
ಬೆಳ್ತಂಗಡಿ: ಜನಸ್ಪಂದನ ಸಭೆಯ ಮಾಹಿತಿ ಪಂಚಾಯತ್ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಸರಿಯಾಗಿ ತಿಳಿಸದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಶೋಕಾಸ್ ನೋಟೀಸ್ ನೀಡುವಂತೆ ಶಾಸಕ ಹರೀಶ್ ಪೂಂಜ ಸೂಚಿಸಿದ ಘಟನೆ
ಕಾಶಿಪಟ್ಣದಲ್ಲಿ ನಡೆದಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಕಾಶಿಪಟ್ಣ, ಗ್ರಾಮ ಮಟ್ಟದ ಜನ ಸ್ಪಂದನ ಸಭೆಯು ಕಾಶಿಪಟ್ಣ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನ 18 ರಂದು ನಡೆಯಿತು. ಸಭೆಯ ಪ್ರಾರಂಭದಲ್ಲೇ ಜನಸ್ಪಂದನ ಸಭೆಯ ಮಾಹಿತಿ ಪಂಚಾಯತ್ ಸದಸ್ಯರಿಗಾಗಲಿ ಗ್ರಾಮಸ್ಥರಿಗಾಗಲಿ ಸರಿಯಾಗಿ ತಿಳಿದಿಲ್ಲ ಈ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಗಿಂತ ಅಧಿಕಾರಿಗಳೇ ಹೆಚ್ಚಿದ್ದಾರೆ.ನಿನ್ನೆ ಮಧ್ಯಾಹ್ನ ಜನಸ್ಪಂದನ ಸಭೆ ಇದೆ ಎಂಬ ಮಾಹಿತಿಯ ಸಂದೇಶ ವಾಟ್ಸಪ್ ಮೂಲಕ ಬಂದಿದೆ. ವಾಟ್ಸಪ್ ಇಲ್ಲದವರಿಗೆ ಮಾಹಿತಿಯೇ ಇಲ್ಲ ಈ ಸಭೆ ಅಧಿಕಾರಿಗಳಿಗಾಗಿಯೋ ಅಥವಾ ಗ್ರಾಮಸ್ಥರಿಗಾಗಿಯೋ ಕೇವಲ ವಾಟ್ಸಪ್ ಸಂದೇಶ ಒಂದು ದಿನ ಮುಂಚೆ ಹಾಕಿದರೆ ಪಂಚಾಯತ್ ಸದಸ್ಯರಿಗೆ ಅಥವಾ ಸಾರ್ವಜನಿಕರಿಗೆ ಮಾಹಿತಿ ಹೇಗೆ ಗೊತ್ತಾಗುತ್ತದೆ. ಅದ್ದರಿಂದ ಈ ಸಭೆ ಇನ್ನೊಮ್ಮೆ ಆಯೋಜಿಸಬೇಕು ಎಂದು ಪಂಚಾಯತ್ ಸದಸ್ಯರೊಬ್ಬರು ಶಾಸಕರಲ್ಲಿ ಅಸಾಮಾಧಾನ ಹೊರಹಾಕಿದರು. ಈ ವೇಳೆ ಶಾಸಕ ಹರೀಶ್ ಪೂಂಜ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ ನವೆಂಬರ್ 13 ತಾರೀಕಿಗೆ ಕಾರ್ಯಕ್ರಮದ ಮಾಹಿತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ತಿಳಿಸಲಾಗಿದೆ ಎಂದರು. ಈ ವೇಳೆ ಸಭೆಯ ಮಾಹಿತಿ ಸದಸ್ಯರಿಗೆ ಯಾವಾಗ ತಿಳಿಸಿದ್ದೀರಿ ಎಂದು ಪಿಡಿಒ ಅವರಲ್ಲಿ ಪ್ರಶ್ನಿಸಿದಾಗ ಇನ್ನೊಂದು ಪಂಚಾಯತ್ ನಲ್ಲಿ ಕಾರ್ಯಕ್ರಮದ ಒತ್ತಡ ಇದ್ದುದರಿಂದ ಗ್ರೂಪಿನಲ್ಲಿ ಸಂದೇಶ ಹಾಕಲಾಗಿದೆ. ಈ ವೇಳೆ ಇನ್ನೊಂದು ಪಂಚಾಯತ್ ಕೆಲಸದ ಒತ್ತಡದ ಬಗ್ಗೆ ಇಲ್ಲಿ ತಿಳಿಸಬೇಡಿ ಬೇಜವಾಬ್ದಾರಿಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಡಿ, ಕರ್ತವ್ಯ ಲೋಪ ಎಸಗಿದ ಪಿಡಿಒ ಅವರಿಗೆ ಶೋಕಾಸ್ ನೋಟೀಸ್ ನೀಡುವಂತೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಶಾಸಕರು ಸೂಚಿಸಿದರಲ್ಲದೇ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದರು. ತಾಲೂಕು ಮಟ್ಟದ ಅಧಿಕಾರಿಗಳು ಜನರ ಬಳಿಗೆ ಬಂದು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಇಂತಹ ಜನಸ್ಪಂದನ ಸಭೆಗಳು ಬೆಳ್ತಂಗಡಿ ತಾಲೂಕಿನ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವುದು ರಾಜ್ಯದಲ್ಲೇ ಮೊದಲು .ಗ್ರಾಮೀಣ ಭಾಗಗಳ ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡದೇ ಇರುವುದರಿಂದ ಅಭಿವೃದ್ಧಿ ಕೆಲಸ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಈ ವೇಳೆ ಶಾಸಕರು ತಿಳಿಸಿದರು.
ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷೆ, ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ಈ ವೇಳೆ ಸಾರ್ವಜನಿಕರ .ವಿವಿಧ ಸಮಸ್ಯೆಗಳನ್ನು ಶಾಸಕರು ಆಲಿಸಿ ಸೂಕ್ತ ಪರಿಹಾರದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
.