ಸ್ವಚ್ಛ ನಗರಿಗೆ ಆರೋಗ್ಯದ ಭೀತಿ: ನಗರ ಸೌಂದರ್ಯಕ್ಕೆ ಅಸಮರ್ಪಕ ಚರಂಡಿಯಿಂದ ಕೊಳಚೆ ನೀರಿನ ಸಮಸ್ಯೆ: ಬೆಳ್ತಂಗಡಿ ತಾಲೂಕು ಜನತೆಗೆ ಅನಾರೋಗ್ಯ ಭಾಗ್ಯ: ಜೀವ ನದಿ ಸೇರುತ್ತಿದೆ ನಗರದ ಕೊಳಚೆ: ಸ್ವಚ್ಛತೆಯ ಅರಿವು ಮೂಡಿಸಬೇಕಾದವರ ಅವ್ಯವಸ್ಥೆ

 

ಬೆಳ್ತಂಗಡಿ: ಕೊರೋನಾ ಬರುತ್ತೆ ಮಾಸ್ಕ್ ಹಾಕಿಕೊಳ್ಳಿ… ಸಾಮಾಜಿಕ ಅಂತರ ಕಾಪಾಡಿಕೊಳ್ಳಿ… ನೀರು ನಿಲ್ಲಲು ಬಿಡಬೇಡಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ ಬರುತ್ತದೆ ಎಂದು ಧ್ವನಿವರ್ಧಕಗಳ ಮೂಲಕ ಸ್ವಚ್ಛತೆಯ ಪಾಠ ಮಾಡುವ ಅಧಿಕಾರಿಗಳೇ ಇಡೀ‌ ಬೆಳ್ತಂಗಡಿ ನಗರ ಹಾಗೂ ಸುತ್ತಮುತ್ತಲಿನ ಊರುಗಳ ಜನತೆಗೆ ಅನಾರೋಗ್ಯ ಹರಡುತ್ತಿರುವ ಹಸಿ ಬಿಸಿ ಕಥೆಯಿದು…

ಬೆಳ್ತಂಗಡಿಯಲ್ಲಿ ಕೇಂದ್ರ ಭಾಗದಲ್ಲಿಯೇ ಇಂತಹಾ ಘಟನೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ, ನಗರದಲ್ಲಿ ಈ ಸ್ವಚ್ಛತೆಯ ಸಮಸ್ಯೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮೌನ ವಹಿಸಿದ್ದಾರೆ. ಇಂತಹ ಕೊಳಚೆಯಿಂದ ಸುತ್ತಮುತ್ತ ರೋಗ ಬರುವ ಭೀತಿ ಇದ್ದರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ.

