ಬೆಳ್ತಂಗಡಿ: ಉಜಿರೆಯಲ್ಲಿ ಡಿ. 27 ರಂದು ಪಾಕ್ ಪರ ಘೋಷಣೆ ಕೇಳಿಬಂದ ಘಟನೆಗೆ ಸಂಬಂದಿಸಿದಂತೆ ಎಸ್.ಡಿ.ಪಿ.ಐ ಕಾರ್ಯಕರ್ತರು ಬುಧವಾರ ಬೆಳ್ತಂಗಡಿ ಪೊಲೀಸ್ ಠಾಣೆ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು.
ಪಾಕ್ ಪರ ಘೋಷಣೆ ವಿಚಾರವಾಗಿ ಬಂಧಿಸಿದ ಎಸ್‌ಡಿಪಿಐ ಕಾರ್ಯಕರ್ತರು ಅಮಾಯಕರಾಗಿದ್ದಾರೆ, ಅವರನ್ನು ಬಿಡುಗಡೆಗೊಳಿಸಬೇಕು ಹಾಗೂ ನೈಜ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿ, ಬೆಳ್ತಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಬರುತ್ತಿದ್ದ ಎಸ್‌ಡಿಪಿಐಯ ಕಾರ್ಯಕರ್ತರನ್ನು ಠಾಣೆಯ ಗೇಟಿನ ಎದುರೇ ಪೊಲೀಸರು ತಡೆದರು.
ಮಿನಿ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು. ಪ್ರತಿಭಟನೆ ಕುರಿತು ಮೊದಲೇ ಮಾಹಿತಿ ತಿಳಿದಿದ್ದ ಪೊಲಿಸರು ಠಾಣೆಯ ಗೇಟಿನ ಬಳಿ ಸೂಕ್ತ ಬಂದೊಬಸ್ತು ಮಾಡಿದ್ದರು, ಹೆಚ್ಚುವರಿ ತುಕಡಿ ನಿಯೋಜಿಸಲಾಗಿತ್ತು. ಬೆಳ್ತಂಗಡಿ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ನಂದಕುಮಾರ್ ಎಂ.ಎಂ., ಪುಂಜಾಲಕಟ್ಟೆ ಎಸ್‌ಐ ಸೌಮ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಎಸ್.ಡಿ.ಪಿ.ಐ. ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸೋ ಪ್ರಾಂಕೋ, ತಾಲೂಕು ಅಧ್ಯಕ್ಷ ಹೈದರ್ ನೀರ್ಸಾಲ್, ಮಾಜಿ ಅಧ್ಯಕ್ಷ ನವಾಝ್ ಕಟ್ಟೆ, ತಾ. ಕಾರ್ಯದರ್ಶಿ ಅಕ್ಬರ್, ಜಿಲ್ಲಾ ಉಪಾಧ್ಯಕ್ಷ ಪಿ.ಡಿ. ಆಂಟನಿ, ಎಸ್‌ಡಿಟಿಯು ಕಾರ್ಮಿಕ ಘಟಕ ಕಾರ್ಯದರ್ಶಿ ಶಮೀಮ್ ಯೂಸುಫ್, ಪಿಎಫ್‌ಐ ಮಡಂತ್ಯಾರು ವಲಯ ಅಧ್ಯಕ್ಷ ಬಿ.ಎಂ. ರಝಾಕ್ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಹೈದರ್ ನೀರ್ಸಾಲ್, ಅಲ್ಪೋನ್ಸಾ ಪ್ರಾಂಕೋ, ನವಾಝ್ ಕಟ್ಟೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸದೆ, ರಾಜಕೀಯಕ್ಕೆ ಒತ್ತಡ ಬಳಸಿ ಅಮಾಯಕರನ್ನು ಬಂಧಿಸಲಾಗಿದೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಮೇಲಾಧಿಕಾರಿಗಳು ಬರುವವರೆಗೂ ನಾವು ಕದಲುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಡಿವೈಎಸ್ಪಿ ವೆಲೈಂಟೆನ್ ಡಿಸೋಜಾ ಅವರು ಪ್ರತಿಭಟನಾಕಾರರ ಮನ ಒಲಿಸಲು ಪ್ರಯತ್ನಿಸಿದರು. ಬಳಿಕ ಡಿವೈಎಸ್ಪಿಯೊಂದಿಗೆ ಎಸ್ಡಿಪಿಐ ಮುಖಂಡರುಗಳು ಮಾತುಕತೆ ನಡೆಸಿದರು. ಜ.11ರ ಒಳಗೆ ಸ್ಪಷ್ಟ ನಿಲುವು ನೀಡಬೇಕು. ಇಲ್ಲವಾದಲ್ಲಿ ಎಸ್.ಡಿ.ಪಿ.ಐ. ಹಾಗೂ ಸಮಾನ ಮನಸ್ಕ ಸಂಘಟನೆಯಿಂದ ಬೃಹತ್ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಉಜಿರೆ ಪ್ರಕರಣದ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿವೈಎಸ್ಪಿಯವರು ತಿಳಿಸಿದ ಬಳಿಕ . ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು.