ಬೆಳ್ತಂಗಡಿ : ‘ಗೆಜ್ಜೆಗಿರಿ ಇಂದು ವಿಶ್ವದ ಸಮಸ್ತ ಬಿಲ್ಲವ ಸಮುದಾಯದ ಕ್ಷೇತ್ರವಾಗಿ ಬೆಳಗಿದೆ. ಎತ್ತರಕ್ಕೆ ಬೆಳೆದ ಕ್ಷೇತ್ರದ ಹೆಸರನ್ನು ಉಳಿಸುವುದು ಸಮಸ್ತ ಬಿಲ್ಲವರ ಜವಾಬ್ಧಾರಿಯಾಗಿದೆ’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಫೆ.26ರಿಂದ ಮಾರ್ಚ್ 2ರವರೆಗೆ ನಡೆಯುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
‘ಗೆಜ್ಜೆಗಿರಿ ಮತ್ತು ಪಡುಮಲೆ ಎಂಬ ಎರಡು ಕ್ಷೇತ್ರಗಳ ಬಗ್ಗೆ ಇಂದು ವಿವಾದ ಕಾಣಿಸಿಕೊಂಡಿದೆ. ಆ ಎರಡೂ ಕ್ಷೇತ್ರಗಳು ಸಮುದಾಯದ ಸೊತ್ತುಗಳು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಯಾವುದೇ ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಸ್ವಾರ್ಥವನ್ನು ಯಾವ ಕಾಲಕ್ಕೂ ಕೋಟಿ ಚೆನ್ನಯರು ಒಪ್ಪುವುದಿಲ್ಲ. ಹಾಗಾಗಿ ಸ್ವಾರ್ಥವನ್ನು ಬದಿಗೊತ್ತಿ ಕ್ಷೇತ್ರವನ್ನು ಬೆಳಗಿಸುವಂತಾಗಬೇಕು’ ಎಂದರು.
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ಪಿತಾಂಬರ ಹೇರಾಜೆ ಮಾತನಾಡಿ, ‘ಗೆಜ್ಜೆಗಿರಿ ಕ್ಷೇತ್ರ ಸಮಾಜದ ಪ್ರತಿಯೊಬ್ಬರ ಸಹಕಾರದಿಂದ ಬೆಳಗಿದ ಕ್ಷೇತ್ರವಾಗಿದೆ. ಇಂದಿಗೂ ಇಲ್ಲಿಗೆ ಸಾವಿರಾರು ಜನ ಬರುತ್ತಿದ್ದಾರೆ. ಪ್ರತಿಯೊಂದು ಕಾರ್ಯದಲ್ಲೂ ಇಲ್ಲಿ ಪಾರದರ್ಶಕ ಪ್ರಕ್ರಿಯೆ ಕಾಣಬಹುದು. ಜನರ ಭಕ್ತಿಯ ಕ್ಷೇತ್ರವಾಗಿರುವುದರ ಜೊತೆಗೆ ಶ್ರೇಷ್ಠ ಪ್ರವಾಸಿ ತಾಣವಾಗಿ ಬೆಳಗುತ್ತಿದೆ’ ಎಂದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ನ್ಯಾಯವಾದಿ ಮನೋಹರ್ ಇಳಂತಿಲ ಮಾತನಾಡಿ, ‘ಗೆಜ್ಜೆಗಿರಿಯಲ್ಲಿ ನಡೆದ ಬ್ರಹ್ಮಕಲಶವೇ ಆ ಕ್ಷೇತ್ರದ ಕಾರಣಿಕ ಶಕ್ತಿಯ ಪ್ರತೀಕ ಎನ್ನಬಹುದು. ಇಂತಹ ಪುಣ್ಯ ಕ್ಷೇತ್ರಕ್ಕೆ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಈಗಾಗಲೇ ಗೆಜ್ಜೆಗಿರಿ ಕ್ಷೇತ್ರದ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಲೇರಿರುವ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಸಮಾಜದ ಹಿರಿಯ ನಾಯಕರುಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆ. ವಸಂತ ಬಂಗೇರರ ನೇತೃತ್ವದಲ್ಲಿ ಸಂಧಾನದ ಮೂಲಕ ಬಗೆಹರಿಸಬೇಕೆಂಬುದು ಗೆಜ್ಜೆಗಿರಿ ಭಕ್ತರ ಆಶಯವಾಗಿದೆ ಎಂದರು.
ವೇದಿಕೆಯಲ್ಲಿ ಕ್ಷೇತ್ರಾಡಳಿತ ಸಮಿತಿ ಸದಸ್ಯೆ ಸುಜಿತಾ ವಿ ಬಂಗೇರ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಜಯರಾಮ ಬಂಗೇರ, ಕಾರ್ಯದರ್ಶಿ ನಾರಾಯಣ ಸುವರ್ಣ, ಕೋಶಾಧಿಕಾರಿ ಚಿದಾನಂದ ಪೂಜಾರಿ, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಅರುಣ್ ಕೋಟ್ಯಾನ್ ಇದ್ದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿ ಬೆಳ್ತಂಗಡಿ ತಾಲ್ಲೂಕು ಸಮಿತಿ ಕಾರ್ಯದರ್ಶಿ ನಿತ್ಯಾನಂದ ನಾವರ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್ ವಂದಿಸಿದರು.