ಎಲ್ಲರಿಗೂ ಸಮಾನವಾಗಿ ಸಾಧಿಸುವುದಕ್ಕೆ ಇರುವ ಅವಕಾಶವೇ ಯಶಸ್ಸು

ಬೆಳ್ತಂಗಡಿ: ಯಶಸ್ಸು ಎಂದರೆ ಎಲ್ಲರಿಗೂ ಸಮಾನವಾಗಿ ಸಾಧಿಸುವುದಕ್ಕೆ ಇರುವ ಅವಕಾಶ. ಅಂತಹ ಅವಕಾಶಗಳನ್ನು ಪಡೆಯಲು ಸತತ ಪರಿಶ್ರಮದ ಅಗತ್ಯವಿದೆ. ಯಶಸ್ಸು ಹೊರಗಿನ ಬಣ್ಣ, ವರ್ಗಗಳಲ್ಲಿರುವುದಿಲ್ಲ. ನಾವು ಯಾವ ರೀತಿಯಲ್ಲಿ ಒಳಗಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂಬುದರ ಆಧಾರದಲ್ಲಿದೆ ಎಂದು ರೋಟರಿ ಡಿಸ್ಟ್ರಿಕ್ಟ್ ಚಯರ್‌ಮೆನ್ ವಿನ್ಸೆಂಟ್ ಡಿ ಕೋಸ್ತ ಮೂಡಬಿದ್ರೆ ಹೇಳಿದರು.

ಅವರು ಬುಧವಾರ ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಮತ್ತು ಬೆಳಾಲು ಇಂಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕು ಪ್ರೌಢಶಾಲೆಗಳ ಇಂಟರಾಕ್ಟ್ ಕ್ಲಬ್ ಸದಸ್ಯರಿಗಾಗಿ ಸೌಹಾರ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ರೋಟರಿ ಕ್ಲಬ್‌ನ ಇಂಟರಾಕ್ಟ್ ಕ್ಲಬ್ ನ ಅಬೂಬಕರ್ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್ ವಹಿಸಿದ್ದರು.

ರೋಟರಿ ಕ್ಲಬ್ ಸದಸ್ಯರಾದ ರತ್ನವರ್ಮ ಜೈನ್, ರಕ್ಷಾ ರಾಘ್ನೇಶ್, ಉಜಿರೆಯ ಉಜಿರೆ ಎಸ್‌ಡಿಎಂ ಪ್ರೌಢಶಾಲೆ (ಸಿಬಿಎಸ್‌ಇ) ಪ್ರಿನ್ಸಿಪಾಲ್ ಮನಮೋಹನ್ ನಾಯಕ್, ಇಂಟರಾಕ್ಟ್ ಕ್ಲಬ್‌ನ ಮಾರ್ಗದರ್ಶಿ ಶಿಕ್ಷಕ ಗಣೇಶ್ವರ್ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಬೆಳಾಲು ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಾನಂದ ವಂದಿಸಿದರು. ವಿದ್ಯಾರ್ಥಿನಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

error: Content is protected !!