ಯಕ್ಷಗಾನಕ್ಕೆ ರಾಜ್ಯ ಜಾನಪದ ಕಲೆ ಮಾನ್ಯತೆ ನೀಡಬೇಕು: ಡಾ. ಮೋಹನ್ ಆಳ್ವ

ವೇಣೂರು : ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಾನ್ಯತೆ ಸಿಕ್ಕಿದಂತೆಯೇ ಕನ್ನಡ ಮಾಧ್ಯಮಕ್ಕೆ ಸ್ಥಾನಮಾನ ಸಿಗಬೇಕಿದೆ. ಇಂದು ಕನ್ನಡ ಮಾಧ್ಯಮದ ಸಾವಿರಾರು ಶಾಲೆಗಳಾಗಬೇಕಿತ್ತು. ನಾವು ಯಾರು ಯೋಚಿಸುತ್ತಿಲ್ಲ, ವಿರೊಧಿಸುತ್ತಿಲ್ಲ. ಸರಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಪ್ರಯತ್ನಿಸಬೇಕು. ಜತೆಗೆ ಕನ್ನಡ ಮಾಧ್ಯಮ ಶಾಲೆಗಳನ್ನು ಸವಕಲು ನಾಣ್ಯವಾಗದಂತೆ ನಾವು ಎಚ್ಚರಿಕೆ ವಹಿಸಬೇಕು ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ಮಂಗಳವಾರ ಹೊಸಂಗಡಿ ಗ್ರಾಮದ ಪೆರಿಂಜೆಯಲ್ಲಿ ಸಂತೃಪ್ತಿ ಸಭಾ ಭವನದಲ್ಲಿ ಬೆಳ್ತಂಗಡಿ ತಾಲೂಕು ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಹಂತ ಹಂತವಾಗಿ ಬೆಳೆಸಬೇಕು, ಬಳಸಬೇಕು ಹಾಗೂ ಉಳಿಸಬೇಕು. ಕನ್ನಡ ಭಾಷೆ, ಸಂಸ್ಕೃತಿ ಸದಾ ಚಲಾವಣೆಯ ನಾಣ್ಯವಾಗಬೇಕು. ಪ್ರತಿ ಊರಿನಲ್ಲಿ ಮಾದರಿ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಬೇಕು. ಕೇರಳದಲ್ಲಿ ಮಳೆಯಾಳಂ, ತಮಿಳುನಾಡಿನಲ್ಲಿ ತಮಿಳು, ಹಾಗೇಯೇ ನಮ್ಮ ರಾಜ್ಯದಲ್ಲೂ ಕನ್ನಡ ಮಾಧ್ಯಮ ಶಾಲೆ ಎಂದು ಸೊರಗಬಾರದು. ಕನ್ನಡ ಮಾಧ್ಯಮ ಶಾಲೆ ಸೊರಗಿದರೆ ಇದನ್ನೆ ನಂಬಿಕೊಂಡಿರುವ ಸಾಂಸ್ಕೃತಿಕ ಚಟುವಟಿಕೆ ಹಾಗೂ ಗ್ರಾಮೀಣ ಬದುಕಿನ ಸೋಲಾಗಲಿದೆ ಎಂದರು.

