ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ದಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಭಾಗವಹಿಸುವ ಜೊತೆಗೆ ಎಲ್.ಸಿ.ಎ. ತೇಜಸ್ ಯುದ್ದ ವಿಮಾನದಲ್ಲಿ ಸುಮಾರು 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಹಿಂದೆ ಏರೋ ಇಂಡಿಯಾ ಶೋ ನೋಡಲು ಪಾಸ್ ಪಡೆಯಲು ಪರದಾಡಬೇಕಿತ್ತು. ಆದರೆ ಇವತ್ತು ಯುದ್ಧ ವಿಮಾನದಲ್ಲಿ ಹಾರಾಡುತ್ತಿರುವುದು ಸಂತಸ ತಂದಿದೆ. ಸುಮಾರು 15 ಸಾವಿರ ಎತ್ತರದಲ್ಲಿ, ಒಂದು ಸಾವಿರ ಕಿಲೋ ಮೀಟರ್ ಗೂ ಹೆಚ್ಚು ವೇಗದಲ್ಲಿ ಹಾರಾಟ ಮಾಡಿದ್ದು ಅತ್ಯದ್ಭುತ ಅನುಭವವಾಗಿದೆ ಎಂದರು.
ಎಲ್.ಸಿ.ಎ. ಏರ್ ಕ್ರಾಫ್ಟ್ ಅನ್ನು ಸ್ವದೇಶಿಯಾಗಿದ್ದು, ಡಿಆರ್ ಡಿಓ ದಲ್ಲಿ ವಿನ್ಯಾಸ ಮಾಡಲಾಗಿದೆ. ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ಕಂಪನಿಗಳು ಏರ್ ಕ್ರಾಫ್ಟ್ ಉತ್ಪಾದನೆಗೆ ಮುಂದಾಗಿವೆ. ಅತಿ ಹೆಚ್ಚಿನ ಯುದ್ಧ ವಿಮಾನಗಳ ಉತ್ಪಾದನೆ ಬೆಂಗಳೂರಿನಲ್ಲಿ ಆಗುತ್ತಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಯುದ್ಧ ವಿಮಾನಗಳನ್ನು ಉತ್ಪಾದಿಸುವ ಶಕ್ತಿ ದೇಶಕ್ಕಿದೆ. ಫೈಟರ್ ಜೆಟ್ ಗಳನ್ನು ನಿರ್ಮಾಣ ಮಾಡುವ ಶಕ್ತಿಯಿದೆ ಎಂದರು.