ಬೆಳ್ತಂಗಡಿ: ಸರಕಾರಿ ಸೇವೆಯಲ್ಲಿ ವರ್ಗಾವಣೆ, ಪದೋನ್ನತಿ, ನಿವೃತ್ತಿ ಇವುಗಳೆಲ್ಲವೂ ಸರ್ವೇ ಸಾಮಾನ್ಯ ಸಂಗತಿ. ನಾವು ಕರ್ತವ್ಯದಲ್ಲಿರುವ ವೇಳೆ ಸಲ್ಲಿಸುವ ಪ್ರಾಮಾಣಿಕ ಜನಪರ ಸೇವೆ ನಮ್ಮನಿವೃತ್ತಿಯ ಬಳಿಕದ ಜೀವನದಲ್ಲೂ ನಮಗೆ ಗೌರವವನ್ನು ತಂದುಕೊಡುತ್ತದೆ ಎಂದು ಧರ್ಮಸ್ಥಳ ಠಾಣಾ ಎಸ್.ಐ ಪವನ್ ನಾಯಕ್ ಹೇಳಿದರು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ಆಶ್ರಯದಲ್ಲಿ, ಅನಂತ ಫಡ್ಕೆ ಮೆಮೋರಿಯಲ್ ಎಜುಕೇಷನ್ ಮತ್ತು ಸೋಶಿಯಲ್ ವೆಲ್ಫೇರ್ ಟ್ರಸ್ಟ್ , ಹಾಗೂ ಉದ್ಯಮಿಗಳ ಸಹಕಾರದಲ್ಲಿ ಮುಂಡಾಜೆಯಲ್ಲಿ ಇತ್ತೀಚೆಗೆ ನಡೆದ ಪದೋನ್ನತಿ ಹೊಂದಿದ್ದವರಿಗೆ ಅಭಿನಂದನೆ, ನಿವೃತ್ತರಿಗೆ ಬೀಳ್ಕೊಡುಗೆ, ಗ್ರಾ.ಪಂ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ವೃತ್ತಿ ಹಾಗೂ ಸೇವೆಯಲ್ಲಿ ಪ್ರಾಮಾಣಿಕತೆ ಇದ್ದರೆ ಜನರು ಮೆಚ್ಚುತ್ತಾರೆ,ಅಂತಹ ವ್ಯಕ್ತಿಗಳು ಅಭಿನಂದನೆಗೆ ಅರ್ಹರಾಗುತ್ತಾರೆ. ಯಾರ ನಿರ್ಗಮನದಿಂದ ಜನ ನಿಜವಾದ ಅರ್ಥದಲ್ಲಿ ನೋವು ವ್ಯಕ್ತಪಡಿಸುತ್ತಾರೋ ಅಂತವರ ಕರ್ತವ್ಯದ ಅವಧಿಯ ಸೇವೆ ಜನರ ಮನಸ್ಸು ಮುಟ್ಟಿದೆ ಎಂದು ತಿಳಿಯಬಹುದು ಎಂದರು.
ಮುಂಡಾಜೆ ಅಂಚೆ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣಪ್ಪ ಪೂಜಾರಿ, ಗ್ರಾ.ಪಂ ನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಕಾರ್ಯದರ್ಶಿ ಯಾಗಿ ಪದೋನ್ನತಿ ಹೊಂದಿದ ಗಿರಿಯಪ್ಪ ಗೌಡ ಮತ್ತು ನಾರಾಯಣ ನಾಯ್ಕ, ಗ್ರಾ.ಪಂ ಅಧ್ಯಕ್ಷೆ ರಂಜಿನಿ ರವಿ, ಉಪಾಧ್ಯಕ್ಷೆ ದಿಶಾ ಪಟವರ್ಧನ್, ಸದಸ್ಯರಾದ ರಾಮಣ್ಣ ಶೆಟ್ಟಿ ಅಗರಿ,ಗಣೇಶ ಬಂಗೇರ, ಅಶ್ವಿನಿ, ಸುಮಾ, ಯಶೋದಾ, ವಿಮಲಾ, ರವಿಚಂದ್ರ, ಜಗದೀಶ್ ನಾಯ್ಕ್ ಇವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಉದ್ಯಮಿಗಳಾದ ಪ್ರಹ್ಲಾದ ಫಡ್ಕೆ, ಅರೆಕಲ್ಲು ರಾಮಚಂದ್ರ ಭಟ್,ವಸುಜಿತ್ ಭಿಡೆ, ಡಾ.ಶಿವಾನಂದ ಸ್ವಾಮಿ ಶುಭ ಕೋರಿದರು. ಸಮಾರಂಭದಲ್ಲಿ ಯಂಗ್ ಚಾಲೆಂಜರ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ನಿರೂಪಿಸಿದರು, ನಾರಾಯಣ ಪೂಜಾರಿ ವಂದಿಸಿದರು.