡಾದಲ್ಲಿನ ತುಳುವರು ಸಭೆ ನಡೆಸಲು, ಸಾಂಸ್ಕೃತಿಕ ಹಾಗೂ ತುಳು ಕುರಿತ ಕಾರ್ಯಕ್ರಮಗಳನ್ನು ನಡೆಸಲು ಸ್ವಂತ ‘ತುಳು ಚಾವಡಿ’ ಹೊಂದಲು ತೀರ್ಮಾನಿಸಲಾಯಿತು. ಇದಕ್ಕಾಗಿ‌ ಅಲ್ಲಿನ ತುಳುವರಿಂದ ನಿಧಿ ಸಂಗ್ರಹ ‌ಮಾಡಲಾಗಿತ್ತು. ಈ ತುಳು ಚಾವಡಿ ‌ನಿರ್ಮಾಣ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.‌ ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದ್ದರು. ಬಳಿಕ ನಿಧಿ‌ ಸಂಗ್ರಹವಾಗಿ ಇದೀಗ ಸ್ವಂತ ತುಳು ಚಾವಡಿ ನಿರ್ಮಾಣವಾಗಿ, ಚಟುವಟಿಕೆ ನಡೆಯುತ್ತಿದೆ. ಇಲ್ಲಿನ ಕಾರ್ಯಕ್ರಮಗಳಿಗೆ ಮಾಜಿ ಮುಖ್ಯಮಂತ್ರಿ ‌ವೀರಪ್ಪ ಮೊಯ್ಲಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕಾದ ಸುನಿಲ್ ಕುಮಾರ್, ಹರೀಶ್ ಪೂಂಜ ಮೊದಲಾದ ಗಣ್ಯರು ಭಾಗವಹಿಸಿದ್ದಾರೆ.

ವರ್ಷಕ್ಕೆ 30ಕ್ಕಿಂತಲೂ ಹೆಚ್ಚು ಕಾರ್ಯಕ್ರಮ: 

ಸಂಘದ ಸದಸ್ಯರು ಜೊತೆ ಸೇರುವ ಉದ್ದೇಶದಿಂದ ಪ್ರತೀ‌ ಹುಣ್ಣಿಮೆಯ ದಿನ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‌ಜೊತೆಗೆ‌‌ ತುಳು ಹಬ್ಬಾಚರಣೆಗಳನ್ನೂ ಆಚರಿಸಲಾಗುತ್ತದೆ.‌ ಪ್ರತಿ ವಿಜಯದಶಮಿ ಸಂದರ್ಭದಲ್ಲಿ ಮನೆತುಂಬಿಸಿಕೊಳ್ಳುವ ಕುರಾಲ್ ಹಾಗೂ ‘ಪುದ್ದಾರ್’ ಆಚರಣೆ ಮಾಡಲಾಗುತ್ತದೆ. ಯಕ್ಷಗಾನ ಪ್ರದರ್ಶನ, ನಾಟಕ ಪ್ರದರ್ಶನ, ಹರಿಕಥೆ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಗಳನ್ನೂ ಮಾಡಲಾಗುತ್ತಿದೆ. ಸ್ವಾತಂತ್ರ್ಯ ದಿನದಂದು ದೇಶಕ್ಕಾಗಿ ಹೋರಾಡಿದ ತುಳು‌ ವೀರರ ಛದ್ಮವೇಷ ಹಾಗೂ ಭಾಷಣ ಹಮ್ಮಿಕೊಳ್ಳಲಾಗುತ್ತದೆ. ವಿಶೇಷವಾಗಿ ಎಲ್ಲವೂ ಇಲ್ಲಿ ಸ್ಪಷ್ಟ ತುಳುಮಯವಾಗಿರುತ್ತದೆ.

ಉಚಿತ ಸಿನಿಮಾ ಪ್ರದರ್ಶನ: 

ಶಶಿಧರ ಶೆಟ್ಟಿ ಅವರು ‌ಅಧ್ಯಕ್ಷತೆ ವಹಿಸಿರುವ ಈ ಸಂಘದ ವತಿಯಿಂದ ಮನರಂಜನೆಗಾಗಿ‌ ವಿಶೇಷ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಬಿಡುಗಡೆಯಾಗುವ ಎಲ್ಲಾ ತುಳು ಸಿನಿಮಾಗಳನ್ನು ಸಮಯ, ಸಂದರ್ಭ ಗಮನಿಸಿ ಬರೋಡಾದ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇಲ್ಲಿ ಬರೋಡಾದ ತುಳುವರು ಜೊತೆ ಸೇರಿ ತುಳು ಸಿನಿಮಾ ಉಚಿತವಾಗಿ ನೋಡಿ ಆನಂದಿಸುತ್ತಾರೆ.

ಪ್ರಕೃತಿ ‌ವಿಕೋಪ‌ ಸಂದರ್ಭ ಸ್ಪಂದನೆ:

ಗುಜರಾತ್ ನ‌ ಕಛ್ ಮುಛ್ ಬಳಿ‌ ಭೂಕಂಪ ನಡೆದ ಸಂದರ್ಭದಲ್ಲಿ ಬರೋಡ ತುಳು ಸಂಘದಿಂದ ‌2 ಟ್ರಕ್ ದಿನೋಪಯೋಗಿ‌ ವಸ್ತುಗಳನ್ನು ಹಂಚಲಾಗಿದೆ. ಕಳೆದ ವರ್ಷ ಗುಜರಾತ್ ಸುತ್ತಮುತ್ತ ಪ್ರವಾಹ ಉಂಟಾದ ಸಂದರ್ಭದಲ್ಲೂ ಎಲ್ಲಾ ವರ್ಗದ ಜನರಿಗೆ ಸಹಾಯ ಹಸ್ತ ಚಾಚಲಾಗಿದೆ.