ನಗರಕ್ಕೆ ನೀರು ಪೂರೈಕೆ:
ಬೆಳ್ತಂಗಡಿ ಕೇಂದ್ರ ಭಾಗದಲ್ಲಿ ಹರಿಯುತ್ತಿರುವ ಸೋಮಾವತಿ ನದಿ ಬೆಳ್ತಂಗಡಿ ಜನರ ಜೀವನಾಡಿ. ಈ ನದಿಯಿಂದಲೇ ನಗರದ ಜನತೆಗೆ ನಿತ್ಯ ಬಳಕೆಗೆ ನೀರು ಪೊರೈಕೆ ಮಾಡಲು ನಗರ ಪಂಚಾಯತ್ ವತಿಯಿಂದ ರಾಘವೇಂದ್ರ ಮಠದ ಹತ್ತಿರ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸಿದೆ . ಆದರೆ ಇದರ ಕೆಳಬಾಗ ಸೇತುವೆಯ ಹತ್ತಿರವೇ ನದಿಗೆ ಬೆಳ್ತಂಗಡಿ ನಗರ ಪಂಚಾಯತ್ ಕೊಳಚೆ ನೀರು ಹರಿಸಿ ಮಾಲಿನ್ಯ ಉಂಟು ಮಾಡುವ ಕೆಲಸ ಮಾಡುತ್ತಿದೆ ಎಂದರೆ ನಂಬಲೇ ಬೇಕಾಗಿದೆ. ಬೆಳ್ತಂಗಡಿಯ ಮುಖ್ಯ ಪೇಟೆಯ ಕೊಳಚೆ ನೀರನ್ನು ಚರಂಡಿಯ ಮೂಲಕ ನದಿಗೆ ಹರಿಯುವಂತೆ ಮಾಡಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂಬಂತೆ ವರ್ತಿಸುತ್ತಿದ್ದಾರೆ, ಈ ಗಂಭೀರ ಸಮಸ್ಯೆಗೆ ಪರಿಹಾರ ಸೂಚಿಸಬೇಕಾದ ಅಧಿಕಾರಿಗಳು ಇನ್ನು ನಿದ್ದೆಯಿಂದ ಎದ್ದಂತಿಲ್ಲ .ಸಂತೆಕಟ್ಟೆಯಿಂದ ಬಸ್ ನಿಲ್ದಾಣದ ವರೆಗೆ ಅದಲ್ಲದೇ ಮೂರು ಮಾರ್ಗದಿಂದ ಮಿನಿ ವಿಧಾನ ಸೌಧಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಚರಂಡಿಯನ್ನು ಇಣುಕಿದರೆ ಗೊತ್ತಾಗಬಹುದು ಅಧಿಕಾರಿಗಳ ನಿರ್ಲಕ್ಷ. ಇಲ್ಲಿ ನಡೆದುಕೊಂಡು ಹೋಗಬೇಕಾದರೆ ಮೂಗು ಮುಚ್ಚಿ ಹೋಗುವಂತಹ ಸಂದಿಗ್ದ ಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಕೆಲವೊಂದು ಕಾಂಪ್ಲೆಕ್ಸ್ ಗಳೂ ಚರಂಡಿಗೆ ಕೊಳಚೆ ನೀರನ್ನು ಬಿಡುತ್ತಿವೆ ಎನ್ನುವ ಮಾಹಿತಿಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನಗರದ ಕೊಳಚೆ ನೀರು ಬಿಡುವುದರಿಂದ ಕಿಂಡಿ‌‌ ಅಣೆಕಟ್ಟಲ್ಲಿ ನೀರು ನಿಲ್ಲಿಸಲು ಸಮಸ್ಯೆ:
ಇಲ್ಲಿ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲೂ ಕಾರಣವಿದೆ. ನದಿ ನೀರಿಗೆ ಯಾರಾದರೂ ಕಸ ಎಸೆದು ಮಾಲಿನ್ಯ ಉಂಟು ಮಾಡಿದರೆ ಅವರಿಗೆ ದಂಡ ಹಾಕಬೇಕು ಎಂಬ ಅರಿವು ಅಧಿಕಾರಿಗಳಿಗೆ ಇದೆ. ಅದೇ ರೀತಿ ತಮ್ಮಿಂದಲೂ ನಗರ ಕಲುಷಿತಗೊಳ್ಳಬಾರದು ಎಂಬ ಅರಿವು ಅಧಿಕಾರಿಗಳಿಗಿಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕರದ್ದು. ಅದಲ್ಲದೆ ಸೇತುವೆಯ ಕೆಳಬಾಗದಲ್ಲಿ ಕಿಂಡಿ ಅಣೆಕಟ್ಟಿಗೆ ತಡೆ ನಿರ್ಮಿಸಿ ನೀರು ನಿಲ್ಲಿಸುವ ಕಾರ್ಯ ಮಾಡಬಹುದು . ಒಂದುವೇಳೆ ನೀರು ನಿಲ್ಲಿಸುವ ಕಾರ್ಯ ಮಾಡಿದಲ್ಲಿ ಕೊಳಚೆ ನೀರು ಈ‌ ನಿಂತ ನೀರಿಗೆ ಸೇರಿ‌ ಇನ್ನಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.

ನೀರಿಂಗಿಸುವಿಕೆಗೆ ತಡೆ:
ನಗರ ಪಂಚಾಯತ್ ನ ನಿರ್ಲಕ್ಷ್ಯದಿಂದಾಗಿ ಕಿಂಡಿ ಅಣೆಕಟ್ಟಿಗೆ ತಡೆ ನಿರ್ಮಿಸಿದಲ್ಲಿ ನೀರು ಇಂಗಿಸುವಿಕೆ ಸಾಧ್ಯ. ಇದರಿಂದ ನದಿಯ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಬಹುತೇಕ ಕೊಳವೆ ಬಾವಿ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ ಇಲ್ಲವಾದಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ನೀರಿನ ಕೊರತೆ ಖಚಿತ:
ಈ ಬಾರಿ ಫೆಬ್ರವರಿಯಲ್ಲಿಯೇ ನದಿಯ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದೇ ರೀತಿ ಇರುವ ನೀರನ್ನೂ ಕಲುಷಿತಗೊಳಿಸಿ, ನೀರು ನಿಲ್ಲುಸಲೂ ಸಾಧ್ಯವಾಗದಿದ್ದಲ್ಲಿ ಈ ಬಾರಿ ಗಣನೀಯ ಪ್ರಮಾಣದಲ್ಲಿ ನೀರಿನ ಕೊರತೆ ಎದುರಿಸುವುದು ಖಚಿತ ಎಂದು ಸ್ಥಳೀಯರು ತಿಳಿಸುತ್ತಾರೆ.

