ಸಿವಿಲ್ ನ್ಯಾಯಾಧೀಶರಾಗಿ ಧರ್ಮಸ್ಥಳದ ಚೇತನಾ: ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹುದ್ದೆಗೆ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ಉಚ್ಚ ನ್ಯಾಯಾಲಯದ ‌2020ನೇ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ಫೆ.25ರಂದು ಹೊರಡಿಸಲಾದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳದ 29 ವರ್ಷ ವಯಸ್ಸಿನ ಚೇತನಾ‌ ಅವರು ಆಯ್ಕೆಯಾಗಿದ್ದಾರೆ.

ಧರ್ಮಸ್ಥಳದ ನಾರ್ಯ ಎಂಬ ಪುಟ್ಟ ಹಳ್ಳಿಯಲ್ಲಿ‌ ಕಡುಬಡತನದ ಕುಟುಂಬದಲ್ಲಿ ಹುಟ್ಟಿ, ಬೆಳೆದಿರುವ ಚೇತನಾ ಅವರು ಅಸಮಾನ್ಯ ಸಾಧನೆ ಮಾಡಿದ್ದಾರೆ. ಇವರ ತಂದೆ ರಾಮಣ್ಣ ಪೂಜಾರಿ ಮತ್ತು ತಾಯಿ ಸೀತಾ. ರಾಮಣ್ಣ ದಂಪತಿಯ ನಾಲ್ಕು ಮಕ್ಕಳಲ್ಲಿ ಚೇತನಾ ಎರಡನೆಯವರು. 1ರಿಂದ 6ನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಉಪ್ಪಿನಂಗಡಿ ಸಮೀಪದ ಪೆರ್ನೆ ಕನ್ನಡ ಮಾಧ್ಯಮ ಶಾಲೆ, ಏಳನೇ ತರಗತಿ ವಿದ್ಯಾಭ್ಯಾಸವನ್ನು ತಮ್ಮ ಊರಾದ ಕನ್ಯಾಡಿ ಸರಕಾರಿ ಶಾಲೆಯಲ್ಲಿ ಪೂರ್ಣಗೊಳಿಸುತ್ತಾರೆ. ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ ಶ್ರೀ. ಧ.ಮಂ.ಸೆಕೆಂಡರಿ ಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ಣಗೊಳಿಸುತ್ತಾರೆ.

ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2016ರಲ್ಲಿ ತಮ್ಮ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿ ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲು ಅವರ‌ ಕಚೇರಿಯಲ್ಲಿ ವಕೀಲ ವೃತ್ತಿ ಅರಂಭಿಸುತ್ತಾರೆ. ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಕ್ಲಾರ್ಕ್ ರಿಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ‌ ನಡೆಸುತ್ತಿದ್ದರು. ಇದೀಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ‌ ಸಿವಿಲ್‌ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜನಿಸಿದರೂ ಅವಿರತ ಶ್ರಮದ ಮೂಲಕ‌ ಅಸಮಾನ್ಯ ಸಾಧನೆ‌ ಮಾಡಿದ್ದಾರೆ.

ಸಿವಿಲ್ ನ್ಯಾಯಾಧೀಶರಾಗಿ ತೇರ್ಗಡೆ ಹೊಂದಿದ ಚೇತನಾ ಅವರಿಗೆ ಹಾಗೂ ಅವರ ಪೋಷಕರಿಗೆ ‘ಪ್ರಜಾಪ್ರಕಾಶ’ ತಂಡದ ಶುಭಾಶಯಗಳು.

error: Content is protected !!