ಅಪಘಾತ, ಪ್ರಕರಣ ಲಂಚಕ್ಕೆ ಬೇಡಿಕೆ, ಕದ್ರಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ಬಲೆಗೆ:

 

 

ಮಂಗಳೂರು: ಕಾರು ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದೂರುದಾರರಿಂದ ಕಾನೂನುಬದ್ಧ ಕೆಲಸಕ್ಕೆ ಲಂಚ ಕೇಳಿದ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ (ಸಿಎಚ್ಸಿ 322) ಅವರನ್ನು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ನಂತೂರು ಸರ್ಕಲ್​ನಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಘರ್ಷಣೆ ಸಂಭವಿಸಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ತಸ್ಲಿಂ ಅವರು ದೂರುದಾರರಿಗೆ ಕಾರು ಮತ್ತು ಕಾರಿನ ದಾಖಲಾತಿಗಳನ್ನು ಠಾಣೆಗೆ ತರಲು ಸೂಚಿಸಿದ್ದರು. ದೂರುದಾರರು ತಮ್ಮ ಕಾರು ಮತ್ತು ದಾಖಲಾತಿಗಳನ್ನು ಠಾಣೆಗೆ ಸಲ್ಲಿಸಿದ್ದರು.

ಕಾರನ್ನು ಬಿಡುಗಡೆ ಮಾಡಲು ತಸ್ಲಿಂ ಅವರು ದೂರುದಾರರಿಂದ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರುದಾರರು ತಮ್ಮ ವಕೀಲರೊಂದಿಗೆ ಚರ್ಚಿಸಿ, ವಕೀಲರು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಡುಗಡೆ ಮಾಡಲು ಕೋರಿದಾಗ, ತಸ್ಲಿಂ ಅವರು ದೂರುದಾರರ ಮೊಬೈಲ್ ಫೋನ್ ಅನ್ನು ಬಲವಂತವಾಗಿ ವಶಪಡಿಸಿಕೊಂಡು ಕಾರನ್ನು ಬಿಡುಗಡೆ ಮಾಡಿದ್ದರು. ಆದರೆ, ಮೊಬೈಲ್ ಫೋನ್ ಹಿಂದಿರುಗಿಸಲು ಒರಿಜಿನಲ್ ಚಾಲನಾ ಪರವಾನಗಿ (ಲೈಸನ್ಸ್) ತರಲು ಮತ್ತು 50,000 ರೂ. ಲಂಚ ನೀಡಲು ಹೇಳಿದ್ದರು ಎಂದು ವರದಿಯಾಗಿದೆ.

ದೂರುದಾರರು ಒರಿಜಿನಲ್ ಚಾಲನಾ ಪರವಾನಗಿಯನ್ನು ಸಲ್ಲಿಸಿದ ನಂತರ, ತಸ್ಲಿಂ ಅವರು ಮತ್ತೋರ್ವ ಸಿಬ್ಬಂದಿ ವಿನೋದ್ (ಸಿಎಚ್ಸಿ 451) ಅವರ ಮೂಲಕ 30,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜುಲೈ 9 ರಂದು ದೂರುದಾರರು ತಸ್ಲಿಂ ಅವರನ್ನು ಭೇಟಿಯಾದಾಗ, ಒರಿಜಿನಲ್ ಚಾಲನಾ ಪರವಾನಿಗೆಯನ್ನು ನೀಡಲು ಇನ್ನೂ 10,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರರು ತಮ್ಮ ಬಳಿ 500 ರೂಪಾಯಿ ಮಾತ್ರ ಇದೆ ಎಂದಾಗ, ತಸ್ಲಿಂ ಅವರು 5,000 ರೂ.ಗಿಂತ ಕಡಿಮೆ ಹಣಕ್ಕೆ ಠಾಣೆಗೆ ಬರಬೇಡ ಎಂದು ಬೈದು ಕಳುಹಿಸಿದ್ದರು ಎಂದು ದೂರುದಾರರು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು.

ಕಾನೂನುಬದ್ಧ ಕೆಲಸಕ್ಕೆ ಲಂಚ ನೀಡಲು ಇಚ್ಛಿಸದ ದೂರುದಾರರು, ಈ ಕುರಿತು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ, ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗವು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಮತ್ತು ವಿನೋದ್ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.

ಜುಲೈ 10ರಂದು, ತಸ್ಲಿಂ ಅವರು ದೂರುದಾರರಿಂದ 5,000 ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸದರಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರ ಪ್ರಕಟಣೆ ತಿಳಿಸಿದೆ.

error: Content is protected !!