ಕಳೆಂಜ ಸರ್ವೆ ನಂಬ್ರ 309 ಜಂಟಿ ಸರ್ವೆಗೆ ಕ್ಷಣಗಣನೆ: ಪಟ್ಟು ಬಿಡದ ಶಾಸಕರು , ಅಧಿಕಾರಿಗಳಿಗೆ ಸವಾಲಾಗಿ ಕಾಡಲಿರುವ ಸರ್ವೆ ಕಾರ್ಯ: : ಸಂತ್ರಸ್ತರ ಸಮ್ಮುಖದಲ್ಲಿಯೇ ಅಳತೆ.. !

 

 

 

ಬೆಳ್ತಂಗಡಿ: ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಳೆಂಜ ಗ್ರಾಮದ ಸರ್ವೇ ಸಂಖ್ಯೆ 309 ರಲ್ಲಿ ನೂರಾರು ವರ್ಷಗಳಿಗಿಂತಲೂ ಹಿಂದೆ ವಾಸ್ತವ್ಯವಿದ್ದ ಲೋಲಾಕ್ಷ ಎಂಬ ಕೃಷಿಕರ ಮನೆ ತೆರವು ಕಾರ್ಯಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇ ಕಾರ್ಯಕ್ಕೆ ಸಂಬಂಧಿಸಿ ಕಳೆಂಜದಲ್ಲಿ ನ.17 ರಂದು ಸಂತ್ರಸ್ತರು ಹಾಗೂ ಶಾಸಕ ಹರೀಶ್ ಪೂಂಜ ಅವರ ಸಮ್ಮುಖದಲ್ಲಿ ಸಭೆ ನಡೆಯಿತು

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ , ಕಳೆಂಜದ ಸರ್ವೇ ನಂಬರ್ 309 ರಲ್ಲಿ ವಾಸವಿದ್ದ ಲೋಲಾಕ್ಷ ಅವರ ಮನೆ ಕೆಡವಿದ ಸಂದರ್ಭದಿಂದ ಈ ಪ್ರಕರಣ ಆರಂಭವಾಯಿತು. ಗಡಿಗುರುತಿನ ಅಂಚಿನಲ್ಲಿ ಇದೆ ಎಂಬ ಕಾರಣಕ್ಕಾಗಿ ಅರಣ್ಯ ಇಲಾಖೆ ಮನೆ ಅಡಿಪಾಯ ತೆರವು ಮಾಡಲು ಮುಂದಾಗಿತ್ತು. ಆ ಘಟನೆಯ ಕಾರಣಕ್ಕೋಸ್ಕರ ನಾನು ಸದನದಲ್ಲಿ ಹಕ್ಕಚ್ಯುತಿ ಮಂಡಿಸಿದ್ದೆ. ಸಭಾಧ್ಯಕ್ಷರು ಅದನ್ನು ಪರಿಶೀಲಿಸಿ ಅರಣ್ಯ ಇಲಾಖೆಯಿಂದ ಸರ್ವೇ ನಡೆಸಬೇಕೆಂದು ನಿರ್ಧಿರಿಸಿ ಆದೇಶಿಸಿದ್ದರು. ಅದರಲ್ಲಿ ಸರ್ವೇ ನಂಬರ್ 309 ಲೋಲಾಕ್ಷ ಅವರ ಮನೆ ಅದರೊಳಗೆ ಬರುತ್ತದೆ ಎಂದು ಇಲಾಖೆ ವರದಿ ನೀಡಿತ್ತು.

