ಬೆಳ್ತಂಗಡಿ: ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಮೂರನೇ ಸೆಮಿಸ್ಟರ್‌ನ ತೋಟಗಾರಿಕಾ ವಿಭಾಗದ ವಿದ್ಯಾರ್ಥಿನಿ ಅಂಚಿತಾ ಡಿ.ಜೈನ್ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡಿಗೆ ಆಯ್ಕೆಯಾಗಿದ್ದಾರೆ.
2020-21ನೇ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮೂಡಿಗೆರೆಯ ಪ್ರತಿನಿಧಿಯಾಗಿ ಕಾಲೇಜು ಹಂತದಲ್ಲಿ ಆಯ್ಕೆಗೊಂಡು ಬಳಿಕ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿ.ವಿ.ಯಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಮುಂದಿನ ಹಂತಕ್ಕೆ ಭಾಗವಹಿಸಿ, 32 ವಿದ್ಯಾರ್ಥಿಗಳಲ್ಲಿ ಓರ್ವರಾಗಿ ಆಯ್ಕೆಗೊಂಡಿದ್ದಾರೆ. ತಮಿಳುನಾಡಿನ ತಿರುಚಿರಾಪಳ್ಳಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆದ 10 ದಿನಗಳ ದಕ್ಷಿಣ ವಲಯ ಪೂರ್ವ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದು, ಒಟ್ಟು 7 ವಿದ್ಯಾರ್ಥಿಗಳ ಆಯ್ಕೆಯಾದವರಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನಿಯಾಗಿ ಆಯ್ಕೆಗೊಂಡಿದ್ದಾರೆ. ಗಣರಾಜ್ಯೋತ್ಸವ ಪರೇಡಿನ ಪೂರ್ವಭಾವಿ ಒಂದು ತಿಂಗಳ ತರಬೇತಿಗಾಗಿ ತೆರಳಿದ್ದಾರೆ.
ಅಂಚಿತಾ ಜೈನ್ ಯೂತ್ ಫೆಸ್ಟ್ ಸ್ಪರ್ದೆಯಲ್ಲಿ ಮೂಡಿಗೆರೆ ವಿಶ್ವವಿದ್ಯಾಲಯದಿಂದ ರಾಷ್ಟ್ರಮಟ್ಟದವರೆಗೆ ಆಯ್ಕೆಯಾಗಿ ಅಂತಿಮ ಹಂತದಲ್ಲಿ ಛತ್ತೀಸ್‌ಗಡದಲ್ಲಿ ನಡೆದ ಸ್ಪರ್ಧೆಯಲ್ಲೂ ಚಿನ್ನದ ಪದಕ ಪಡೆದಿದ್ದಾರೆ. ಭರತನಾಟ್ಯ, ಡ್ರಾಯಿಂಗ್, ಕ್ರೀಡಾ ಸ್ಪರ್ಧೆಯಲ್ಲೂ ಸಾಧನೆ ಮಾಡಿದ್ದು, ಎನ್.ಸಿ.ಸಿ. ಎ ಗ್ರೇಡಿಂಗ್ ಪಡೆದಿದ್ದಾರೆ.
ಈಕೆ ಪೂಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸೆಕೆಂಡರಿ ವಿಭಾಗದ ಸಹಶಿಕ್ಷಕ ಧರಣೆಂದ್ರ ಕೆ. ಹಾಗೂ ಅನುಪ ಕುಮಾರಿ ದಂಪತಿ ಪುತ್ರಿ.