ಬೆಳ್ತಂಗಡಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಶಕ್ತಿಯಾಗಿ ನಿಂತು ಆತ್ಮನಿರ್ಭರ ಯೋಜನೆಯನ್ನು ಜಾರಿಗೊಳಿಸಿ ಸ್ವಾವಲಂಬಿ ಬದುಕು ಸ್ವದೇಶಿ ಉತ್ಪನ್ನಗಳಿಂದ ಶಕ್ತಿಶಾಲಿ ಭಾರತವನ್ನಾಗಿ ಮಾಡಲು ಹೊರಟ್ಟಿದ್ದಾರೆ. ಇಂದು ದೇಶದ ರೈತರಲ್ಲಿ ಆತ್ಮಸ್ಥೈರ್ಯ ಮತ್ತು ಕೃಷಿ ಮಾಡುವ ಉತ್ಸಾಹ ಇದೆ. ಆದರೆ ಕೆಲವೊಂದು ಪರಿಸ್ಥಿತಿಯಲ್ಲಿ ಕೃಷಿಯಿಂದ ಲಾಭವಿಲ್ಲ ಎಂಬ ಮಾತಿನಿಂದ ಕೃಷಿ ಮಾಡುವವರು ವಿಮುಖರಾಗುತ್ತಿದ್ದಾರೆ. ಈ ಭಾವನೆಯಿಂದ ರೈತರು ಹೊರಬಂದು ಯುವಕರು ಕೃಷಿಗೆ ಆಕರ್ಷಿಸುವಂತೆ ಕೃಷಿಯಲ್ಲಿ ಕ್ರಾಂತಿ ಮೂಡಬೇಕಾಗಿದೆ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು.
ಅವರು ಮಂಗಳವಾರ ದ.ಕ ಜಿಲ್ಲಾ ಕೃಷಿಕ ಸಮಾಜ, ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಬೆಳ್ತಂಗಡಿ, ಆತ್ಮಯೋಜನೆ, ಕಿಸಾನ್ ಗೋಷ್ಠಿ ಹಾಗೂ ರೈತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಿಶ್ರ ಬೆಳೆ ಮಾಡುವುದರಿಂದ ರೈತರಿಗೆ ಹೆಚ್ಚು ಆದಾಯವಿದೆ. ಇಸ್ರೇಲ್ ದೇಶಗಳನ್ನು ಹೋಲಿಕೆ ಮಾಡಿದರೆ ನಮ್ಮ ಕೃಷಿ ಅಭಿವೃದ್ಧಿಯಾಗುವುದಿಲ್ಲ. ನಾವು ಕೃಷಿಯಲ್ಲಿ ತರಬೇತಿ ಪಡೆದು ಕೃಷಿ ಕಾರ್ಯದಲ್ಲಿ ಆಸಕ್ತಿ ವಹಿಸಿದರೆ ಇಸ್ರೇಲ್‌ಗಿಂತ ಭಾರತ ಶ್ರೇಷ್ಠ ಕೃಷಿ ದೇಶವಾಗುತ್ತದೆ. ಇಂದು ದ.ಕ. ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು ಇದಕ್ಕೆ ಕಳೆದ ಎರಡು ವರ್ಷಗಳ ಹಿಂದೆ ನೇತ್ರಾವತಿ ನದಿ ಬತ್ತಿರುವುದೇ ಸಾಕ್ಷಿಯಾಗಿದೆ. ಅದರಿಂದ ಎಚ್ಚೆತ್ತು ದ.ಕ. ಜಿಲ್ಲೆಯಲ್ಲಿ ಅದರಲ್ಲೂ ಬೆಳ್ತಂಗಡಿಯಲ್ಲಿ ಅಂತರ್ಜಲ ಹೆಚ್ಚಿಸಲು ಕಿಂಡಿಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದ್ದು ಸುಮಾರು 125 ಕೋಟಿ ರೂ. ವೆಚ್ಚದಲ್ಲಿ 27 ಡ್ಯಾಂಗಳನ್ನು ನಿರ್ಮಿಸುವ ಮೂಲಕ ಕೃಷಿಕರಿಗೆ ಅನುಕೂಲವಾಗಿದೆ ಜೊತೆಗೆ ಅಂತರ್ಜಲವೂ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕೃಷಿಕರ ಅಭಿವೃದ್ಧಿ ದೃಷ್ಟಿಯಿಂದ ಜಿ.ಪಂ. ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಕೇಂದ್ರದ ಫಸಲ್ ಬಿಮಾ ಯೋಜನೆಯಿಂದ ರೈತರರಿಗೆ ಗರಿಷ್ಠ ಪರಿಹಾರ ಸಿಗುತ್ತಿದೆ ಎಂದರು.