ಆದರೆ ಸರ್ವೇ ನಂಬರ್ 309 ರಲ್ಲಿ 8000 ಸಾವಿರ ಎಕ್ರೆ ಪ್ರದೇಶವಿದ್ದು, ಅದರಲ್ಲಿ 500 ರಿಂದ ಒಂದು ಸಾವಿರ ಎಕ್ರೆ ಹೆಚ್ಚುವರಿ ಭೂಮಿ ಇದೆ. ಹಾಗಾಗಿ ಇದನ್ನು ನನ್ನ ಸಮಕ್ಷಮದಲ್ಲಿ ಮರು ಸರ್ವೇ ಮಾಡಬೇಕೆಂದು ಹಕ್ಕುಚ್ಯುತಿ ಸಮಿತಿ ಮುಂದೆ ನನ್ನ ಅಭಿಪ್ರಾಯ ತಿಳಿಸಿದ್ದೆ. ಇದನ್ನು ಆಲಿಸಿದ ಸಮಿತಿ ಮತ್ತೆ ಸರ್ವೇ ಮಾಡಲು ಆದೇಶಿಸಿತ್ತು. ಆದೇಶ ಮಾಡಿ 6 ತಿಂಗಳಾಯಿತು. ಆದರೆ ಈ ಬಾರಿ ತೀವ್ರ ಮಳೆ ಸುರಿದ ಪರಿಣಾಮ ಮಳೆ ನಿಂತು ಬೇಸಿಗೆಯಲ್ಲಿ ಸರ್ವೇ ಮಾಡಲು ನಾನು ಆಗ್ರಹಿಸಿದ್ದೆ. ಹಾಗಾಗಿ ಇಂದಿನಿಂದ ಸರ್ವೇ ನಡೆಸಬೇಕೆಂದು ನಾವೆಲ್ಲ ಸೇರಿದ್ದೇವೆ ಎಂದು ಹೇಳಿದರು.

ಸರ್ವೇಗೆ ಕನಿಷ್ಠ ಮೂರು ತಿಂಗಳು ಬೇಕು. ನಾನೊಬ್ಬ ಜನಪ್ರತನಿಧಿಯಾಗಿ ಇಲ್ಲೇ ಇರಲು ಸಾಧ್ಯವಿಲ್ಲ. ಹಾಗಾಗಿ ಖಾಸಗಿ ಮೂವರು ಸರ್ವೇಯರ್ ಅವರನ್ನು ನೇಮಿಸಿ ಅವರಿಗೆ ವೇತನ ನೀಡುತ್ತೇನೆ ಎಂದಿದ್ದೆ. ನಮ್ಮ ಪರವಾಗಿ ಖಾಸಗಿ ಸರ್ವೇಯರ್ ಆಗಿ ದೇವರಾಜ್ ಎಂಬವರನ್ನು ನೇಮಿಸಿ ಅವರೊಂದಿಗೆ ಇನ್ನಿಬ್ಬರನ್ನು ನೇಮಿಸುವುದಾಗಿ
ತಿಳಿಸಿದರು.

200 ಮನೆಗಳ ಸಂತ್ರಸ್ತರು ಭಾಗವಹಿಸಿ:

309 ಸರ್ವೇ ನಂಬರ್ ನಡಿ 200 ಮನೆಗಳಿವೆ, ಈ ಪೈಕಿ 45 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಸರ್ವೇ ನಡೆಯುವಾಗ 200 ಮನೆಯಿಂದ ಕನಿಷ್ಠ ಪಕ್ಷ ದಿನಕ್ಕೆ 5 ಮಂದಿ ಸರ್ವೇ ನಡೆಸುವವರೊಂದಿಗೆ ಇರಬೇಕು. ಇದು ಹಾಸನದ ಗಡಿಯಿಂದ ದ.ಕ.ಜಿಲ್ಲೆ ಗಡಿ, ಚಿಕ್ಕಮಗಳೂರು ಗಡಿಯಿಂದ ಸರ್ವೇ ಕಾರ್ಯ ಆರಂಭವಾಗಬೇಕು. ಅದರಾಚೆಗೆ ದ.ಕ.ಜಿಲ್ಲೆ ವಿಸ್ತರಣೆ ಆಗುವುದಿಲ್ಲ. ಆ ಸರ್ವೇ ಪೂರ್ಣವಾದ ಬಳಿಕ ಊರಿನವರು ಸರಿ ಇದೆ ಎಂದು ಒಪ್ಪಿಕೊಂಡರೆ ಅದನ್ನು ಬಳಿಕ ಅನುಮೋದಿಸಲಾಗುತ್ತದೆ. ಬಳಿಕ ನಕಾಶೆ ತಯಾರಿಸಬೇಕು. ಗ್ರಾಮಸ್ಥರು ಒಪ್ಪದಿದ್ದಲ್ಲಿ ಸರ್ವೇ ಕಾರ್ಯ ಪೂರ್ಣ ಎಂದು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ನ.18 ರಿಂದಲೇ ಸರ್ವೇ ಕಾರ್ಯ ಆರಂಭಿಸಿ ಎಂದು ಶಾಸಕರು ತಿಳಿಸಿದರು.