ಗ್ರಾಮೀಣ ಬದುಕಿನೊಂದಿಗೆ ಹಾಸು ಹೊಕ್ಕಾಗಿರುವ ಜನಪದ ಕಲೆಗಳು ನಾಶವಾಗದಂತೆ ಎಚ್ಚರಿಕೆ ವಹಿಸಬೇಕು. ಜನಪದ ಕಲೆ ಕೇವಲ ಮೆರವಣಿಗೆ, ರಂಗಸ್ಥಳಕ್ಕೆ ಸೀಮಿತವಾಗಬಾರದು. ಯಕ್ಷಗಾನ ಕಲೆ ಇಂದು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಯಕ್ಷಗಾನದಿಮದ ಭಾಷೆಯ ಶುದ್ಧಿಕರಣವಾಗುತ್ತಿದೆ. ಯಕ್ಷಗಾನಕ್ಕೆ ರಾಜ್ಯ ಕಲೆಯ ಮಾನ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮಣ್ಣಿನ ಮಗ ದೇವೇಗೌಡರು ಆರಂಭಿಸಿದ ಕನ್ನಡ ಮಾಧ್ಯಮ ಮೊರಾರ್ಜಿ ದೇಸಾಯಿ ಶಾಲೆಗಳನ್ನು ನಂತರ ಬಂದ ಮುಖ್ಯಮಂತ್ರಿಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿರುವುದು ದೊಡ್ಡ ದುರಂತವಾಗಿದೆ. ತಾನು ಮೂಡಬಿದ್ರೆಯಲ್ಲಿ ಪ್ರಾರಂಭಿಸಿದ ಕನ್ನಡ ಮಾಧ್ಯಮ ಶಾಲೆಗೆ ಪ್ರತಿ ವರ್ಷವೂ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಶೇ. ನೂರು ಫಲಿತಾಂಶ ಬರುತ್ತಿದೆ ಎಂದರು.

ಆಂಗ್ಲ ಮಾಧ್ಯಮ ಶಾಲೆಗಳು ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪಠ್ಯ, ಪರೀಕ್ಷಾ ವಿಧಾನ ಹಾಗೂ ಮೌಲ್ಯ ಮಾಪನದಲ್ಲಿರುವ ಅಜಗಜಾಂತರವೇ ಕನ್ನಡ ಮಾಧ್ಯಮ ಶಾಲೆಗಳು ಸೊರಗಲು ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದರು.

ಕನ್ನಡ ನಾಡು-ನುಡಿ ಸಂಸ್ಕೃತಿಗೆ ಧರ್ಮಸ್ಥಳ, ಮೂಡಬಿದ್ರೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆಯನ್ನು ಅವರು ಶ್ಲಾಘಿಸಿದರು.

ಚಾರುಮುಡಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅವರು,

ಕನ್ನಡ ನಾಡಿನ ಸೌಂದರ್ಯವನ್ನ, ಸಾಹಿತಿಗಳನ್ನ ನಮ್ಮ ಮಕ್ಕಳಿಗೆ ಪರಿಚಯಿಸದವರಲ್ಲಿ ಕುವೆಂಪು ಮೊದಲಿಗರು. ಕನ್ನಡ ಅಮೂಲ್ಯ ವಿಚಾರಧಾರೆಗಳನ್ನ ಪರಿಚಯಿ ಕವಿಗಳನ್ನು, ಸಾಹಿತಿಗಳನ್ನು ಅಭಿನಂದಿಸುತ್ತೇನೆ. ಕನ್ನಡದ ಬಗ್ಗೆ ಹೊಸ ವಿಚಾರಧಾರೆಗಳು ಮತ್ತೆ ಮತ್ತೆ ಮೂಡಿಬರಲಿ. ಸಾಹಿತ್ಯದಿಂದ ಸಮ್ಮೇಳನಗಳು, ಸಮ್ಮೇಳನದಿಂದ ಹೊಸ ಹೊಸ ಸಾಹಿತಿಗಳ ಉದಯವಾಗಲಿದೆ. ಅನುಭವ ಮಂಟಪಗಳಿಗೆ ವೇದಿಕೆಯಾಗಲಿದೆ ಎಂದರು.

ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು, ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ನಡೆ ಯಾವತ್ತು ದಾರಿ ತಪ್ಪಿದ್ದೇ ಇಲ್ಲ. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಆಶೀರ್ವಾದ, ಮಾರ್ಗದರ್ಶನವಿದೆ. ವೈಜ್ಞಾನಿಕ ಜೀವನ ಕ್ರಮ ಅನುಸರಿಸಿದರೆ ನಾವು ಯಾವುದೇ ಆರೋಗ್ಯ ಭಯಕ್ಕೆ ಹೆಸರಬೇಕಾಗಿಲ್ಲ. ಪ್ರಗತಿಯ ಒಂದಂಶ ಇಟ್ಟುಕೊಂಡು ಸಾಹಿತ್ಯ ಚೌಕಟ್ಟಿನೊಳಗೆ ಮೇಳೈಸಿರುವಂತಹದು. ಗಟ್ಟಿ ಕನ್ನಡಿಗರಾಗಿ ತೌಳವ ಸಂಸ್ಕೃತಿಯಲ್ಲಿ ಬದುಕೋಣ ಎಂದು ಆಶಿಸಿದರು.

