ಬೆಳ್ತಂಗಡಿಗೂ‌ ಕಾಲಿಟ್ಟಿತಾ ಹಕ್ಕಿಜ್ವರ?: ಕಲ್ಮಂಜ ಸಮೀಪ ಹದ್ದುಗಳ ಶವ ಪತ್ತೆ: ಅತಂಕದಲ್ಲಿ ಜನತೆ

ಉಜಿರೆ:‌ ಕಲ್ಮಂಜ ಗ್ರಾಮದ ನಿಡಿಗಲ್ ಮಜಲು ಬಳಿ‌ ಹದ್ದುಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆಳ್ತಂಗಡಿ ತಾಲೂಕಿಗೂ‌ ಹಕ್ಕಿ‌ ಜ್ವರ ಕಾಲಿಟ್ಟಿತೇ ಎಂಬ ಆತಂಕ ಶುರುವಾಗಿದೆ.
ನಿಡಿಗಲ್ ನಿವಾಸಿಗಳಾದ ಗೋಪಾಲ ಮಡಿವಾಳ ಹಾಗೂ ಶೇಖರ ಮಡಿವಾಳ ಅವರ ಗದ್ದೆಯಲ್ಲಿ ಎರಡು ಹದ್ದುಗಳ ಶವ ದೊರೆತಿದ್ದು, ಕೊಳೆತಿರುವುದರಿಂದ ಸತ್ತು ಮೂರು ದಿನ ಆಗಿರುವ ಸಾಧ್ಯತೆಯಿದೆ. ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹದ್ದುಗಳು ಕೊಳೆತ ಕಾರಣ ಪರೀಕ್ಷೆಗೆ ಮಾದರಿ ಸಂಗ್ರಹಿಸಲು ಅಸಾಧ್ಯ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಭೇಟಿ ನೀಡಿದ್ದು ಪರಿಸರದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.‌ ಪರಿಸರದ ತೆಂಗಿನ ಮರಗಳಲ್ಲಿ ಹದ್ದುಗಳು ಗೂಡು ಕಟ್ಟಿ ವಾಸಿಸುತ್ತಿವೆ. ಘಟನೆಗೆ ಹಕ್ಕಿ ಜ್ವರವೇ ಕಾರಣವೋ ಅಥವಾ ಹಕ್ಕಿಗಳೆರಡರ ಘರ್ಷಣೆಯಿಂದ ಸಾವಿಗೀಡಾಗಿವೆಯೋ‌ ಎಂಬುದು‌ ಖಚಿತವಾಗಿ ತಿಳಿಯದ ಕಾರಣ ಆತಂಕ ಹೆಚ್ಚಾಗಿದೆ.
ಹದ್ದುಗಳ ಶವ ಕಂಡುಬಂದ ಸಮೀಪದ ಸುಮಾರು 25 ಮನೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮನೆ ಮಂದಿಗಳಲ್ಲಿ ಜ್ವರ ಲಕ್ಷಣ ಇದೆಯೇ ಎಂಬ ಕುರಿತು ಸರ್ವೇ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಪಶುವೈದ್ಯಾಧಿಕಾರಿ ಡಾ. ಯತೀಶ್, ಕಲ್ಮಂಜ ಗ್ರಾ.ಪಂ. ಪಿಡಿಒ ಇಮ್ತಿಯಾಝ್, ಆರೋಗ್ಯ ಇಲಾಖೆಯ ಗಿರೀಶ್ ಮತ್ತು ಸೋಮನಾಥ್, ಅರಣ್ಯ ರಕ್ಷಕ ರಾಜೇಶ್, ಆಶಾಕಾರ್ಯಕರ್ತೆಯರು ಭೇಟಿ ನೀಡಿದ್ದಾರೆ.

error: Content is protected !!