309 ಸರ್ವೇ ಪೂರ್ಣವಾಗದೆ ಯಾವುದೇ ಕಾರಣಕ್ಕು ಅದರೊಳಗೆ ಇರುವವರನ್ನು ತೆರವು ಮಾಡಲು ಸಾಧ್ಯವಿಲ್ಲ. ಹಾಗಾಗಿ ಸರ್ವೇ ಮಾಡಿ ಹೆಚ್ಚುವರಿ ಜಾಗವನ್ನು 94 ಸಿ, ಅಥವಾ ಅಕ್ರಮ ಸಕ್ರಮದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. ನಾಳೆಯಿಂದ ಯಾವ ಯಾವ ಮನೆಯವರು ಸರ್ವೇಯಲ್ಲಿ ಭಾಗವಹಿಸಬೇಕೆಂದು ಪಟ್ಟಿ ಮಾಡಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸಂತ್ರಸ್ತರೋರ್ವರು ಮಾತನಾಡಿ, ಸರ್ವೇ ನಡೆಸುವ ವೇಳೆ ಇಲಾಖೆಯವರು ಕೋವಿ ಸಹಿತ ಅಗತ್ಯ ಸೌಕರ್ಯಗಳೊಂದಿಗೆ ಸುರಕ್ಷಾ ಕ್ರಮ ವಹಿಸಬೇಕು. ದಟ್ಟ ಅರಣ್ಯವಾದ್ದರಿಂದ ಕಾಡುಪ್ರಾಣಿಗಳಿವೆ. ಕಾಡುಗಳಲ್ಲಿ ಮಾರ್ಗ ಮಾಡುತ್ತಾ ಸಾಗಲು ಅಗತ್ಯ ಸೌಕರ್ಯ ಬೇಕು. ಹಾಗಾಗಿ ದಿನಕ್ಕೆ 25 ಮಂದಿಯಾದರು ಜತೆಗಿರಬೇಕು. ಇದಕ್ಕೆ ಪೂರಕ ಸಭೆಗಳು ಆಗಬೇಕು. ಆರ್ಥಿಕ ಸಹಕಾರದ ಅಗತ್ಯವೂ ಇದೆ. 309 ಸರ್ವೇ ತಂಡದಲ್ಲಿ ಕಾಡಿನಲ್ಲಿ ತಿರುಗಾಡಿ ಸ್ವಲ್ಪ ಅನುಭವಿ ಮಂದಿ ಜತೆಗೆಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಸರ್ವೇ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೇರಿ ಅನೇಕ ಮಂದಿ ಇರುತ್ತಾರೆ. ನಮ್ಮಲ್ಲಿ 25 ಮಂದಿ ಹೋಗಲು ಸಾಧ್ಯವಿಲ್ಲ. ಹಾಗಾಗಿ 5 ಮಂದಿ ದಿನಕ್ಕೆ ಕನಿಷ್ಠ ಪಕ್ಷ ನಿಗದಿ ಮಾಡೋಣ, ದಿನದ ಸರ್ವೇ ಕಾರ್ಯ ಸರಿಯಾಗಿದೆಯೋ ಇಲ್ಲವೋ ಎಂಬ ಬಗ್ಗೆ ಪ್ರತಿ ದಿನ ವರದಿ ನೀಡಬೇಕು ಎಂದು ತಿಳಿಸಿದರು. ಇದಕ್ಕೂ ಮುನ್ನ ಎಲ್ಲ ಫಲಾನುಭವಿಗಳ‌ಮನೆ ಭೇಟಿ ಮಾಡಬೇಕು. ಅವರಿಗೆ ದಿನಾಂಕ ಸೂಚಿಸಬೇಕು ಎಂದು ತಿಳಿಸಿದರು.

