ಶಾಲೆಗಳ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಲಾಯಿಲ ಮಕ್ಕಳ ಗ್ರಾಮ ಸಭೆಯಲ್ಲಿ ಒತ್ತಾಯ: ಹಲವು ವರುಷಗಳ ಬೇಡಿಕೆಗೆ ಪರಿಹಾರ ಸಿಗದ್ದಕ್ಕೆ ಅಸಮಾಧಾನ

ಬೆಳ್ತಂಗಡಿ: ಗ್ರಾಮದ ಶಾಲೆಗಳಲ್ಲಿ ಹಲವು ಸಮಸ್ಯೆಗಳಿವೆ ಕೆಲವೊಂದು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಶಾಲೆಗಳ ಬಗ್ಗೆ ನಿರ್ಲಕ್ಷ ಧೋರಣೆ ತೋರಲಾಗುತ್ತಿದೆ ಅದಷ್ಟು ಬೇಗ ನಮ್ಮ ಶಾಲೆಗಳ ಸಮಸ್ಯೆಗಳನ್ನು ಈ ಬಾರಿಯದರೂ ಪರಿಹರಿಸಿ ಎಂದು ಮಕ್ಕಳು ಒತ್ತಾಯಿಸಿದರು.

ಅವರು ಲಾಯಿಲ ಗ್ರಾಮ ಪಂಚಾಯತ್ ಆಯೋಜಿಸಿದ ಮಕ್ಕಳ ಗ್ರಾಮ ಸಭೆಯಲ್ಲಿ ತಮ್ಮ ಶಾಲೆಗಳ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು..ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಶಾಲಾ ಮಕ್ಕಳೆ ನಿರ್ವಹಿಸಿದರು.

ಗ್ರಾಮ ಸಭೆಯಲ್ಲಿ ತಮ್ಮ ಶಾಲೆಗಳ ಸಮಸ್ಯೆಗಳನ್ನು ಮಕ್ಕಳು ಸಭೆಯ ಮುಂದಿಟ್ಟರು. ಪಡ್ಲಾಡಿ ಶಾಲೆಯಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನುಗ್ಗುವ ಬಗ್ಗೆ, ರಾತ್ರಿ ಹೊತ್ತು ಶಾಲಾ ಅವರಣದೊಳಗೆ ತಿರುಗಾಡುತ್ತಾರೆ ಅದಲ್ಲದೆ ಅಲ್ಲೆ ಕಸ ಕಡ್ಡಿಗಳನ್ನು ಬಿಸಾಡುತ್ತಾರೆ ಈ ಬಗ್ಗೆ ಗಮನ ಹರಿಸಬೇಕು, ಶಾಲೆಯ ಸುತ್ತಮುತ್ತ ಲೈಟ್ ವ್ಯವಸ್ಥೆ ಮಾಡಬೇಕು ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮಕ್ಕಳು ಸಭೆಯಲ್ಲಿ ತಿಳಿಸಿದರು. ಅದಲ್ಲದೆ ಕರ್ನೋಡಿ ಶಾಲೆಗೆ ಸುಸಜ್ಜಿತವಾದ ಗ್ರಂಥಾಲಯದ ಬೇಡಿಕೆಯನ್ನೂ ಈ ಸಮಯದಲ್ಲಿ ಮಾಡಲಾಯಿತು, ಪಡ್ಲಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು. ಕುಂಠಿನಿ ಶಾಲೆಗೆ ಸರಿಯಾದ ಅವರಣ ಇಲ್ಲದೆ ಶಾಲೆಯ ಕಿಟಕಿ ಗಾಜುಗಳನ್ನು ಒಡೆಯುವ ಕೆಲಸವನ್ನು ಕಿಡಿಗೇಡಿಗಳು ಮಾಡುತಿದ್ದಾರೆ. ಈ ಬಗ್ಗೆಯೂ ಗಮನ ಹರಿಸಬೇಕು ಎಂದರು. ಅದಷ್ಟೂ ಸುತ್ತಮುತ್ತಲಿನ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಲು ಮನವೊಲಿಸಿ ಪ್ರೇರೆಪಿಸಬೇಕು ಈ ಬಗ್ಗೆ ಗ್ರಾಮ ಪಂಚಾಯತ್ ಯೋಜನೆಯನ್ನು ಹಾಕಿಕೊಳ್ಳಬೇಕು ಎಂಬ ಅನಿಸಿಕೆಯೂ ಬಂತು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ,ಸಮಸ್ಯೆಗಳಿಗೆ ಹಾಗೂ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಪಂಚಾಯತ್ ಆಡಳಿತ ಮಂಡಳಿ ಸ್ಪಂದಿಸುತ್ತದೆ.ಶಿಕ್ಷಕರ ಕೊರತೆಯ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು.ಮಕ್ಕಳಿಗೆ ಶುದ್ಧ ಕುಡಿಯುವ ನೀರು ಅದಲ್ಲದೆ ಶಾಲೆಗಳಿಗೆ ಸಿ ಸಿ ಟಿವಿ ಅಳವಡಿಸುವ ಬಗ್ಗೆಯೂ ಯೋಚಿಸಲಾಗುವುದು. ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯತ್ ಆಗಲು ಸಾರ್ವಜನಿಕರೊಂದಿಗೆ ಮಕ್ಕಳು ಸೇರಿ ಎಲ್ಲರೂ ಸಹಕರಿಸಬೇಕು. ಪ್ಲಾಸ್ಟಿಕ್ ಮುಕ್ತ ನಮ್ಮ ಗ್ರಾಮ ಪಂಚಾಯತ್ ಸಂಕಲ್ಪವನ್ನು ಇವತ್ತಿನಿಂದಲೇ ಮಕ್ಕಳು ಮಾಡಿಕೊಳ್ಳಬೇಕು ಎಂದರು.

