ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಜನಪ್ರತಿನಿಧಿ ಸಂಗಮ‌: ಸಾಧಕರಿಗೆ ಸನ್ಮಾನ

ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ಉರೂಸ್ ಮುಬಾಕರ್ ಪ್ರಯುಕ್ತ ಫೆ.24ರಂದು ಕಾಜೂರಿನಲ್ಲಿ ಇದೇ ಮೊದಲ‌ಬಾರಿ ಸ್ಥಳೀಯ ಮಟ್ಟದ ಎಲ್ಲಾ ಜನಪ್ರತಿನಿಧಿಗಳ ಸೌಹಾರ್ದ ಸಂಗಮ ಮತ್ತು ಸಾರ್ಥಕ ಸೇವೆ ಗೈದವರಿಗೆ ಸನ್ಮಾನ ಸಮಾರಂಭ ನಡೆಯಿತು.

ಅಧ್ಯಕ್ಷತೆಯನ್ನು‌ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದು, ಕ್ಷೇತ್ರಕ್ಕೆ ವಿಶೇಷ ಅನುದಾನಕ್ಕಾಗಿ ಶಾಸಕ ಹರೀಶ್ ಪೂಂಜ ಅವರು ಬೆಂಗಳೂರಿನಲ್ಲಿ ನಮ್ಮಗೆ ಸಹಕಾರ ನೀಡಿದ್ದಾರೆ. ನಮ್ಮ ಆಸುಪಾಸಿನ ಎಲ್ಲ ಪಂಚಾಯತ್ ಸದಸ್ಯರುಗಳೂ ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ನಮ್ಮ ಜೊತೆ ಸಹಕರಿಸಬೇಕು ಎಂದರು.

ಸಮಾರಂಭದ ಉದ್ಘಾಟನೆ ನೆರವೇರಿಸಿದ ಲೈವ್ ಮೀಡಿಯಾ ನ್ಯೂಸ್ ಚಾನೆಲ್ ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ ಮುಂಡಾಜೆ ಮಾತನಾಡಿ, ಧಾರ್ಮಿಕ‌ ಕ್ಷೇತ್ರಗಳು ಶಾಶ್ವತ ತಾಣಗಳು.‌ ಇಲ್ಲಿಂದ ಸೌಹಾರ್ದತೆಯ ಸಂದೇಶ ರವಾನೆಯಾದರೆ ಅದು ಪರಿಣಾಮಕಾರಿಯಾಗಿರುತ್ತದೆ.

ಜನಪ್ರತಿನಿಧಿಗಳಾದವರು ತಮ್ಮ ಪಕ್ಷಗಳಿಗೆ,‌ ಕಾರ್ಯಕರ್ತರಿಗೆ ಮಾತ್ರ ಸದಸ್ಯರಾಗಿರದೆ ಸಮಗ್ರ ಕ್ಷೇತ್ರದ ಪ್ರತಿನಿಧಿಗಳಾಗಬೇಕು. ಕಾಜೂರು ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು ಇಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಸ್ಥಳೀಯ ಪಂಚಾಯತ್ ಸಹಭಾಗಿಗಳಾಗಬೇಕು ಎಂದರು. ಸಭೆಯಲ್ಲಿ ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಮತ್ತು ಇಂದಬೆಟ್ಟು ಗ್ರಾ.ಪಂ ಮಟ್ಟದ ಎಲ್ಲಾ ಸದಸ್ಯರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಗೌರವ ಸ್ವೀಕರಿಸಿ ಇಂದಬೆಟ್ಟು ಗ್ರಾ.ಪಂ ಅಧ್ಯಕ್ಷ ಆನಂದ ಹಡೀಲು, ಕಡಿರುದ್ಯಾವರ ಗ್ರಾ.ಪಂ ಅಧ್ಯಕ್ಷ ಅಶೋಕ್ ಕುಮಾರ್, ಮಿತ್ತಬಾಗಿಲು ಗ್ರಾ.ಪಂ ಅಧ್ಯಕ್ಷೆ ಲತಾ,‌ ಉಪಾಧ್ಯಕ್ಷ ವಿನಯಚಂದ್ರ ಸೇನೆರೊಟ್ಟು, ಮಾಜಿ ಅಧ್ಯಕ್ಷ ಪಾಟಾಳಿ ಮಾತನಾಡಿದರು. ಅಧ್ಯಕ್ಷರುಗಳ ತಮ್ಮ ಭಾಷಣದಲ್ಲಿ, ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವಾದ ಕಾಜೂರಿನ ಅಭಿವೃದ್ಧಿಯಲ್ಲಿ ಪಂಚಾಯತ್ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು

ವೇದಿಕೆಯಲ್ಲಿ ಮಲವಂತಿಗೆ ಗ್ರಾ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಡಿ ದಿನೇಶ್ ಗೌಡ, ತುಂಗಪ್ಪ ಪೂಜಾರಿ ಕಾಜೂರು, ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನ:

ಪೊಲೀಸ್‌ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಚಿನ್ನದ ಪದಕ‌ ಪಡೆದ ಹೆಡ್‌ ಕಾನ್ಸ್‌ಟೇಬಲ್ ವೆಂಕಟೇಶ್ ನಾಯ್ಕ, ಇತ್ತೀಚೆಗೆ ಸೇನೆಯಿಂದ ನಿವೃತ್ತರಾದ ಯತೀಂದ್ರ ಹೆಚ್.ಜಿ ಕಡಿರುದ್ಯಾವರ, ಮೆಸ್ಕಾಂ ಇಲಾಖೆಯ ಪವರ್‌ಮೇನ್ ರಮೇಶ್ ಗೌಡ, ಮಲವಂತಿಗೆ ವಿಭಾಗದ ಅರಣ್ಯ ರಕ್ಷಕ ರಾಜು ಜಿ.ಎನ್ ಮತ್ತು ಅಂಚೆ ಇಲಾಖೆಯ ರಮೇಶ್ ಭಟ್ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇವರ ಪೈಕಿ ವೆಂಕಟೇಶ್ ನಾಯ್ಕ ಶುಭಕೋರಿದರು.

ಸಮಾರಂಭದಲ್ಲಿ ಉರೂಸ್ ಸಮಿತಿ ಉಪಾಧ್ಯಕ್ಷ ಕೆ ಮುಹಮ್ಮದ್ (ಪುತ್ತುಮೋನಾಕ), ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಯು ಕಮಾಲ್ ಕಾಜೂರು, ಸದಸ್ಯರಾದ ಎಂ. ಅಬೂಬಕ್ಕರ್ ಮಲ್ಲಿಗೆಮನೆ, ಬಿ.ಹೆಚ್ ಅಬ್ದುಲ್ ಹಮೀದ್, ಬದ್ರುದ್ದೀನ್ ಕಾಜೂರು, ಕೆ.ಹೆಚ್ ಸಿದ್ದೀಕ್, ಕೃಷಿಕರಾದ ಮೋಹನ್ ಗೌಡ ಬೆಡಿಗುತ್ತು, ತುಂಗಪ್ಪ ಪೂಜಾರಿ, ಆನಂದ ಮೈರ್ನೋಡಿ ಇವರು ಉಪಸ್ಥಿತರಿದ್ದರು.

ಉರೂಸ್ ಸಮಿತಿ ಜೊತೆ ಕಾರ್ಯದರ್ಶಿ ಎಂ.ಎ ಕಾಸಿಂ ಮಲ್ಲಿಗೆಮನೆ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು ನಿರೂಪಿಸಿದರು.

error: Content is protected !!