ಭತ್ತದ ಕೃಷಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಬಿ.ಕೆ. ದೇವರಾಯ ರಾವ್, ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದ ರೈತರಾದ ನಾರಾಯಣ ನಾಯ್ಕ್ ಉರುವಾಲು, ದೇಜು ನಾಯ್ಕ್ ಕೊಕ್ರಾಡಿ, ಲಕ್ಷ್ಮೀನಾರಾಯಣ ಎಸ್ ನಡ, ತಾಲೂಕು ಮಟ್ಟದ ಪ್ರಶಸ್ತಿ ವಿಜೇತರಾದ ಪ್ರಶಾಂತ್ ನಡ, ಎಸ್.ಕೆ. ಮಹಾಬಲೇಶ್ವರ ಭಟ್ ನಡ, ರಮೇಶ್ ಶೆಟ್ಟಿ ಪುತ್ತಿಲ ಹಾಗೂ 2020-21ನೇ ಸಾಲಿನ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಪೌಲೋಸ್ ಪಿ.ವಿ. ಚಾರ್ಮಾಡಿ, ಮೇನಿಕಾ ನಿಲೋಫೆರಾ ಡಿಸೋಜಾ ಬಡಗಕಾರಂದೂರು, ಅನಿತಾ ಪಿರೇರಾ ಕೊಕ್ರಾಡಿ, ಒ.ಐ. ಜೋಯಿ ಶಿಬಾಜೆ, ದಾಸಪ್ಪ ಗೌಡ ಉರುವಾಲು, ಪಾರ್ಶ್ವನಾಥ ಬಿ. ಜೈನ್ ಸುಲ್ಕೇರಿ, ಬಿ.ಕೆ. ಧನಂಜಯ ರಾವ್ ಲಾಯಿಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆತ್ಮ ಯೋಜನೆಯಡಿ ಮೂರು ಸ್ವಸಹಾಯ ಸಂಘಗಳಿಗೆ ತಲಾ ಹತ್ತು ಸಾವಿರ ಸುತ್ತುನಿಧಿ ವಿತರಿಸಲಾಯಿತು. 90 ಶೇಕಡ ಸಹಾಯಧನದಲ್ಲಿ ಪ.ಜಾತಿ, ಪಂಗಡದ ಎರಡು ಕುಟುಂಬಗಳಿಗೆ ಅಡಿಕೆಗೆ ಮದ್ದು ಸಿಂಪಡನಾ ಯಂತ್ರ ವಿತರಿಸಲಾಯಿತು. ಕಿಸಾನ್ ಗೋಷ್ಠಿ ನಡೆಯಿತು.
ಜಿ.ಪಂ ಸದಸ್ಯರಾದ ಸೌಮ್ಯಲತಾ ಜಯಂತ್ ಗೌಡ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯರಾದ ಸುಧೀರ್ ಸುವರ್ಣ, ಕೃಷ್ಣಯ್ಯ ಆಚಾರ್, ಕೇಶವತಿ, ಸುಜಾತ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್, ಜಿಲ್ಲಾ ಕೃಷಿಕ ಸಮಾಜದ ತಾಲೂಕು ಪ್ರತಿನಿಧಿ ಪಿ.ಕೆ. ರಾಜು ಪೂಜಾರಿ, ತಾಲೂಕು ಕೃಷಿಕ ಸಮಾಜದ ಸಂಪತ್ ಸಾಮ್ರಾಜ್ಯ, ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಮಹಾವೀರ ಅಜ್ರಿ, ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿ ಚಂದ್ರಮೋಹನ್, ತಹಶಿಲ್ದಾರ್ ಮಹೇಶ್ ಜಿ, ರೋಟರಿ ಕ್ಲಬ್‌ನ ಅಧ್ಯಕ್ಷ ಧನಂಜಯ ರಾವ್, ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಉಪಸ್ಥಿತರಿದ್ದರು.
ಕೃಷಿ ಅಧಿಕಾರಿಗಳಾದ ಚಿದಾನಂದ ಎಸ್. ಹೂಗಾರ್, ಹುಮೇರಾ ಜಬೀನ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಪೂಜಾರಿ ಸಹಕರಿಸಿದರು.