ಅಳದಂಗಡಿ: ಬೆಳ್ತಂಗಡಿ ತಾಲೂಕನ್ನು ಕೇಂದ್ರವಾಗಿಟ್ಟುಕೊಂಡು ರಬ್ಬರ್ ಪಾರ್ಕ್ ನಿರ್ಮಾಣ ಮಾಡುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕೆ ರಬ್ಬರ್ ಮಂಡಳಿ ಹಾಗು ರಬ್ಬರ್ ಸಹಕಾರಿ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅಳದಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ, ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಹಕಾರಿ ಸಂಸ್ಥೆ ಮತ್ತು ಅಳದಂಗಡಿ ರಬ್ಬರು ಉತ್ಪಾದಕರ ಸಂಘದ ಸಹಯೋಗದಲ್ಲಿ ಸಿದ್ಧವಾಗಿರುವ ರಬ್ಬರು ಖರೀದಿ ಕೇಂದ್ರವನ್ನು ಸೋಮವಾರ ಅವರು ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲೆಯಲ್ಲಿ ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಅತ್ಯಧಿಕ ರಬ್ಬರ್ ಬೆಳೆಯಾಗುತ್ತಿದೆ. ಹೀಗಾಗಿ ರಬ್ಬರ್ ಪಾರ್ಕ್ ಇಲ್ಲಿಯೇ ಸ್ಥಾಪನೆ ಮಾಡುವ ಯೋಜನೆ ಇದೆ. ಅಲ್ಲದೆ ರಬ್ಬರ್ ನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ನಿರ್ಮಾಣ ಮಾಡಿದರೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಬಹುದಾಗಿದೆ. ಇದಕ್ಕೆ ಸಂಶೋಧನೆಗಳು ನಡೆಯಬೇಕಿದ್ದು ಅದಕ್ಕೆ ಬೇಕಾದ ಅನುದಾನವನ್ನು ರಬ್ಬರ್ ಸಹಕಾರ ಸಂಘಗಳು ನೀಡಬೇಕು ಎಂದರು.
ಮಾಸ್ ಸಂಸ್ಥೆಯನ್ನು ಉಳಿಸುವ ದಿಕ್ಕಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲು ಸಿದ್ಧ. ನಮ್ಮತನವನ್ನು ಉಳಿಸಿಕೊಳ್ಳುವಲ್ಲಿ ದ.ಕ.ದ ಎಲ್ಲಾ ಸಹಕಾರ ಸಂಸ್ಥೆಗಳು ಸಾಮರ್ಥ್ಯ ಹೊಂದಿರುವುದನ್ನು ಶಾಸಕರು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ಧ ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಅವರು, ರಬ್ಬರ್ ಸೊಸೈಟಿಯ 34 ನೇ ರಬ್ಬರ್ ಖರೀದಿ ಕೇಂದ್ರ ಇದಾಗಿದ್ದು, ಇಲ್ಲಿ ವ್ಯವಹಾರ ಅಚ್ಚುಕಟ್ಟಾಗಿ ನಡೆದರೆ ಸಂಸ್ಥೆ ಶಕ್ತಿಯುತವಾಗುತ್ತದೆ. ಯಾವ್ಯಾವುದಕ್ಕೋ ಖರ್ಚು ಮಾಡುವ ನಾವು ಐವತ್ತು ಪೈಸೆ ಲಾಭದಾಸೆಗೆ ಖಾಸಗಿ ವ್ಯಕ್ತಿಗಳಿಗೆ ರಬ್ಬರ್ ಮಾರಾಟ ಮಾಡುವುದು ಸರಿಯಲ್ಲ.ಎಲ್ಲಾ ಕೃಷಿ ಬೆಳೆಗಳು ಸಹಕಾರಿ ಸಂಸ್ಥೆಗೆ ಬಂದರೆ ಮಾರುಕಟ್ಟೆ ನಿಯಂತ್ರಣಕ್ಜೆ ಬರುತ್ತದೆ ಎಂದರು.
ರಬ್ಬರು ಮಂಡಳಿ ಉತ್ಪಾದನಾ ಆಯುಕ್ತ ಎಸ್. ಬಾಲಕೃಷ್ಣ, ಕ್ಷೇತ್ರಾಭಿವೃದ್ಧಿ ಅಧಿಕಾರಿ ಟಿ.ವಿ.ಮ್ಯಾಥ್ಯೂ, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಬೆಂಗೆತ್ಯಾರ್ ಮತ್ತಿತರರು ಉಪಸ್ಥಿತರಿದ್ದರು.
ರಬ್ಬರು ಉತ್ಪಾದಕರ ಸಂಘದ ಅಧ್ಯಕ್ಷ ಶಿವಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಪ್ರಿಯಾನ್ ಫೆರ್ನಾಂಡಿಸ್ ಪ್ರಸ್ತಾವಿಸಿದರು. ಉಪಾಧ್ಯಕ್ಷ ಸಂಜೀವ ಪೂಜಾರಿ ವಂದಿಸಿದರು. ಮೋಹನದಾಸ್ ಕಾರ್ಯಕ್ರಮ ನಿರ್ವಹಿಸಿದರು.