ಕೊಳಚೆ ನೀರು ಹರಿಯಲು ಬೇಕಿದೆ ಶಾಶ್ವತ ಪರಿಹಾರ:
ನಗರ ಪಂಚಾಯತ್ ಅಧಿಕಾರಿಗಳು ಕೊಳಚೆ ನೀರಿನ ಚರಂಡಿಗಳ ಸಮರ್ಪಕ ನಿರ್ವಹಣೆ ಮಾಡಲು ಯೋಜನೆ ರೂಪಿಸಬೇಕಿದೆ. ನಗರದ ಹೃದಯ ಭಾಗದಲ್ಲಿ ಇರುವ ಚರಂಡಿಗಳು ಅಸಮರ್ಪಕವಾಗಿ ಅವೈಜ್ಞಾನಿಕವಾಗಿದ್ದು ಅದರಲ್ಲಿ ಸರಾಗವಾಗಿ ನೀರು ಹರಿದುಹೋಗುವುದಿಲ್ಲ.ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಅದಲ್ಲದೆ ಇಂಗುಗುಂಡಿ ನಿರ್ಮಾಣ ಅಥವಾ ತ್ಯಾಜ್ಯ ನೀರು ನದಿ ಸೇರದಂತೆ ಕ್ರಮ ಕೈಗೊಳ್ಳಬೇಕಿದೆ. ಮುಖ್ಯವಾಗಿ ಕೊಳಚೆ ನೀರು ಸಾರ್ವಜನಿಕ ಸ್ಥಳದಲ್ಲಿ ಹರಿದು, ಸಾರ್ವಜನಿಕರು ರೋಗಗ್ರಸ್ಥರಾಗುವುದನ್ನು ತಪ್ಪಿಸಬೇಕಿದೆ.ಅದ್ದರಿಂದ ನಗರ ಪಂಚಾಯತ್ ನ ಈ ಎಲ್ಲ ಸಮಸ್ಯೆಗಳು ಶೀಘ್ರ ದೂರವಾಗಲಿ.

ಹೊಸ ಆಡಳಿತಕ್ಕೆ ಸವಾಲು:

ಎರಡು ವರುಷಗಳಿಂದ ಆಡಳಿತ ಮಂಡಳಿ ರಚನೆಯಾಗದೇ ಇದ್ದು ಇದೀಗ ಹೊಸ ಆಡಳಿತ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಗರ ಸೌಂದರೀಕರಣ, ಸ್ಮಾರ್ಟ್ ಸಿಟಿ ಮಾಡುವ ನಿಟ್ಟಿನಲ್ಲಿ ಹೊಸದಾಗಿ ಆಡಳಿತದ ಚುಕ್ಕಾಣಿ ಹಿಡಿದರವರಿಗೆ ಸವಾಲಿನ ಜತೆಜತೆಗೆ ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಬೇಕಾಗಿದೆ.

ಅದ್ದರಿಂದ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿರುವ, ಬೆಳ್ತಂಗಡಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಶಾಸಕರೂ ಹಾಗೂ ನೂತನ ಅಡಳಿತ ಮಂಡಳಿ ಬೆಳ್ತಂಗಡಿಯನ್ನು ಸ್ಮಾರ್ಟ್ ಸಿಟಿಯನ್ನಾಗಿಸುವ ಯೋಜನೆಯನ್ನು ಹಾಕಿಕೊಂಡಿರುವುದು ಶ್ಲಾಘನೀಯ.

ಅದ್ದರಿಂದ ಸ್ಮಾರ್ಟ್ ಸಿಟಿಯೊಂದಿಗೆ ನಗರದ ಒಳ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸಿ, ನಗರದ ಜನತೆಯ ಜೀವನದಿ ಸೋಮವತಿಯನ್ನು ಉಳಿಸುವಂತಹ ಕಾರ್ಯ ಮಾಡಬೇಕಾಗಿದೆ.

error: Content is protected !!