ಬೆಳ್ತಂಗಡಿ ತಾಲೂಕಿನ ಮತ್ಸ್ಯಕ್ಷೇತ್ರ ಕೇಳ್ಕರ: ಫಲ್ಗುಣಿ ನದಿ ತಟದಲ್ಲಿದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನದಿಯಲ್ಲಿವೆ ಅಪರೂಪದ ದೇವರ ಮೀನುಗಳು

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಿಂದ ಕೇವಲ 9 ಕಿ.ಮೀ. ದೂರದಲ್ಲೇ ಹಲವು ವಿಶೇಷತೆಗಳಿಂದ ಕೂಡಿದ ಮತ್ಸ್ಯ ಕ್ಷೇತ್ರವಿದೆ. ನದಿ ತಟದಲ್ಲಿ ಶಿವನ ದೇಗುಲವಿದ್ದು, ಸಾವಿರಾರು ಭಕ್ತರು ಆಗಮಿಸಿ ದೇವರನ್ನು ಪೂಜಿಸುವ ಜೊತೆಗೆ ಮೀನುಗಳನ್ನು ವೀಕ್ಷಿಸಿ ಮನತಣಿಸಿಕೊಳ್ಳುತ್ತಾರೆ.

ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಲವು ವಿಶೇಷತೆಗಳಿಂದ ಕೂಡಿದ್ದು, ಬೆಳ್ತಂಗಡಿಯಿಂದ ಕೇವಲ ಕಿ.ಮೀ. ದೂರದಲ್ಲಿದ್ದರೂ, ಹೊರಜಗತ್ತಿಗೆ ಈ ಕ್ಷೇತ್ರದ ಬಗ್ಗೆ ಅಷ್ಟಾಗಿ ತಿಳಿದಿಲ್ಲ.

ಬೆಳ್ತಂಗಡಿಯಿಂದ 9 ಕೀ.ಮೀ. ದೂರ:
ಬೆಳ್ತಂಗಡಿಯಿಂದ ಕಾರ್ಕಳ ತೆರಳುವ ರಸ್ತೆಯ ಗುಂಡೇರಿ ಬಳಿ ಒಳರಸ್ತೆಯಲ್ಲಿ ತೆರಳಬೇಕು. ಈ ಒಳರಸ್ತೆ ಕೊನೆಯಾಗುವುದೇ ಕೇಳ್ಕರ ದೇಗುಲದ ಬಳಿ. 2015ರಲ್ಲಿ ದೇಗುಲ ಬ್ರಹ್ಮಕಲಶೋತ್ಸವಗೊಂಡಿದ್ದು, ದೇಗುಲದಲ್ಲಿ ಬೆಳಗ್ಗಿನ ವೇಳೆಗೆ ಮಾತ್ರ ಪೂಜೆ ನಡೆಯುತ್ತದೆ. ಧನುರ್ಮಾಸದ ಸಂದರ್ಭದಲ್ಲಿ ಮುಂಜಾನೆ ವಿಶೇಷ ಪೂಜೆ ನಡೆಯುತ್ತದೆ.

ನದಿಯಲ್ಲಿ ಪೆರುವೋಲು ಮೀನುಗಳು:
ನದಿಯಲ್ಲಿ ಶಿಶಿಲ, ಕುಕ್ಕೆ ಸುಬ್ರಹ್ಮಣ್ಯ ಮೊದಲಾದ ನದಿ ತಟಗಳಲ್ಲಿರುವಂತೆ, ಸ್ವಚ್ಛ ನೀರಿನಲ್ಲಿರುವ‌ ಜೀವಿಸುವ ಪೆರುವೋಲು ಮೀನುಗಳಿವೆ. ನದಿಯಲ್ಲಿ ಮೀನಿನ ಮರಿಗಳನ್ನು ಯಾವಾಗ ಬಿಟ್ಟರು ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ. ಆದರೆ ಹಲವು ವರ್ಷಗಳಿಂದಲೇ ಇಲ್ಲಿ ಮತ್ಸ್ಯ ಸಂಕುಲವಿದೆ, ಇದನ್ನು ದೇವರ ಮೀನುಗಳೆಂದು‌ ಪರಿಗಣಿಸಲಾಗುತ್ತದೆ. ದೇವರಿಗೆ ಅರ್ಪಿಸಿದ ನೈವೇದ್ಯ ಮೀನುಗಳಿಗೆ ನೀಡಲಾಗುತ್ತದೆ ಎಂದು ಸ್ಥಳೀಯರು ತಿಳಿಸುತ್ತಾರೆ.

