ವಾತ್ಸಲ್ಯ ಯೋಜನೆಯಡಿ ತಣ್ಣೀರುಪಂಥದ ನಿರ್ಗತಿಕ ವಿಧವಾ ಮಹಿಳೆಯರಿಗೆ ನೆರವು: ಮನೆ ನಿರ್ಮಾಣಕ್ಕೆ ಧನಸಹಾಯ ಹಸ್ತಾಂತರ

 

ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂಥ ಗ್ರಾಮದ ಆಳಕೆಗುತ್ತು ಎಂಬಲ್ಲಿ ವಾಸಿಸುತ್ತಿರುವ ವಿಧವಾ ಸಹೋದರಿಯರಾದ ಶಾಂಭವಿ ಶೆಟ್ಟಿ ಜಯಂತಿ ಶೆಟ್ಟಿಯವರಿಗೆ ಯೋಗ್ಯ ಮನೆ ಇಲ್ಲದೆ ಇರುವುದನ್ನು ಮನಗಂಡು ಶ್ರೀ.ಕ್ಷೇ.ಧ.ಗ್ರಾ.‌ ಯೋಜನೆಯಡಿ ತಿಂಗಳಿಗೆ 1ಸಾವಿರ ರೂ. ಮಾಸಾಶನ ಹಾಗೂ ಮನೆ ನಿರ್ಮಾಣದ ಸಹಾಯಾರ್ಥವಾಗಿ ಧನಸಹಾಯ ಹಸ್ತಾಂತರಿಸಲಾಯಿತು.

ಶ್ರೀ ಕ್ಷೇ.ಧ.ಗ್ರಾ.ಯೋ. (ವಿಪತ್ತು ನಿರ್ವಹಣ ಮತ್ತು ಜನಜಾಗೃತಿ) ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್‍ ಮಾತನಾಡಿ, ಶ್ರೀ ಕ್ಷೇತ್ರದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಧ. ಗ್ರಾಮಾಭಿವೃದ್ಧಿ ಯೋಜನೆ ಇಂದು ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ.

ಮುಖ್ಯವಾಗಿ ವಾತ್ಸಲ್ಯ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ, ತಣ್ಣೀರುಪಂಥ ವಲಯದ ಅಳಕೆ ಗುತ್ತುವಿನ ಶಾಂಭವಿ ಶೆಟ್ಟಿ ಅವರ ಮನೆಯ ಪರಿಸ್ಥಿತಿ ತಿಳಿದು ಶ್ರೀ ಕ್ಷೇ.ಧ.ಗ್ರಾ.ಯೋ. ಅವರ ಕುಟುಂಬಕ್ಕೆ ನಿರ್ಗತಿಕರ ಮಾಸಾಶನ ತಿಂಗಳಿಗೆ 1 ಸಾವಿರ ರೂ. ನೀಡಲಾಗುವುದು. ಅವರ ಪರಿಸ್ಥಿತಿಗೆ ಸ್ಪಂದಿಸಿ ಕ್ಷೇತ್ರದ ವತಿಯಿಂದ ಮನೆ ನಿರ್ಮಾಣಕ್ಕೆ ಡಾ.ಹೆಗ್ಗಡೆ ಅವರ ಅನುದಾನದಿಂದ 25 ಸಾವಿರ ರೂ. ಧನಸಹಾಯ ನೀಡಲಾಗಿದೆ ಎಂದರು.

ಸಹಾಯಧನದ ಮೊತ್ತವನ್ನು ಮತ್ತು ಮಾಸಾಶನ ಮಂಜೂರಾತಿ ಪತ್ರವನ್ನು ವಿವೇಕ್ ವಿನ್ಸೆಂಟ್ ಪಾಯಸ್‍ರವರು ವಿತರಿಸಿದರು. ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನ ಕೆರೆ ರೂ 1 ಲಕ್ಷ ಅರ್ಥಿಕ ಸಹಾಯ ಹಾಗೂ ಜಾಗತಿಕ ಬಂಟರ ಸಂಘದಿಂದ 35 ಸಾವಿರ ರೂಪಾಯಿ ಸಹಾಯಧನ ಲಭಿಸಿದ್ದು ಈ ಮೂಲಕ ಮನೆ ಮೇಲ್ಚಾವಣಿ ಕಾಂಕ್ರೀಟ್ ಮಾಡಲಾಗಿದೆ.

ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಯಶವಂತ್ ಎಸ್. ಪ್ರಗತಿಬಂಧು ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷ ಪ್ರಭಾಕರ್ ಪೊಸಂದೋಡಿ, ವಲಯ ಮೇಲ್ವಿಚಾರಕಿ ವಿದ್ಯಾ, ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಹಿರಿಯರಾದ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!