ಬೆಳ್ತಂಗಡಿ: ಎಳನೀರು, ಬಂಗಾರ್ ಪಲ್ಕೆ ಜಲಪಾತ ಸಂಸೆಯಿಂದ ಸುಮಾರು ಎಂಟು ಕಿ. ಮೀ. ದೂರದಲ್ಲಿದ್ದು, ಪ್ರಕೃತಿ ರಮಣೀಯ ಪ್ರದೇಶವಾಗಿದೆ. ಸುತ್ತಮುತ್ತ ಎತ್ತರದ ಪ್ರದೇಶ ತುಂಬಾ ಎತ್ತರದಿಂದ ನೀರು ಧುಮುಕುವುದನ್ನು ನೋಡುವುದೇ ತುಂಬಾ ಸುಂದರ. ಅದರೆ ಈ ಪ್ರದೇಶಕ್ಕೆ ಹೋಗಲು ಅಷ್ಟೇ ಕಷ್ಟ ಪಡಬೇಕು. ಯಾವುದೇ ನೆಟ್ ವರ್ಕ್ ಇಲ್ಲ, ಜೀಪ್ ಅಥವಾ ಬೈಕ್ ಗಳಲ್ಲಿ ಮಾತ್ರ ಬರಬೇಕು. ಬಂದರೂ ಸ್ವಲ್ಪ ದೂರ ನಡೆದುಕೊಂಡು ಸಾಗಬೇಕು. ಕಡಿದಾದ ದಾರಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಅದರೂ ದಿನದಿಂದ ದಿನಕ್ಕೆ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಸೆಯ ಸುತ್ತಮುತ್ತ ಹಲವು ಹೋಂ ಸ್ಟೇಗಳಿವೆ, ಇವರು ಈ ಅಪಾಯಕಾರಿ ಜಲಪಾತದ ಬಗ್ಗೆ ಮಾಹಿತಿ ನೀಡಿ ಪ್ರವಾಸಿಗರನ್ನು ವಾಹನಗಳ ಮೂಲಕ ಕರೆತರುತ್ತಿದ್ದಾರೆ.
ಈ ಪ್ರದೇಶಕ್ಕೆ ಯಾರೂ ಬಂದರೂ ಎಚ್ಚರಿಕೆ ಅಗತ್ಯ.ಇದು ಅಪಾಯಕಾರಿಯಾಗಿದ್ದು, ಸ್ವಲ್ಪ ನಿರ್ಲಕ್ಷ ವಹಿಸಿದರೂ ಪ್ರಪಾತಕ್ಕೆ ಬೀಳುತ್ತಾರೆ ಎಂಬ ಮಾಹಿತಿಯನ್ನು ಸ್ಥಳೀಯರು, ಪ್ರವಾಸಿಗರಿಗೆ ನೀಡುತ್ತಾರೆ.
‘ಪ್ರಜಾಪ್ರಕಾಶ’ ತಂಡದ ಜೊತೆ ಸ್ಥಳೀಯರೊಬ್ಬರು ಮಾತನಾಡಿದ್ದು, ಜ. 25 ರಂದು ಹುಡುಗನ ಮೇಲೆ ಗುಡ್ಡ ಕುಸಿದ ಘಟನೆ ನಡೆಯಬಾರದಿತ್ತು. ಈ ಬಗ್ಗೆ ತುಂಬಾ ಬೇಸರವಿದೆ. ನಮ್ಮ ಮನೆ ಮಗನನ್ನು ಕಳೆದುಕೊಂಡಷ್ಟು ಬೇಸರವಾಗುತ್ತಿದೆ. ಘಟನೆ ನಡೆದ ಹಿಂದಿನ ದಿನ ಅಂದರೆ ಜ. 24ರಂದು ಆದಿತ್ಯವಾರ ಒಂದು ವೇಳೆ ಈ ಘಟನೆ ನಡೆಯುತ್ತಿದ್ದರೆ ಸುಮಾರು 50ಕ್ಕಿಂತಲೂ ಅಧಿಕ ಮಂದಿ ಮಣ್ಣಿನಡಿಯಲ್ಲಿ ಸಿಲುಕಿ ಸಮಾಧಿಯಾಗುವ ಮೂಲಕ ಬಹುದೊಡ್ಡ ದುರ್ಘಟನೆ ನಡೆಯುತ್ತಿತ್ತು. ವಾರಂತ್ಯವಾದ ಕಾರಣ ಎಳನೀರ್ ತನಕ ಬಸ್ಸಿನಲ್ಲಿ ಒಂದು ಪ್ರವಾಸಿ ತಂಡ ಇಲ್ಲಿಗೆ ಆಗಮಿಸಿತ್ತು. ಜ. 24 ಆದಿತ್ಯವಾರ ಈ ಜಲಪಾತ ವೀಕ್ಷಣೆಗೆ ಬಂದು ತುಂಬಾ ಹೊತ್ತು ಇದ್ದರು. ಆ ಸಮಯದಲ್ಲಿ ಇಂತಹ ಘಟನೆ ನಡೆಯದಿರುವುದು ದೊಡ್ಡ ಪುಣ್ಯ. ನಡೆದಿದ್ದರೆ, ಕರಾಳ ಘಟನೆಗೆ ಈ ಪ್ರದೇಶ ಸಾಕ್ಷಿಯಾಗುತ್ತಿತ್ತು, ಎಂದು ಆತಂಕದಿಂದ ದೊಡ್ಡ ದುರ್ಘಟನೆ ತಪ್ಪಿದ ಕ್ಷಣವನ್ನು ಸ್ಮರಿಸಿಕೊಳ್ಳುತ್ತಾರೆ.
ಪ್ರವಾಸಿರನ್ನು ಆಕರ್ಷಿಸಲು ಇಂತಹ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಿರುವ ಹೋಂ ಸ್ಟೇಗಳು ಇನ್ನಾದರೂ ಆ ಸ್ಥಳಗಳ ಬಗ್ಗೆ ಸರಿಯಾಗಿ ತಿಳಿದು ಮಾಹಿತಿ ನೀಡಬೇಕು ಎನ್ನುತ್ತಾರೆ ಸ್ಥಳೀಯರು. ದೂರದೂರದಿಂದ ಬರುವ ಪ್ರವಾಸಿಗರು ತಮ್ಮ ಕುಟುಂಬದವರೊಂದಿಗೆ ಇಂತಹ ಸ್ಥಳಗಳ ಬಗ್ಗೆ ಮಾಹಿತಿ ಇರದೆ ಬಂದು ತೊಂದರೆ ಅನುಭವಿಸುತ್ತಾರೆ. ಅದ್ದರಿಂದ ಎಲ್ಲರಲ್ಲೂ ‘ಪ್ರಜಾಪ್ರಕಾಶ’ ತಂಡದ ವಿನಂತಿಯೇನೆಂದರೆ, ಎಲ್ಲೂ ಪ್ರವಾಸ ಹೋಗುವಾಗ ಅಥವಾ ಇಂತಹ ಪ್ರದೇಶಗಳ ವೀಕ್ಷಣೆ ಮಾಡಲು ಹೋಗುವಾಗ ಸರಿಯಾದ ಮಾಹಿತಿ ಪಡೆದುಕೊಂಡು ಹೋಗುವುದು ಉತ್ತಮ. ಮುಖ್ಯವಾಗಿ ಸ್ಥಳೀಯರಲ್ಲಿ ಮಾಹಿತಿಯನ್ನು ಪಡೆದುಕೊಂಡು ಅವರು ನೀಡುವ ಸೂಚನೆಗಳನ್ನು ಪಾಲಿಸಿದಲ್ಲಿ ಸಂಭಾವ್ಯ ಅಪಾಯ ತಪ್ಪಿಸಬಹುದು. ಈ ಮೂಲಕ ಒಂದು ದಿನದ ಸಂತೋಷ ಅನುಭವಿಸಲು ಹೋಗಿ, ಜೀವನವಿಡೀ ತಂದೆ- ತಾಯಿ, ಬಂಧು ಬಳಗ, ಸ್ನೇಹಿತ ವರ್ಗ ಕೊರಗುವುದು ತಪ್ಪಲಿದೆ.