1400 ವರ್ಷಗಳ ಇತಿಹಾಸ:
ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇಗುಲ ಸುಮಾರು 1400 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದೆ. ಸ್ಥಳೀಯವಾಗಿ ಸನ್ಯಾಸಿಯೊಬ್ಬರು ತಪಸ್ಸು ಮಾಡುತ್ತಿದ್ದರು‌, ಅವರೇ ಲಿಂಗ ಪ್ರತಿಷ್ಠಾಪಿಸಿದರು ಎಂಬುದಾಗಿಯೂ ಸ್ಥಳೀಯರು‌ ಮಾಹಿತಿ ನೀಡುತ್ತಾರೆ. 250 ವರ್ಷಗಳಷ್ಟು ಹಿಂದಿನವರೆಗೆ ಜಾತ್ರೋತ್ಸವ ನಡೆಯುತ್ತಿತ್ತು, ಬಳಿಕ ಸ್ಥಗಿತಗೊಂಡಿತು ಎಂಬ ಬಗ್ಗೆಯೂ ಸ್ಥಳೀಯರು ಮಾಹಿತಿ ನೀಡುತ್ತಾರೆ. ‌ಇದೀಗ ಸುಮಾರು 5 ವರ್ಷಗಳಿಂದ ದೇಗುಲ‌ ಬ್ರಹ್ಮಕಲಶೋತ್ಸವಗೊಂಡು ಮತ್ತೆ ಭಕ್ತರ ಆರಾಧನೆಗೆ ಮುಕ್ತವಾಗಿದೆ.

ಕಾಶಿಯಷ್ಟೇ ಪವಿತ್ರ:
ದೇಗುಲದ ಎಡ ಬದಿಯಲ್ಲಿ ಫಲ್ಗುಣಿ ನಡಿ ಹರಿಯುತ್ತಿದ್ದು, ಪೂರ್ವದಿಂದ ಪಶ್ಚಿಮಾಭಿಮುಖವಾಗಿ ‌ಹರಿಯುತ್ತಿದೆ, ಇದು ಶ್ರೇಷ್ಠ ಎನ್ನಲಾಗಿದೆ. ನದಿ ಮೇಲ್ಮೈ ಸಂಪೂರ್ಣ ಶಿಲಾಮಯವಾಗಿದೆ. ಇಲ್ಲಿ ಪಿಂಡ ಪ್ರಧಾನ ಕಾರ್ಯಗಳಿಗೆ ಪ್ರಾಶಸ್ತ್ಯ ಎನ್ನಲಾಗಿದೆ. ಆದ್ದರಿಂದ ಇಲ್ಲಿ ಸೇವೆ ನಡೆಸಿದಲ್ಲಿ, ಕಾಶಿಯಲ್ಲಿ ಪೂಜೆ ಮಾಡಿದಷ್ಟೇ ಫಲ‌ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ಚರ್ಮವ್ಯಾಧಿನಿವಾರಕ ಕ್ಷೇತ್ರ:
ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ‌ಚರ್ಮವ್ಯಾಧಿ‌ ನಿವಾರಕ‌ ಕ್ಷೇತ್ರವೆಂದೂ ಕರೆಯಲಾಗುತ್ತದೆ. ಹರಕೆ ಒಪ್ಪಿಸಿದರೆ ದೇಹದಲ್ಲಿರುವ ಚರ್ಮ ವ್ಯಾಧಿ ನಿವಾರಣೆಯಾಗುತ್ತದೆ‌ ಎಂಬ ನಂಬಿಕೆ ಭಕ್ತರದ್ದಾಗಿದೆ.

ಸಾವಿರಾರು ಭಕ್ತರಿಂದ ಪುಣ್ಯಸ್ನಾನ:
ದೇಗುಲಕ್ಕೆ ಆಟಿ ಅಮಾವಾಸ್ಯೆಯಂದು ಭಕ್ತರು ಆಗಮಿಸಿ, ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಕಳೆದ ವರ್ಷವೂ ಸಾವಿರಾರು ಮಂದಿ ಪುಣ್ಯ ಸ್ನಾನ ಮಾಡಿರುವ ಕುರಿತು ದೇಗುಲ‌ ಸಿಬ್ಬಂದಿ ತಿಳಿಸುತ್ತಾರೆ.

ಕೇಳ್ಕರ ಗುಂಡಿ:
ನದಿಯಲ್ಲಿ ಆಳವಾದ ಹೊಂಡವಿದ್ದು, ಅದನ್ನು ಕೇಳ್ಕರ ಗುಂಡಿ ಎಂದೇ ಕರೆಯಲಾಗುತ್ತದೆ. ಆದರೆ ನದಿಯಲ್ಲಿ ದೇವರ ಮೀನುಗಳಿರುವುದರಿಂದ ಈಜಾಟಕ್ಕೆ ಸೂಕ್ತವಲ್ಲ ಎಂದು ಹೇಳಲಾಗುತ್ತದೆ.

