ಬೆಳ್ತಂಗಡಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಒಂದು ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದರೂ ತಾನು ಹಸಿದ ಹೊಟ್ಟೆಯಲ್ಲಿ ಕೂತು ತನ್ನ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಎಲ್ಲರ ಮುಂದೆ ತಲೆ ಎತ್ತಿ ನಡೆಯುವಂತಾಗಬೇಕು ಎಂದು ಪಣತೊಟ್ಟ ಮಹಾತಾಯಿ, ಕುಟುಂಬದ ಬಂಡಿ ಸಾಗಿಸಲು ಹಗಲಿರುಳು ಕೂಲಿ ಮಾಡಿ ದುಡಿಯುತ್ತಿರುವ ತಂದೆ…
ಇದೀಗ ಪೋಷಕರ ಕನಸು ನನಸಾದ ಕ್ಷಣ… ಸಾಮಾನ್ಯ ವಿದ್ಯಾರ್ಥಿಯಾಗಿದ್ದು, ವಕೀಲ ವೃತ್ತಿ ಅಭ್ಯಸಿಸುತ್ತಿದ್ದ ಮಗಳು ಈಗ ರಾಜ್ಯದ ಸಿವಿಲ್ ನ್ಯಾಯಾಧೀಶೆಯಾದ ಸಿಹಿ ಸುದ್ದಿಯನ್ನು ಕೇಳುವ ಸೌಭಾಗ್ಯ…
ಹೌದು… ಪೋಷಕರ ಕನಸನ್ನು ನನಸಾಗಿಸಿದ ಕೀರ್ತಿ ಚೇತನಾ ನಾರ್ಯ ಎಂಬ ನ್ಯಾಯಾಧೀಶೆಯದ್ದು…
ಬಡತನದ ನಡುವೆಯೂ ಪರಿಶ್ರಮದಿಂದ ಅವಿರತ ಶ್ರಮಿಸಿದ ಫಲವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಯಶೋಗಾಥೆಯಿದು…
ಇದು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಸಮೀಪದ ನಾರ್ಯ ಎಂಬಲ್ಲಿಯ ರಾಮಣ್ಣ ಪೂಜಾರಿ ಹಾಗೂ ಸೀತಾ ದಂಪತಿಯ ಪುತ್ರಿಯ ಮನಮಿಡಿಯುವ ಕಥೆ ‘ಪ್ರಜಾಪ್ರಕಾಶ’ ಓದುಗರಿಗಾಗಿ.
ಸೀತಾ ರಾಮಣ್ಣ ಪೂಜಾರಿ ದಂಪತಿಗಳಿಗೆ ನಾಲ್ಕು ಮಕ್ಕಳು, ಇವರಲ್ಲಿ ಮೂವರು ಪುತ್ರರು ಹಾಗೂ ಒಬ್ಬಳು ಪುತ್ರಿ. ಚಿಕ್ಕಂದಿನಿಂದಲೇ ತುಂಬಾ ಚೂಟಿಯಾಗಿದ್ದ ಈ ಹುಡುಗಿಯ ಹೆಸರು ಚೇತನ. ಏನಾದರೂ ವಿಷಯದ ಬಗ್ಗೆ ಪ್ರಶ್ನೆಯ ಮೇಲೆ ಪ್ರಶ್ನೆಯ ಸುರಿಮಳೆ ಸುರಿದು ತಾಯಿಯನ್ನು ಗೋಳೊಯ್ಯುತ್ತಿದ್ದ ತುಂಟಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆಗೆ ಸಿಗುತ್ತಿದ್ದ ಅಲ್ಪ, ಸ್ವಲ್ಪ ಸಂಬಳದಲ್ಲಿ ಸಂಸಾರ ಸಾಗಿಸಬೇಕಾಗಿತ್ತು. ಅದರಲ್ಲೂ ಇವರ ಹಿರಿಯ ಪುತ್ರ ವಿಶೇಷಚೇತನ. ದುಡಿದ ಅರ್ಧದಷ್ಟು ಸಂಪಾದನೆ ಆತನ ಔಷಧಕ್ಕಾಗಿ ಮೀಸಲಿಡಬೇಕಾದ ಅನಿವಾರ್ಯತೆ. ಅಲ್ಪ ಸ್ವಲ್ಪ ಹಣದಲ್ಲಿ ದಿನ ದೂಡಬೇಕಾದ ಪರಿಸ್ಥಿತಿಯಿಂದ ಈ ಕುಟುಂಬ ಕಂಗಾಲಾಗಿತ್ತು. ಇವರ ಈ ಕಷ್ಟಕ್ಕೆ ಸ್ಪಂದಿಸುವ ಜನ ಆ ಸಂದರ್ಭದಲ್ಲಿ ಯಾರೂ ಇರಲಿಲ್ಲ. ಅದರೂ ತಮ್ಮ ಮಕ್ಕಳು ನಮ್ಮಂತೆ, ಅವಿದ್ಯಾವಂತರಾಗಬಾರದು, ವಿದ್ಯೆಯನ್ನು ಕಲಿತು ಸಮಾಜದಲ್ಲಿ ಎಲ್ಲರೂ ಗುರುತಿಸುವಂತಾಗಬೇಕು ಎಂದು ಪಣ ತೊಟ್ಟ ಪೋಷಕರು ದುಡಿದಿದ್ದಾರೆ. ಅದರಲ್ಲೂ ತಾಯಿ ಸೀತಾ ನಿದ್ದೆಗೆಟ್ಟು ಬೀಡಿ ಕಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸುತಿದ್ದರು. ಅದರಂತೆ ತಾಯಿಯ ಆಸೆಯನ್ನು ಮಕ್ಕಳು ನಿರಾಶೆ ಮೂಡಿಸಲಿಲ್ಲ. ಅದರಲ್ಲೂ ಚೇತನಾ ಅವರಂತೂ ತಾಯಿಗೆ ತಕ್ಕ ಮಗಳಾಗಿ, ತಾಯಿಯ ಆಸೆಯಂತೆ ಓದಿ, ಇಂದು ಇಡೀ ಸಮಾಜ ತಲೆ ಎತ್ತಿ ಗೌರವ ನೀಡುವಂತಹಾ ನ್ಯಾಯಧೀಶೆಯಾಗಿ ತನ್ನ ತಾಯಿಗೆ ದೊಡ್ಡ ಬಹುಮಾನವನ್ನೇ ನೀಡಿದ್ದಾರೆ.