ಗುಜರಾತಿನ‌ 5 ಕಡೆ ತುಳು ಸಂಘ: 

ಸುಮಾರು ಏಳು ವರ್ಷಗಳ ಹಿಂದೆ ಬೆಳ್ಳಿಹಬ್ಬ ನಡೆದಿದ್ದು, ಬಳಿಕ ಬೆಳ್ತಂಗಡಿ ತಾಲೂಕು ‌ಮೂಲದ‌ ಶಶಿಧರ ಶೆಟ್ಟಿ ನವಶಕ್ತಿ ಅವರು ಅಧ್ಯಕ್ಷರಾಗಿದ್ದಾರೆ.‌ ಬಳಿಕ ಸಂಘದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ. ತುಳು‌ಸಂಘದಲ್ಲಿ‌ ಪ್ರಸ್ತುತ ಗೌರವಾಧ್ಯಕ್ಷರಾಗಿ ದಯಾನಂದ ಬೋಂಟ್ರ, ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ವಾಸು ಪೂಜಾರಿ, ಮಹಿಳಾ ವಿಭಾಗ ಅಧ್ಯಕ್ಷೆಯಾಗಿ ಡಾ. ಶರ್ಮಿಳಾ ಜೈನ್ ಇದ್ದಾರೆ. ಇದೀಗ ‌ಗುಜರಾತ್ ರಾಜ್ಯದ ವಾಪಿ, ಸೂರತ್, ಅಂಕ್ಲೇಶ್ವರ, ಅಹಮದಾಬಾದ್ ನಲ್ಲಿ ತುಳು ಸಂಘ ಸ್ಥಾಪನೆ ಮಾಡಲಾಗಿದೆ, ಗುಜರಾತ್ ನಲ್ಲಿರುವ ಸುಮಾರು 8 ರಿಂದ 10 ಸಾವಿರ ತುಳುವರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ ಎಲ್ಲಾ ಸದಸ್ಯರು ವಿವಿಧ ವಾಟ್ಸ್ಯಾಪ್ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದಾರೆ.

ಪ್ರಶಸ್ತಿ ದೊರಕಿರುವುದು ಅತೀವ ಸಂತಸವನ್ನುಂಟು ಮಾಡಿದೆ: ಶಶಿಧರ್ ಶೆಟ್ಟಿ 

ಪ್ರಶಸ್ತಿ ಲಭಿಸಿರುವ ಬಗ್ಗೆ ‘ಬರೋಡ ತುಳು ಸಂಘ’ದ ಅಧ್ಯಕ್ಷರಾದ ಶಶಿಧರ ಶೆಟ್ಟಿ ಅವರು ‘ಪ್ರಜಾಪ್ರಕಾಶ’ಕ್ಕೆ ಪ್ರತಿಕ್ರಿಯೆ ನೀಡಿದ್ದು, “ಬರೋಡ ತುಳು ಸಂಘದ ಮೂಲಕ ಅಲ್ಲಿನ‌ ಕುಟುಂಬಗಳಿಗೆ‌ ತುಳುನಾಡಿನ ಜನರು ಒಬ್ಬರಿಗೊಬ್ಬರು ‌ಭೇಟಿಯಾಗುವಂತಾಗಿದೆ. ಎಲ್ಲರೂ ಒಂದು ಕುಟುಂಬದ ರೀತಿ ಜೊತೆ ಸೇರುತ್ತಾರೆ.‌ ತುಳುನಾಡಿನ ಸಂಸ್ಕೃತಿ, ಆಚರಣೆ ಹಾಗೂ ಸಾಮಾಜಿಕ ಚಟುವಟಿಕೆಗೆ ಎಲ್ಲರೂ ಕೈ ಜೋಡಿಸಿ ಕೆಲಸ ನಿರ್ವಹಿಸುವುದು ಉತ್ತಮ ಅನುಭವ ನೀಡುತ್ತದೆ.‌ ನಮ್ಮ ಸಂಘದ ಚಟುವಟಿಕೆ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸದ ಜೊತೆಗೆ ಹೆಮ್ಮೆ ತಂದಿದೆ.ಅದಲ್ಲದೇ ಗುಜರಾತಿನ ಎಲ್ಲಾ ತುಳುವರಿಗೂ ಅತೀವ ಸಂತಸವಾಗಿದೆ.ಈ ಪ್ರಶಸ್ತಿಯಿಂದ ನಮ್ಮ ಮೇಲಿನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ.” ಎಂದು ಪ್ರತಿಕ್ರಿಯೆ ‌ನೀಡಿದ್ದಾರೆ.

ರಾಜ್ಯದ ಹೊರಗೆ ತುಳುವರನ್ನು ಒಂದುಗೂಡಿಸಿ ತುಳು ಭಾಷೆ, ಸಂಸ್ಕ್ರತಿ ರಕ್ಷಣೆಯ ಜೊತೆಗೆ ‌ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ ‘ಬರೋಡಾ ತುಳು ಸಂಘ’ ಇನ್ನಷ್ಟು ಹೆಚ್ಚಿನ ಜನಪರ ಕಾರ್ಯಗಳನ್ನು ನಡೆಸಲಿ ಎನ್ನುವುದು ‘ಪ್ರಜಾಪ್ರಕಾಶ’ ತಂಡದ ಆಶಯವಾಗಿದೆ. ಪ್ರಶಸ್ತಿ ಗಳಿಸಿದ‌ ಸಂಘಕ್ಕೆ ಮತ್ತೊಮ್ಮೆ ಶುಭಾಶಯಗಳು.

error: Content is protected !!