ಮೀನುಗಳ ಮರಣ:
ಈ ಹಿಂದೆ ಭೀಕರ ಬೇಸಗೆ ಬಂದು ನದಿ ನೀರು ಬತ್ತಿದ ಸಂದರ್ಭದಲ್ಲಿ ಸಾವಿರಾರು ಮೀನುಗಳು ಮರಣ ಹೊಂದಿದ ಬಗ್ಗೆ ಸ್ಥಳೀಯರು ತಿಳಿಸುತ್ತಾರೆ. ನೀರು ಇಂಗಿದ ಸಂದರ್ಭದಲ್ಲಿ ಸ್ಥಳೀಯ ಪಂಪ್ ಸೆಟ್ ಬಳಸಿ ನೀರು ಪಂಪ್ ಮಾಡಿ ಹಾಗೂ ಟ್ಯಾಂಕರ್ ಗಳ ಮೂಲಕ ನದಿಗೆ ನೀರು ಹಾಯಿಸಿ ಮೀನುಗಳ ರಕ್ಷಣೆಗೆ ಸ್ಥಳೀಯರು ಹರಸಾಹಸ ಪಟ್ಟರೂ ದೊಡ್ಡ ದೊಡ್ಢ ಮೀನುಗಳು ಮರಣ ಹೊಂದಿದವು,‌ ಸತ್ತ ಮೀನುಗಳ ಪ್ರಮಾಣ ಎಷ್ಟಿತ್ತೆಂದರೆ ಜೆಸಿಬಿ ಬಳಸಿ‌ ಅವುಗಳನ್ನು ಹೂಳಬೇಕಾಯಿತು, ಅಷ್ಟು ಮೀನುಗಳು ಸತ್ತಿದ್ದವು ಎಂದು ಸ್ಥಳೀಯರು ದುಃಖದಿಂದ ತಿಳಿಸುತ್ತಾರೆ.

ಮೀನುಗಾರಿಕೆ ನಿಷೇಧಕ್ಕೆ ಒತ್ತಾಯ:
ದೇಗುಲ ಆಡಳಿತ ಮಂಡಳಿ ಸಧ್ಯ ಸ್ಥಳೀಯವಾಗಿ ಮೀನು ಹಿಡಿಯುವುದು ನಿಷೇಧಿಸಿದೆ. ಆದರೆ ಸರಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂಬುದು ದೇಗುಲ ಸಮಿತಿಯ ಆಗ್ರಹವಾಗಿದೆ.

ಬೇಕಿದೆ ಸೇತುವೆ:
ದೇಗುಲದ ಹೆಚ್ಚಿನ ಭಕ್ತರು ನದಿಯ ಮತ್ತೊಂದು ದಂಡೆಯಲ್ಲಿದ್ದು, ವಿಶೇಷ ಪೂಜೆ, ಉತ್ಸವಗಳ ಸಂದರ್ಭದಲ್ಲಿ ನದಿ ದಾಟಿ ದೇಗುಲಕ್ಕೆ ಆಗಮಿಸಬೇಕಿದೆ. ಸಧ್ಯ ಧನುರ್ಮಾಸ ವಿಶೇಷ ಪೂಜೆಗೆ ಆಗಮಿಸುವ ಭಕ್ತರಿಗೆ ದೇಗುಲ ವತಿಯಿಂದಲೇ ಕಬ್ಬಿಣದ ತಾತ್ಕಾಲಿಕ ದಾಟುವ ಸಣ್ಣ ಸೇತುವೆ ಹಾಗೂ ಬೆಳಕಿನ‌ ವ್ಯವಸ್ಥೆ ಮಾಡಲಾಗಿದೆ. ಆದರೆ ಸೇತುವೆ ಮಂಜೂರುಗೊಂಡಲ್ಲಿ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ತಡೆಗೋಡೆ:
ನದಿ ದಂಡೆಯಲ್ಲೆ ದೇಗುಲವಿದ್ದು, ದೇಗುಲ ಬದಿಯ ಮಣ್ಣು ಮಳೆಗಾಲದ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದೆ. ಆದ್ದರಿಂದ ತಡೆಗೋಡೆ ನಿರ್ಮಾಣವಾದಲ್ಲಿ ಮಣ್ಣಿನ ಸವೆತ ಕಡಿಮೆಯಾಗಿ ದೇಗುಲಕ್ಕೆ ಹಾನಿಯಾಗುವುದು ತಪ್ಪಲಿದೆ ಎಂಬುದು ಸ್ಥಳೀಯರ ಚಿಂತನೆ.

ಬೆಳ್ತಂಗಡಿ ಸಮೀಪದಲ್ಲಿದ್ದರೂ ನಿಗೂಢವಾಗಿ ಉಳಿದಿರುವ ಇಂತಹ ದೇಗುಲಗಳ ಕುರಿತು ಜನತೆಗೆ ತಿಳಿದು ಆಗಮಿಸುವಂತಾಗಬೇಕಿದೆ.

error: Content is protected !!