ಬಂಗಾರ್ ಪಲ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸುವ ಕುರಿತು ಗಂಭೀರ ಚಿಂತನೆ: ದ.ಕ. ಡಿಸಿ ರಾಜೇಂದ್ರ ‌ಹೇಳಿಕೆ: ಎಳನೀರು, ಬಂಗರ ಪಲ್ಕೆ ಫಾಲ್ಸ್ ಬಳಿ ದುರ್ಘಟನಾ ಸ್ಥಳ ಪರಿಶೀಲನೆ

ಬೆಳ್ತಂಗಡಿ: ಎಳನೀರು, ಬಂಗಾರ್ ಪಲ್ಕೆ ದುರ್ಘಟನೆ ನಡೆದ ಸ್ಥಳ ದುರ್ಗಮ ಪ್ರದೇಶದಲ್ಲಿದೆ. ಚತುಷ್ಚಕ್ರ ವಾಹನಗಳು ಸಾಗುವುದೂ ಕಷ್ಟಕರ, ಆದರೂ‌ ಜೆ.ಸಿ.ಬಿ. ಬಳಸಿ‌ ಕಾರ್ಯಾಚರಣೆ ನಡೆಸಲಾಗಿದೆ. ಶೇ. 99ರಷ್ಟು ಕಾರ್ಯಾಚರಣೆ ಪೂರ್ಣಗೊಂಡಿರುವುದರಿಂದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ‌ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಎಳನೀರು, ಬಂಗರ ಪಲ್ಕೆ ಫಾಲ್ಸ್ ಬಳಿ ದುರಂತ ನಡೆದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

ಅಧಿಕಾರಿಗಳು ದಿನಂಪ್ರತಿ ವರದಿ ನೀಡುತ್ತಿದ್ದರು. ಇನ್ನು ಕೇವಲ ಶೇ. 1ರಷ್ಟು ಮಾತ್ರ ಭರವಸೆ ಉಳಿದಿದೆ. ಈ ಶೇ. 1ರಷ್ಟು ಪ್ರಯತ್ನ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು. ಸನತ್ ಪೋಷಕರ ಜೊತೆ ಮಾತನಾಡಲಾಗಿದೆ. ಅದೇ ರೀತಿ ಅಕ್ರಮ ಹೋಮ್ ಸ್ಟೇಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಎಂದು‌ ಮಾಹಿತಿ ನೀಡಿದರು.

ವಿಧಾನ‌ಪರಿಷತ್ ಸದಸ್ಯ ಪ್ರತಾಪ್ ಸಿಂಹ‌ ನಾಯಕ್ ಮಾತನಾಡಿ, ಸಾರ್ವಜನಿಕರು, ಅಧಿಕಾರಿಗಳು‌ ಭಗೀರಥ ಪ್ರಯತ್ನ ನಡೆಸಿದರೂ ಸನತ್ ದೇಹ ಸಿಗದಿರುವುದು ದುರದೃಷ್ಟಕರ. ಜನ ಶಕ್ತಿ ಬಳಸಿ‌ಯೇ ಕಾರ್ಯಾಚರಣೆ ನಡೆಸಿ, ಬಳಿಕ ಯಾಂತ್ರಿಕ ಕಾರ್ಯಾಚರಣೆಯಿಂದಲೂ ಫಲ ಸಿಕ್ಕಿಲ್ಲ. ಕಾರ್ಯಾಚರಣೆ ಕುರಿತು ಅಂತಿಮ ನಿರ್ಧಾರ ಶೀಘ್ರ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮುನ್ನ ಸನತ್ ಶೆಟ್ಟಿ ಮನೆಗೆ ಜಿಲ್ಲಾಧಿಕಾರ ಭೇಟಿ ನೀಡಿದ ಡಿಸಿ, ಸನತ್ ಶೆಟ್ಟಿ ಪೋಷಕರಿಗೆ ಸಾಂತ್ವನದ ನುಡಿಗಳನ್ನು ಹೇಳಿದರು.

ಪೋಷಕರ ಬಳಿ ಮಾತನಾಡಿ, ಸನತ್ ದೇಹ ಪತ್ತೆಗೆ ಶಕ್ತಿ ಮೀರಿ‌ ಪ್ರಯತ್ನಗಳು ನಡೆಯುತ್ತಿವೆ. ಸರಕಾರಿ ಇಲಾಖೆಗಳ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ಮುಂದೆ ಹೆಚ್ಚಿನ ಸಹಾಯ ಬೇಕಿದ್ದಲ್ಲಿ ಅದಕ್ಕೂ ಅವಕಾಶ ಕಲ್ಪಿಸಲು ಸಿದ್ಧ. ಪೋಷಕರಾದ ತಾವು ಧೈರ್ಯದಿಂದ ಇರಬೇಕು. ಸ್ಥಳಕ್ಕೆ ಭೇಟಿ ನೀಡಿ‌ ಮಾಡಬಹುದಾದ ಕಾರ್ಯಾಚರಣೆಗಳ ಕುರಿತು ‌ಚಿಂತಿಸಲಾಗುವುದು ಎಂದು ತಿಳಿಸಿದರು.

ಎಳನೀರು ‌ಭೇಟಿ ಸಂದರ್ಭ ‌ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಜೈನ್ ಎಳನೀರು ಜಿಲ್ಲಾಧಿಕಾರಿಗಳಿಗೆ ಕಾರ್ಯಾಚರಣೆಯ ಮಾಹಿತಿ ನೀಡಿದರು.

ಪುತ್ತೂರು ಎ.ಸಿ.‌‌ ಡಾ. ಯತೀಶ್ ಉಳ್ಳಾಲ್, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ., ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜಾ, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಿರತರಾದವರು, ಸ್ಥಳೀಯ ಗ್ರಾ.ಪಂ. ಸದಸ್ಯ ಪ್ರಕಾಶ್ ಜೈನ್, ರವಿ ಚಕಿತ್ತಾಯ, ಮಲವಂತಿಗೆ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ದಿನೇಶ್ ಗೌಡ, ಜನಪ್ರತಿನಿಧಿಗಳು, ಸ್ಥಳೀಯರು ಇದ್ದರು. ‌

error: Content is protected !!