ಕ.ಸಾ.ಪ.ತಾಲೂಕು ಅಧ್ಯಕ್ಷ ಡಾ.ಬಿ.ಯಶೋವರ್ಮ ಪ್ರಸ್ತಾವಿಸಿ ಮಾತನಾಡಿ, ಬೇರೆ ಭಾಷೆಗಳನ್ನೂ ಅರಿಯೋಣ. ಕನ್ನಡವನ್ನು ಮರೆಯದಿರೋಣ. ಹೊಸ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರ ಮಾತೃಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಬೇರೆ ಭಾಷೆಗಳನ್ನೂ ಅಭ್ಯಸಿಸಲು ಅವಕಾಶ ಕಲ್ಪಿಸಲಾಗಿದೆ. ತಾಲೂಕಿನಲ್ಲಿ ಪರಿಷತ್ತಿನ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಲು ಹಲವಾರು ಚಟುವಟಿಕೆಗಳನ್ನು ಮಾಡಿದೆ. ಸುಮಾರು 150 ಕ್ಕೂ ಹೆಚ್ಚು ಹಿರಿಯ ಸಾಹಿತಿಗಳ ಕಿರು ಪರಿಚಯವನ್ನು ಯೂ ಟ್ಯೂಬ್ ಮೂಲಕ ಹರಿಯಬಿಡಲಾಗಿದೆ. ಸಾಹಿತ್ಯ ಗೋಷ್ಠಿಗಳು ಸಾಹಿತಿಗಳಿಗೆ ಹಬ್ಬ. ಸಾಹಿತ್ಯ ಕಳೆದುಹೋದ ನೆನಪುಗಳನ್ನು ಪರಿಚಯಿಸುವಂತೆ ಮಾಡುತ್ತದೆ. ಸಮ್ಮೇಳನವು ಜಾತ್ರೆಯೆಂದೆನಿಸದೆ ಅದೊಂದು ಹಬ್ಬವಾಗಬೇಕು ಎಂಬ ಉದ್ದೇಶ ಸಾಹಿತ್ಯ ಪರಿಷತ್ತಿನ ಆಶಯ ಎಂದರು.

ಇದೇ ಸಂದರ್ಭ ಸಮ್ಮೇಳನ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಎ. ಜೀವಂಧರ್ ಕುಮಾರ್ ಅವರನ್ನು ಗೌರವಿಸಲಾಯಿತು. ಸಂಯೋಜನಾ ಸಮಿತಿ ಅಧ್ಯಕ್ಷ ಜಯರಾಜ ಕಂಬಳಿ, ಕಸಾಪ ತಾಲೂಕು ಗೌ.ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್, ಅಶ್ರಫ್ ಆಲಿಕುಂಞಿ ಮೊದಲಾದವರು ಉಪಸ್ಥಿತರಿದ್ದರು.

ಸಂಯೋಜನಾ ಸಮಿತಿ ಕಾರ್ಯಾಧ್ಯಕ್ಷ ಧರಣೇಂದ್ರ ಕುಮಾರ್ ಸ್ವಾಗತಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಎಂ.ಪಿ. ಶ್ರೀನಾಥ್ ವಂದಿಸಿದರು. ಉಪನ್ಯಾಸಕ ಮಹಾವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

