ವಾಕಿಂಗ್ ಹೋಗುತಿದ್ದಾಗ ಬೈಕ್ ಡಿಕ್ಕಿ: ಕೊಡುಗೈ ದಾನಿ ಉಜಿರೆ ಚಂದ್ರಮೋಹನ ರೈ ಸಾವು

ಬಂಟರ ಸಂಘಕ್ಕೆ ತುಂಬಲಾರದ ನಷ್ಟ : ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸಂತಾಪ

ಉಜಿರೆ: ನಡೆದುಕೊಂಡು ಹೋಗುತಿದ್ದಾಗ ಬೈಕ್ ಡಿಕ್ಕಿಯಾಗಿ ನಿವೃತ್ತ ಉಜಿರೆ ಗ್ರಾಮದ ನಿವಾಸಿ ಕೆ. ಚಂದ್ರಮೋಹನ ರೈ (78)ಭಾನುವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಅವರು ಶನಿವಾರ ಸಂಜೆ ವಾಕಿಂಗ್ ಹೋಗಿ ಮನೆಗೆ ಹಿಂದಿರುಗುವಾಗ ಬೈಕ್ ಡಿಕ್ಕಿಯಾಗಿ ಉಜಿರೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರಗೆ ದಾಖಲಿಸಿದ್ದು ಅಲ್ಲಿ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಉಜಿರೆ, ಬಂಟ್ವಾಳ, ಪುತ್ತೂರು, ಮಂಗಳೂರು ಮೊದಲಾದ ಊರುಗಳಲ್ಲಿ ಗ್ರಾಮಕರಣಿಕರಾಗಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿದ ಅವರು ನಿವೃತ್ತಿಯ ಬಳಿಕ ಉಜಿರೆಯಲ್ಲಿ ನೆಲೆಸಿದ್ದರು

ಸೇವಾ ಮನೋಭಾವ:

ತನ್ನ ವೃತ್ತಿಯ ಜೊತೆಗೆ ಅವರು ಅನೇಕ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದು ಸಮಾಜ ಸೇವೆಯಲ್ಲಿ ನಿರತರಾಗಿದ್ದರು.
ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುಸ್ತಕಗಳನ್ನು ಹಾಗೂ ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸುತ್ತಿದ್ದರು.
ಬಡವರ ಮದುವೆಗೂ ಆರ್ಥಿಕ ಸಹಾಯ, ಸಹಕಾರ ನೀಡುತ್ತಿದ್ದರು. ಯಕ್ಷಗಾನದ ವಿಶೇಷ ಅಭಿಮಾನಿಯಾಗಿದ್ದ ಅವರು ಉಜಿರೆಯಲ್ಲಿ ಬಯಲಾಟ ಪ್ರದರ್ಶನ, ಯಕ್ಷಗಾನ ತಾಳಮದ್ದಳೆಯ ಪ್ರಾಯೋಜಕರಾಗಿ ಸಹಕರಿಸಿದ್ದರು.
ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಬೆಳ್ತಂಗಡಿ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವರು ಸೇವೆ ಮಾಡಿದ್ದಾರೆ.
ಕಂದಾಯ ಇಲಾಖೆ ನಿಯಮಾವಳಿ ಬಗ್ಗೆ ವಿಶೇಷ ಪರಿಣತರಾಗಿದ್ದ ಅವರು ಇಲಾಖೆಯ ಸೌಲಭ್ಯ ಪಡೆಯುವ ಬಗ್ಗೆ ಮಾರ್ಗದರ್ಶನ, ಸಹಕಾರ ನೀಡಿ ಜನಾನುರಾಗಿಯಾಗಿದ್ದರು.
ಪತ್ನಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಂದಾ ರೈ, ಓರ್ವ ಮಗ ಮತ್ತು ಓರ್ವ ಮಗಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

ಬಂಟರ ಸಂಘಕ್ಕೆ ತುಂಬಲಾರದ ನಷ್ಟ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಸಂತಾಪ

ಕೊಡುಗೈ ದಾನಿ ಚಂದ್ರಮೋಹನ ರೈ ನಿಧನಕ್ಕೆ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಬೆಳ್ತಂಗಡಿ ಬಂಟರ ಸಂಘದ ಮಹಾಪೋಷಕರಾದ ಚಂದ್ರಮೋಹನ ರೈ ನಿಧನದ ಸುದ್ಧಿ ತಿಳಿದು ಅಘಾತವಾಗಿದೆ. ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಅತೀ ಉತ್ಸಾಹದಲ್ಲಿ ಪಾಲ್ಗೊಂಡು ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು ಸಂಘದ ಅಭಿವೃದ್ಧಿಯ ಬಗ್ಗೆಯೇ ಯೋಚಿಸುತ್ತ ಇದ್ದ ಅವರು ಅತ್ಯುತ್ತಮ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ತಾಲೂಕಿನ ಹಲವು ಮಕ್ಕಳಿಗೆ ಬಂಟರ ಸಂಘದ ಮೂಲಕ ವಿದ್ಯಾರ್ಥಿ ವೇತನವನ್ನು ಅರ್ಥಿಕ ಸಹಾಯ ನೀಡುತ್ತಾ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತಿದ್ದರು. ಅದಲ್ಲದೆ ಬಡವರ ಮದುವೆ ಇನ್ನಿತರ ಕಾರ್ಯಗಳಿಗೂ ಧನ ಸಹಾಯ ಮಾಡುತ್ತ ಜನರ ಕಷ್ಟ ನೋವಲ್ಲಿ ಭಾಗಿಯಾಗುತಿದ್ದರು ಇವರ ಸಾವು ಬಂಟರ ಸಂಘಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

error: Content is protected !!