ಸಿಗಲೇ ಇಲ್ಲ ಸನತ್ ಶೆಟ್ಟಿ ದೇಹದ ಸುಳಿವು: ಎಳನೀರು, ಬಂಗಾರ್ ಪಲ್ಕೆ ದುರಂತ ಸ್ಥಳದಲ್ಲಿ 15ನೇ ದಿನದ ಕಾರ್ಯಾಚರಣೆ

ಬೆಳ್ತಂಗಡಿ:‌ ಜ.25 ರಂದು ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ್ ಪಲ್ಕೆ ಫಾಲ್ಸ್ ಬಳಿ ಗುಡ್ಡ ಕುಸಿತ ಉಂಟಾಗಿ ನಾಲ್ಕು ಜನರಲ್ಲಿ ಮೂರು ಮಂದಿ ಪಾರಾಗಿ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ ಎಂಬಾತ ಕಣ್ಮರೆಯಾಗಿದ್ದ. ಆತನ‌ ಪೋಷಕರ ಕೋರಿಕೆಯ ಮೇರೆಗೆ ದೇಹ ಪತ್ತೆಗಾಗಿ ಕಳೆದ ಹದಿನೈದು ದಿನಗಳಿಂದ ಎಸ್.ಡಿ.ಆರ್.ಎಫ್., ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಹಲವು ಸಂಘ ಸಂಸ್ಥೆಗಳು ಅವಿರತವಾಗಿ ಹುಡುಕುವ ಪ್ರಯತ್ನ ಪಡುತಿದ್ದರೂ ಇಷ್ಟರವರೆಗೆ ಯಾವುದೇ ಸುಳಿವು ಸಿಗದಿರುವುದು ಎಲ್ಲರ ಅತಂಕಕ್ಕೆ ಕಾರಣವಾಗಿದೆ.

ದುರಂತ ನಡೆದ ಸ್ಥಳಕ್ಕೆ ಯಾವುದೇ ಯಂತ್ರವಾಗಲಿ ಹೋಗದೆ ಇದ್ದರೂ ಸ್ವಯಂ ಸೇವಕರ ಹಾಗೂ ಅಧಿಕಾರಿಗಳ ಪ್ರಯತ್ನದಿಂದ ಕಾರ್ಯಾಚರಣೆ ನಡೆದಿತ್ತು. ಇತ್ತೀಚಿನ ಕೆಲ ದಿನಗಳಿಂದ ಜೆಸಿಬಿ ಮೂಲಕ ಕಾರ್ಯಚರಣೆ ನಡೆಸುತ್ತಿದ್ದರೂ ನಾಪತ್ತೆಯಾದ ವ್ಯಕ್ತಿಯ ದೇಹದ ಸುಳಿವು ನಿಗೂಢವಾಗಿಯೇ ಉಳಿದಿದೆ. ಇವತ್ತು ಸಿಗುತ್ತದೆ ನಾಳೆ ಸಿಗುತ್ತದೆ ಎಂಬ ದೊಡ್ಡ ಭರವಸೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲರಿಗೂ ನಿರಾಸೆಯಾಗುತ್ತಿದೆ.

ಫೆ. 10 ಬುಧವಾರದ ಕಾರ್ಯಚರಣೆಯಲ್ಲಿ ಈ ಪ್ರಕರಣದ ಸಂಪೂರ್ಣ ಚಿತ್ರಣ ಸಿಗಲಿದೆ ಎನ್ನಲಾಗುತ್ತಿದೆ. ಸನತ್ ಶೆಟ್ಟಿ ದೇಹದ ಸುಳಿವು ಸಿಗುವ ಮೂಲಕ ಎಲ್ಲಾ ಅನುಮಾನಗಳಿಗೆ, ಊಹಾಪೋಹಗಳಿಗೆ ತೆರೆ ಬೀಳಬೇಕಿದೆ, ಮುಖ್ಯವಾಗಿ ಉತ್ತಮ ಉದ್ದೇಶಕ್ಕಾಗಿ ಸತತವಾಗಿ ಕಾರ್ಯಾಚರಣೆಯಲ್ಲಿ ತೊಡಗಿರುವ ನಿಸ್ವಾರ್ಥ ಸೇವಾ ನಿರತರ ಮಾನವೀಯ ನಡೆಗೆ ಸಾರ್ಥಕದ ಕ್ಷಣ ಲಭಿಸಬೇಕಿದೆ.

error: Content is protected !!