ಬೆಳ್ತಂಗಡಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲು 2020-21 ರ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೋಟ್ಸ್ ದತ್ತಾಂಶದಿಂದ ರೈತರ ಮಾಹಿತಿಯನ್ನು ನೇರವಾಗಿ ಪಡೆದು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದಂತಹ ರೈತರಿಂದ ಸರ್ಕಾರ ನಿಗದಿಪಡಿಸಿದ ಅಕ್ಕಿ ಗಿರಣಿಗಳ ಮೂಲಕ ಭತ್ತವನ್ನು ನೇರವಾಗಿ ಪಡೆದುಕೊಳ್ಳಬಹುದು. ಸರ್ಕಾರದ ಆದೇಶದನ್ವಯ ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ ಗೆ ರೂ.1868 ದರದಲ್ಲಿ ಹಾಗೂ ಗ್ರೇಡ್ – ಎ ಭತ್ತವನ್ನು ಪ್ರತಿ ಕ್ವಿಂಟಾಲ್ ಗೆ ರೂ.1888ರ ದರದಲ್ಲಿ ಖರೀದಿಸಲು ಆದೇಶಿಸಿದೆ ಎಂದು ತಹಶೀಲ್ದಾರ್ ಮಹೇಶ್ ಜೆ. ತಿಳಿಸಿದರು.
ತಾಲೂಕು ಕಛೇರಿಯಲ್ಲಿ ಜರುಗಿದ 2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಖರೀದಿ ಮಾಡುವ ಬಗ್ಗೆ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಬೆಳ್ತಂಗಡಿ ತಾಲೂಕಿನಲ್ಲಿ ರೈತರು ಹೆಚ್ಚು ಸಾಮಾನ್ಯ ಹಾಗೂ ಕೆಂಪು ದಪ್ಪ ಕುಚಲಕ್ಕಿ ಬೆಳೆಯುತ್ತಿದ್ದು, ಪ್ರತಿ ಕ್ವಿಂಟಾಲ್ ಗೆ ಸರಾಸರಿ ರೂ.1600 ರಿಂದ 1800 ರ ವರೆಗೆ ಖಾಸಗಿ ವರ್ತಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನು ಹೋಲಿಸುವಾಗ ಕನಿಷ್ಠ ಬೆಂಬಲ ಬೆಲೆ ಯೋಜನೆಯು ಲಾಭದಾಯಕ ಯೋಜನೆಯಾಗಿರುತ್ತದೆ. ಸದ್ರಿ ಯೋಜನೆಯಡಿ ಪ್ರತಿ 1 ಎಕರೆಗೆ 16 ಕ್ವಿಂಟಾಲ್ ನಂತೆ ಗರಿಷ್ಠ 40 ಕ್ವಿಂ. ಭತ್ತ ಖರೀದಿ ಮಾಡಲು ಅವಕಾಶವಿದೆ. ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತ ಮಾದರಿಯನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕ ಮಾಡುವ ಗುಣಮಟ್ಟ ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಡೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡಲಾಗುವುದು. ನೋಂದಾಯಿತ ರೈತರಿಂದ ಭತ್ತವನ್ನು ಖರೀದಿಸಲು 2021ರ ಮಾರ್ಚ್ 20ರವರೆಗೆ ಅವಕಾಶವಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ 2020-21ನೇ ಸಾಲಿನ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸುವ ಕುರಿತು ಸರ್ಕಾರದ ನಡವಳಿಗಳನ್ನು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೆಶಕರ ಕಚೇರಿ ತಾಂತ್ರಿಕ ಅಧಿಕಾರಿ ಹುಮೇರಾ ಜಬೀನ್ ಸ್ವಾಗತಿಸಿ, ಚಿದಾನಂದ ಎಸ್. ಹೂಗಾರ್ ವಂದಿಸಿದರು.