ತೆರವಿಗೆ ನೋಟಿಸ್ ನೀಡಿದಲ್ಲಿ ಉಪವಾಸ ಸತ್ಯಾಗ್ರಹ:

ಈ ಹಿಂದೆ ರೆಖ್ಯದಲ್ಲಿ 700 ಎಕ್ರೆ ನಾವು ಸರ್ವೇ ಮಾಡಿದಾಗ ಸಿಕ್ಕಿದ್ದು 1400 ಎಕ್ರೆ ಅರಣ್ಯ ಭಾಗ. ರೆಖ್ಯದ 140 ಮಂದಿಗೆ ಇದರಿಂದ ಭೂಮಿ ಸಿಗುತ್ತದೆ. ಆದರೆ ಇದು ಸರಕಾರದ ಮಟ್ಟದಲ್ಲಿ ಹಾಗೆ ಉಳಿದಿದೆ. ಯಾವುದೇ ಕಾರಣಕ್ಕೂ ರಾಜಕೀಯವಿಲ್ಲ. ಸರ್ವೇ ಕಾರ್ಯ ನಡೆಸಲೂ ನಾವು ರೆಡಿ. ನೀವು ಇನ್ನು ದಿನಾಂಕ ನೀಡಬೇಕು. ಒಂದು ವೇಳೆ ಅದರ ಮಧ್ಯೆ ಯಾರಿಗಾದರು
ತೆರವಿಗೆ ನೋಟಿಸ್ ನೀಡಿದರೆ ನಾವು ಇಲಾಖೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಆರ್.,
ಮೀಯಾರು, ನಿಡ್ಲೆ, ಕಳೆಂಜ ಸಹಿತ 309 ಸರ್ವೇ ನಂಬರ್ ಗೆ ಒಳಪಟ್ಟಂತೆ ಒಂದು ವರ್ಷದಿಂದ ಸರ್ವೇ ಕಾರ್ಯ ನಡೆಸಲಾಗಿದೆ. ಈ ಕುರಿತು ಸಂಪೂರ್ಣ ನಕಾಶೆ ಸಿದ್ಧವಾಗುವ ಹಂತದಲ್ಲಿದೆ. ಇದರಲ್ಲಿ ಹೆಚ್ಚುವರಿ ಪ್ರದೇಶ ಬಂದಂತಿಲ್ಲ. ಮತ್ತೊಮ್ಮೆ ಸರ್ವೇ ಕಾರ್ಯ ನಡೆಸಲು ಕನಿಷ್ಠ ಪಕ್ಷ ಆರರಿಂದ ರಿಂದ ಒಂದು ವರ್ಷ ಬೇಕಾದಿತು ಎಂದರು. ಈ ವಿಚಾರವಾಗಿ ಶಾಸಕರು ಪ್ರತಿಕ್ರಿಯೆ ನೀಡಿ ನೀವು ಅಷ್ಟು ಕಷ್ಟ ಎಂದಾದರೆ 309 ಸರ್ವೇ ನಂಬರ್ ಒಳಗಿರುವ 200 ಮನೆಗಳಿಗೆ ಪ್ರತ್ಯೇಕಿಸಿ ಸರ್ವೇ ನಂಬರ್ ನೀಡಿ. ಅದನ್ನು ಕಂದಾಯ ಇಲಾಖೆಯಡಿ ಜೋಡಿಸಿ ಅಕ್ರಮ ಸಕ್ರಮದಡಿ ಭೂಮಿ ನೀಡಲು ಸಾಧ್ಯವಾದರೆ ಮಾಡಿ ಎಂದರು. ಇದಕ್ಕೆ ಅಧಿಕಾರಿಗಳು ಮೌನವಹಿಸಿದರು. ಈಗಾಗಲೆ ಸರಕಾರ ಮರು ಸರ್ವೇಗೆ ಆದೇಶಿಸಿದೆ ಹಾಗಾಗಿ ಮರು ಸರ್ವೇ ಮಾಡಲೇ ಬೇಕು ಎಂದು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಉಪ್ಪಿನಂಗಡಿ ವಲಯರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ., ಶಿವಮೊಗ್ಗ ಕಾರ್ಯಯೋಜನೆ ವಲಯರಾಣ್ಯಾಧಿಕಾರಿ
ನವೀನ್ ಕುಮಾರ್, ವಲಯ ಅರಣ್ಯಾಧಿಕಾರಿ ಶಿವರಾಜ್ ಮಠದ್, ಸಿಬಂದಿ, ಕಳೆಂಜ ಗ್ರಾ.ಪಂ. ಉಪಾಧ್ಯಕ್ಷ ವಿಶ್ವನಾಥ್, ಸದಸ್ಯರು, ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಸಹಿತ ಪ್ರಮುಖರು ಉಪಸ್ಥಿತರಿದ್ದರು.

error: Content is protected !!