ನ್ಯಾಯಾಧೀಶರಾಗಿ ಆಯ್ಕೆ:
ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ಫೆ.25ರಂದು ಹೊರಡಿಸಿದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಚೇತನಾ ಅವರು ಆಯ್ಕೆಯಾಗಿದ್ದಾರೆ. 1 ರಿಂದ 6ನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪೆರ್ನೆ ಕನ್ನಡ ಮಾಧ್ಯಮ ಶಾಲೆ, ಏಳನೇ ತರಗತಿ ವಿದ್ಯಾಭ್ಯಾಸವನ್ನು ತಮ್ಮ ಊರಾದ ಕನ್ಯಾಡಿ ಸರಕಾರಿ ಶಾಲೆಯಲ್ಲಿ ಪೂರ್ಣಗೊಳಿಸುತ್ತಾರೆ. ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ ಶ್ರೀ. ಧ.ಮಂ.ಸೆಕೆಂಡರಿ ಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2016ರಲ್ಲಿ ತಮ್ಮ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿ, ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲು ಅವರ ಕಚೇರಿಯಲ್ಲಿ ವಕೀಲ ವೃತ್ತಿ ಅರಂಭಿಸುತ್ತಾರೆ. ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಕ್ಲಾರ್ಕ್ ರಿಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು.
ಸಿಮೆಂಟ್ ಶೀಟ್ ಮನೆಯಲ್ಲಿ ವಾಸ್ತವ್ಯ:
ರಾಮಣ್ಣ ಪೂಜಾರಿ ಸೀತಾ ದಂಪತಿಗಳಿಗೆ ನಾಲ್ಕು ಮಕ್ಕಳಲ್ಲಿ ಹಿರಿಯವ ರೂಪೇಶ್ ವಿಶೇಷ ಚೇತನ. 14 ವರ್ಷ ಬಳಿಕ ನಡೆದಾಡಿದ್ದಾರೆ. ಇವರು ಚಿತ್ರಕಲೆಯ ಹವ್ಯಾಸವನ್ನೂ ರೂಢಿಸಿಕೊಂಡಿದ್ದು, ಉತ್ತಮ ಕಲಾಕೃತಿಗಳನ್ನು ರಚಿಸುತ್ತಾರೆ. ನಾರ್ಯದಲ್ಲಿ ಸಿಮೇಂಟ್ ಸೀಟಿನ ಚಿಕ್ಕ ಮನೆಯಲ್ಲಿ ವಾಸ್ತವ್ಯ ಇದ್ದಾರೆ.
ಪಿಯು ಬಳಿಕ ವಿದ್ಯಾಭ್ಯಾಸ ಮೊಟಕು:
ಆರ್ಥಿಕ ಸಮಸ್ಯೆಯಿಂದ ಪಿಯುಸಿ ಬಳಿಕ ವಿದ್ಯಾಭ್ಯಾಸ ಮೊಟಕುಗೊಳಿಸಿ, ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ್ದ ಚೇತನಾಗೆ ಮತ್ತೆ ಶಿಕ್ಷಣ ಮುಂದುವರಿಸುವಂತೆ ತಾಯಿಯೇ ಒತ್ತಾಯ ಮಾಡಿದ್ದಾರೆ. ಪರಿಚಯವಿಲ್ಲದ ಮಂಗಳೂರಿಗೆ ಹೋಗಿ ತಾಯಿ ಮಗಳು ಹೋಗಿ ಮಗಳ ಇಷ್ಟವಿದ್ದ ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಶಿಕ್ಷಣಕ್ಕೆ ಸೇರಿಸಿದ್ದಾರೆ. ದೊಡ್ಡ ಮಗ ರೂಪೇಶನಿಗೂ ಆತನ ಬಯಕೆಯಂತೆ ಐದು ವರ್ಷದ ಚಿತ್ರಕಲಾ ಪದವಿ ಮಾಡಿಸಿದ್ದಾರೆ. ಮೂರನೇ ಮಗ ಪುರಂದರ ಡಿಪ್ಲೋಮೋ ಮಾಡಿ ತಲಪಾಡಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ, ಕೊನೆಯ ಪುತ್ರ ಭಾಗ್ಯೇಶ್ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ದ್ವಿತೀಯ ಪದವಿ ಕಲಿಯುತ್ತಿದ್ದಾನೆ.