*ಸಮ್ಮೇಳನಾಧ್ಯಕ್ಷರ ಭಾಷಣ

17ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಜಿ.ರಮಾನಾಥ್ ಭಟ್ ಧ್ವನಿ ಮುದ್ರಣದ ಮೂಲಕ ಮಾತನಾಡಿ, ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ದೇಶೀಯ ಭಾಷೆಗಳು ವಿನಾಶದಂಚಿನಲ್ಲಿವೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಮಾತೃ ಭಾಷೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು. ಎಷ್ಟೋ ಜನರ ಮನಸ್ಸಿನಲ್ಲಿ ವಿದ್ಯಾಭ್ಯಾಸ ಎಂದರೆ ಇಂಗ್ಲೀಷ್‌ನ ಜ್ಞಾನವೆಂಬ ಭಾವನೆ ನೆಲೆಯೂರಿದೆ. ನಾವು ವಿದೇಶಿ ಆಡಳಿತ ಸಂಕೋಲೆಯಿಂದ ಮುಕ್ತರಾಗಿ ಏಳು ದಶಕಗಳೇ ಕಳೆದರೂ ನಮ್ಮಲ್ಲಿ ಇನ್ನೂ ಅಂತರ್ಗತವಾಗಿರುವ ವಿದೇಶಿ ವ್ಯಾಮೋಹವೇ ಇದಕ್ಕೆ ಕಾರಣವಾಗಿರಬಹುದೇ. ಕನ್ನಡವು ತನ್ನಲ್ಲಿ ಅಂತರ್ಗತವಾದ ಉಜ್ವಲ ಸತ್ವದಿಂದಲೇ ಉಳಿಯಬೇಕಾದ ಕಾಲ ಈಗ ಬಂದೊದಗಿದೆ. ಇಂದು ಕನ್ನಡದಲ್ಲಿ ನಿಘಂಟು, ಮಾತ್ರವಲ್ಲದೆ ವಿಶ್ವಕೋಶ, ಹಲವು ಜ್ಞಾನ ಶಾಖೆಗಳ ತಾಂತ್ರಿಕ ಪದಕೋಶಗಳೂ ಪ್ರಕಟವಾಗಿದೆ. ಅನುವಾದಕರಿಗೆ ಮಾರ್ಗವೂ ತೆರೆದಿದೆ ಎಂದರು.

ಹೊಸಂಗಡಿ ಗ್ರಾಪಂ ಅಧ್ಯಕ್ಷ ಕರುಣಾಕರ ಅವರು ರಾಷ್ಟ್ರಧ್ವಜವನ್ನು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಪರಿಷತ್ ಧ್ವಜವನ್ನು ಹಾಗೂ ಕಸಾಪ ತಾಲೂಕು ಅಧ್ಯಕ್ಷ ಡಾ. ಯಶೋವರ್ಮ ಅವರು ಸಮ್ಮೇಳನ ಧ್ವಜರೋಹಣವನ್ನು ನೆರವೇರಿಸಿದರು.

ಆ ಬಳಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಬಳಿಕ ಉಪನ್ಯಾಸಗಳು ನಡೆಯಿತು. ಪುಂಜಾಲಕಟ್ಟೆ ಪ್ರ.ದ.ಕಾಲೇಜಿನ ಪ್ರಿನ್ಸಿಪಾಲ್ ಗಣಪತಿ ಭಟ್ ಕುಳವರ್ಮ, ಪ್ರಗತಿಪರ ಕೃಷಿಕ ಬಾಲ್ಯ ಶಂಕರ್ ಭಟ್, ನಿವೃತ್ತ ಪ್ರಿನ್ಸಿಪಾಲ್ ಎ. ಕೃಷ್ಣಪ್ಪ ಪೂಜಾರಿ, ವೈದ್ಯ ಡಾ.ಪ್ರದೀಪ್ ಕುಮಾರ್, ಪತ್ರಕರ್ತ ಹರೀಶ್ ಅದೂರು, ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಉಜಿರೆ ಎಸ್‌ಡಿಎಂ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕುವೆಂಪುರವರ ನಾಗಿ ಕಥಕವನದ ರೂಪಕ ಹಾಗೂ ವೇಣೂರು ಸ.ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಹಳೆಗನ್ನಡ ಕಾವ್ಯ ವಿಶ್ಲೇಷಣೆ-ಕಾವ್ಯ ಪ್ರಸ್ತುತಿಗೊಂಡಿತು.

error: Content is protected !!