ಬೆಳ್ತಂಗಡಿ: ಅಳದಂಗಡಿ ಪರಿಸರದಲ್ಲ ಹುಲಿಗಳು ಪ್ರತ್ಯಕ್ಷವಾಗಿವೆ ಎಂಬ ವಿಡಿಯೋ ಜ.5ರಂದು ಬೆಳಗ್ಗೆಯಿಂದ ಹರಿದಾಡುತ್ತಿದ್ದು, ವಿಡಿಯೋ ಸತ್ಯಾಸತ್ಯತೆ ಕುರಿತು ಖಚಿತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಮೂರು ಮರಿಗಳು ಸೇರಿದಂತೆ ಒಟ್ಟು ನಾಲ್ಕು ಹುಲಿಗಳು ಅಡ್ಡಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಅಳದಂಗಡಿ ಸಮೀಪ ಹುಲಿಗಳು ಕಾಣಿಸಿಕೊಂಡಿವೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಗಳು ನೀಡುವ ಮಾಹಿತಿಯಂತೆ ಸ್ಥಳೀಯವಾಗಿ ಚಿರತೆಗಳು ಇರುವ ಸಾಧ್ಯತೆಗಳಿವೆ, ಆದರೆ ಹುಲಿಗಳು ಇರುವ ಕುರಿತು ಯಾವುದೇ ಮಾಹಿತಿ ಇಲ್ಲ. ವಿಡಿಯೋ ಬೇರೆ ಪ್ರದೇಶದಲ್ಲಿ ತೆಗೆದಿರುವ ಸಾಧ್ಯತೆ ಅಧಿಕವಾಗಿದೆ. ವಿಡಿಯೋ ನೈಜತೆ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ ಎಂದು ತಿಳಿಸಿದ್ದಾರೆ.
ಈ ಹುಲಿಗಳ ವಿಡಿಯೋ ಬಳಸಿ, ರಾಜ್ಯದ ವಿವಿಧೆಡೆ ಸ್ಥಳೀಯ ವಿಡಿಯೋ, ಜನತೆ ಎಚ್ಚರದಿಂದ ಇರಬೇಕು ಎನ್ನುವ ಬರಹ ಹರಿದಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ವಿಡಿಯೋ ನೈಜತೆ ಪರಿಶೀಲಿಸಿ, ಜನರ ಆತಂಕ ದೂರಮಾಡಬೇಕಿದೆ. ಇಂತಹ ಸುಳ್ಳು ವಿಡಿಯೋಗಳು ಹರಡದಂತೆ ಎಚ್ಚರ ವಹಿಸಬೇಕಿದೆ.