ಬೆಳ್ತಂಗಡಿ: ತಾಲೂಕಿನ ಎಳನೀರು ಸಮೀಪದ ಬಂಗಾರ್ ಪಲ್ಕೆ ಫಾಲ್ಸ್ ಗೆ ತೆರಳಿದ್ದ ವೇಳೆ ಗುಡ್ಡ ಕುಸಿತಗೊಂಡು ಮಣ್ಣಿನಡಿ ಸಿಲುಕಿ ನಾಪತ್ತೆಯಾದ ವಿದ್ಯಾರ್ಥಿಯ ಯಾವುದೇ ಕುರಹು ಇನ್ನೂ ಪತ್ತೆಯಾಗದ ಕಾರಣ ಶೋಧ ಕಾರ್ಯ ಮುಂದುವರಿದಿದೆ. ಈಗಾಗಲೇ ಎಸ್ ಡಿ ಆರ್ ಎಫ್ ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ, ಸ್ಥಳೀಯರು ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಅವಿರತವಾಗಿ ಶೋಧ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ. ದಟ್ಟ ಕಾಡಿನ ನಡುವೆ ಇರುವ ಈ ದುರಂತ ಸ್ಥಳಕ್ಕೆ ಯಾವುದೇ ವಾಹನವಾಗಲಿ ಯಂತ್ರಗಳನ್ನಾಗಲಿ ಸಾಗಿಸಲು ಸಾಧ್ಯವಾಗದೇ ಇರುವುದರಿಂದ ಅದಲ್ಲದೆ ದೊಡ್ಡ ದೊಡ್ಡ ಬಂಡೆಗಳು ಕುಸಿದು ಬಿದ್ದಿರುವುದರಿಂದ ಕಾರ್ಯಚರಣೆಗೆ ಇನ್ನಷ್ಟು ತೊಡಕ್ಕಾಗಿದೆ.ಇನ್ನೂ ಕೂಡ ಮೇಲಿನಿಂದ ಗುಡ್ಡ ಕುಸಿತದ ಅಪಾಯ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಶೋಧ ಕಾರ್ಯ ಮುಂದುವರಿಯುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಸಬ್ ಇನ್ಸ್ ಪೆಕ್ಟರ್ ನಂದ ಕುಮಾರ್ ಸ್ಥಳದಲ್ಲಿದ್ದು ಕಾರ್ಯಚರಣೆಗಳ ಬಗ್ಗೆ ಸೂಕ್ತ ಎಚ್ಚರಿಕೆ ಹಾಗೂ ಮಾಹಿತಿಗಳನ್ನು ನೀಡುತಿದ್ದಾರೆ.
ಘಟನೆಯ ಬಗ್ಗೆ ಪ್ರತೀದಿನ ಮಾಹಿತಿ ಪಡೆಯುತ್ತಿರುವ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಕಾರ್ಯಚರಣೆಯನ್ನು ವೀಕ್ಷಿಸಿ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದರು.ಅದಲ್ಲದೇ ಶೋಧ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿ ಮಾತನಾಡಿದ ಶಾಸಕರು ಡ ಈಗಾಗಲೇ ಕಾರ್ಯಾಚರಣೆ ಎಲ್ಲರ ಸಹಕಾರದಲ್ಲಿ ನಡೆಯುತ್ತಿದೆ ಎಸ್.ಡಿ.ಆರ್.ಎಫ್, ಅಗ್ನಿ ಶಾಮಕ ದಳ,ಪೊಲೀಸ್ ಇಲಾಖೆ, ಸ್ಥಳೀಯರು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತಿದ್ದಾರೆ.ದುರ್ಗಮ ಪ್ರದೇಶ ಯಾವುದೇ ಯಂತ್ರಗಳನ್ನು ಕೊಂಡು ಹೋಗಲು ಆಗದ ಕಾರಣ ಹಾಗೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿರುವುದರಿಂದ ಸಮಸ್ಯೆಯಾಗುತ್ತಿದೆ.ಈಗಾಗಲೇ ಅಧಿಕಾರಿಗಳು ಸೂಚಿಸಿದಂತೆ ಕಾರ್ಯಚರಣೆ ಮುಂದುವರಿಸಲಾಗುತ್ತದೆ ಎಂದರು.
ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಮಾತನಾಡಿ, ಸಬ್ ಇನ್ಸ್ ಪೆಕ್ಟರ್ ನಂದ ಕುಮಾರ್ ಮಾಹಿತಿ ನೀಡಿದಂತೆ ಕಂಪ್ರೆಸರ್ ಕ್ರಷರ್ ಬ್ರೇಕರ್ ಬಳಸಿ ಬಂಡೆ ಪುಡಿಮಾಡಲು ತಯಾರಿ ನಡೆಸಲಾಗುವುದು. ಕಾಡು ಪ್ರದೇಶವಾಗಿರುವುದರಿಂದ ವ್ಯವಸ್ಥಿತವಾಗಿ ತುಂಬಾ ಎಚ್ಚರಿಕೆಯಿಂದ ಕಾರ್ಯಾಚರಣೆ ಮಾಡಬೇಕಾಗುತ್ತದೆ ಎಂದರು. ಬಾಲಕನ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ, ಪೋಷಕರ ಜೊತೆ ಮಾತನಾಡಿ ಕಾರ್ಯಚರಣೆಯ ಬಗ್ಗೆ ವಿವರಣೆಯನ್ನು ನೀಡಿ, ಧೈರ್ಯ ತುಂಬಿದರು.