ಮಕ್ಕಳಿಗೆ ಸುಸಂಸ್ಕೃತ ಶಿಕ್ಷಣ ಅಗತ್ಯ:
ಮಗಳ ಸಾಧನೆ ಬಗ್ಗೆ ಚೇತನಾ ಅವರ ತಾಯಿ ಸೀತಾ ‘ಪ್ರಜಾಪ್ರಕಾಶ’ದೊಂದಿಗೆ ಮಾತನಾಡಿ “ಮಕ್ಕಳ ಆಸಕ್ತಿಗನುಸಾರ ಶಿಕ್ಷಣ ಕೊಡಿಸಿ. ಒತ್ತಡ ಹಾಕದೆ ಶಿಕ್ಷಣ ಕೊಡಿಸಿದಲ್ಲಿ ಮಕ್ಕಳಿಂದ ಸಾಧನೆ ಮಾಡಲು ಸಾಧ್ಯ. ನಾನು ಒಂದನೇ ತರಗತಿ ತನಕ ಮಾತ್ರ ವಿದ್ಯಾಭ್ಯಾಸ ಮಾಡಿದ್ದು. ಮಕ್ಕಳು ಅನಕ್ಷರಸ್ಥರಾಗಬಾರದು. ಅವರಿಗೆ ಶಿಕ್ಷಣದ ಜತೆಗೆ ಸುಸಂಸ್ಕೃತ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಅಂತ ಕಷ್ಟ ಪಟ್ಟು ದುಡಿದು ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕೆ ಸಾರ್ಥಕವಾಯಿತು. ಮಗಳ ಸಾಧನೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಕಷ್ಟ ಪಟ್ಟಿದ್ದಾಳೆ. ಗುರಿ ಸಾಧಿಸಿದ್ದಾಳೆ ಎಂಬ ಸಂತೋಷ ಹೆಮ್ಮೆ ಇದೆ” ಎಂದರು.
ಪೋಷಕರ ಹೆಸರು ಉಳಿಸಬೇಕು: ಚೇತನ
‘ಪ್ರಜಾಪ್ರಕಾಶ’ಕ್ಕೆ ನ್ಯಾಯಾಧೀಶೆ ಚೇತನಾ ಅವರು ತಮ್ಮ ಸಾಧನೆಯ ಕುರಿತು ಪ್ರಥಮ ಪ್ರತಿಕ್ರಿಯೆ ನೀಡಿದ್ದು, “ಅಪ್ಪ, ಅಮ್ಮ ಕಷ್ಟ ಪಟ್ಟು ನಮಗೆ ಶಿಕ್ಷಣ ನೀಡಿದ್ದಾರೆ. ಆರ್ಥಿಕ ಸಮಸ್ಯೆ ಇದ್ದರೂ ಪೋಷಕರು ನಮ್ಮ ಆಸಕ್ತಿಗೆ, ಬೇಡಿಕೆಗೆ ಸ್ಪಂದನೆ ನೀಡಿದ್ದಾರೆ. ಕಷ್ಟಪಟ್ಟು ಬದುಕು, ಒಳ್ಳೆಯ ದಿನ ಬಂದೇ ಬರುತ್ತದೆ. ಬೇಸರ ಮಾಡಬೇಡ ಎಂದು ಅಮ್ಮ ಹೇಳುತ್ತಾ ಇದ್ದರು. ಅವರ ಆಸೆ ನೆರವೇರಿದೆ. ಎಲ್‌ಎಲ್‌ಬಿ ಶಿಕ್ಷಣ ಮಾಡುವಾಗ ಹಾಸ್ಟೇಲ್ ಸಿಗದೇ ನಾಲ್ಕು ವರ್ಷ ಮನೆಯಿಂದಲೇ ಮಂಗಳೂರಿಗೆ ಹೋಗಿ ಬರುತ್ತಿದ್ದೆ. ಆರ್ಥಿಕ ಸಮಸ್ಯೆಯಿಂದ ಖಾಸಗಿ ಹಾಸ್ಟೇಲ್‌ನಲ್ಲಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಗುರಿ ಇಟ್ಟುಕೊಂಡು, ಪೋಷಕರ ಕಷ್ಟಗಳನ್ನು ಅರಿತು ಸಾಧನೆ ಮಾಡಬೇಕು. ಪೋಷಕರ ಹೆಸರು ಉಳಿಸಬೇಕು” ಎಂಬ ಸಂದೇಶ ನೀಡಿದ್ದಾರೆ.
ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ, ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದನ್ನು ಚೇತನ ನಿರೂಪಿಸಿದ್ದಾರೆ.