ಕಳೆದ ಬಾರಿ ನಡೆದ ಮಕ್ಕಳ ಗ್ರಾಮ ಸಭೆಯ ಮನವಿಗೆ ಸ್ಪಂದನೆ ಹಾಗೂ ಈ ಸಲದ ಸಭೆಯ ಮಾಹಿತಿ ಸಿಗದ ಬಗ್ಗೆ ಶಿಕ್ಷಕಿಯೊಬ್ಬರು ಹೇಳಿದಾಗ ಕಾರ್ಯದರ್ಶಿ ಪುಟ್ಟ ಸ್ವಾಮಿ ಅವರು ಈ ಬಾರಿ ತಮ್ಮ ಮನವಿಗೆ ಸ್ಪಂದಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುವುದು ಹಾಗೂ ಕೊರೊನಾದ ಕಾರಣಕ್ಕಾಗಿ ಈ ಸಭೆಯ ಬಗ್ಗೆ ಮಾಹಿತಿ ನೀಡಿಲ್ಲ ಮಕ್ಕಳ ಸಂಖ್ಯೆ ಅಧಿಕವಾದರೆ ಕೊರೊನಾ ಮುಂಜಾಗರೂಕತೆಯನ್ನು ಪಾಲಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಸದಸ್ಯೆ ಆಶಾಲತಾ ಮಾತನಾಡಿ ಮಕ್ಕಳು ಸಲ್ಲಿಸಿದ ಬೇಡಿಕೆಗಳನ್ನು ಹಾಗೂ ತೊಂದರೆಗಳನ್ನು ಇಡೇರಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ್ ಕೆಲವೊಂದು ಮಾಹಿತಿಗಳನ್ನು ಮಕ್ಕಳಿಗೆ ತಿಳಿಸಿದರು. ಮಕ್ಕಳ ಶಿಸ್ತುಬದ್ಧ ಗ್ರಾಮ ಸಭೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯರಾದ ಸುಗಂಧಿ, ಅಶಾ ಬೆನಡಿಕ್ಟ ಸಲ್ಡಾನ, ಜಯಂತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರತ್ನಾವತಿ, ಶಾಲಾ ಅಧ್ಯಾಪಕರು ,ಮಕ್ಕಳು, ಉಪಸ್ಥಿತರಿದ್ದರು. ‌ಕಾರ್ಯದರ್ಶಿ ಪುಟ್ಟಸ್ವಾಮಿ ನಿರೂಪಿಸಿದರು. ಲೆಕ್ಕ ಪರಿಶೋಧಕಿ ರೇಶ್ಮಾ ಮ ಗಂಜಿಕಟ್ಟಿ ಸಹಕರಿಸಿದರು.

error: Content is protected !!