1984ರಲ್ಲಿಯೇ ಡಾ.ಹೆಗ್ಗಡೆಯವರಿಂದ ಆತ್ಮನಿರ್ಭರತೆಯ ಚಿಂತನೆ: ಶಾಸಕ ಹರೀಶ್ ಪೂಂಜ

 

ಬೆಳ್ತಂಗಡಿ: ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಗುಣಮಟ್ಟದ ಪದಾರ್ಥಗಳನ್ನು ಸಿರಿ ಗ್ರಾಮೋದ್ಯೀಗ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನಲ್ಲಿ ಆರಂಭಿಸಿರುವ ಮಿಲೆಟ್ ಕೆಫೆಯೂ ಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ನೀಡುತ್ತಿದೆ. ನಾವೆಲ್ಲರೂ ಈಗ ಸ್ವಾವಲಂಬಿ ಜೀವನಕ್ಕೆ ಆತ್ಮನಿರ್ಭರತೆಯ ಕುರಿತು ಮಾತನಾಡುತ್ತೇವೆ. ಆದರೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1984ರಲ್ಲಿಯೇ ಈ ಚಿಂತನೆಯೊಂದಿಗೆ ಸಿರಿ ಘಟಕ ಆರಂಭಿಸಿದರು. ಇಂದು ಸಂಸ್ಥೆಯ ಮೂಲಕ ಸಾವಿರಕ್ಕೂ ಹೆಚ್ಚು ಜನತೆ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ಟಿ.ಬಿ.ಕ್ರಾಸ್ ಬಳಿ ಸಿರಿ ಗ್ರಾಮೋದ್ಯೋಗ ಘಟಕದಲ್ಲಿ ಹೊಸವರ್ಷಾಚರಣೆ ಹಾಗೂ ಲಕ್ಕಿ ಕೂಪನ್ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2020ರಲ್ಲಿ ಹಲವು ನಿರೀಕ್ಷೆಗಳಿದ್ದವು, ಆದರೆ ಕೊರೋನಾ ವಿಶ್ವದೆಲ್ಲೆಡೆ ವ್ಯಾಪಿಸಿ ಜನತೆ ಕಷ್ಟದಿಂದ ಜೀವನ ಸಾಗಿಸುವಂತಾಯಿತು. ಭಾರತ ದೇಶ ಕೊರೋನಾ ಹೊಡೆತದಿಂದ ಕೊಂಚಮಟ್ಟಿನಲ್ಲಿ ಚೇತರಿಕೆ ಕಂಡಿದೆ. ಕೆಲ ದೇಶಗಳು ಇನ್ನೂ ಸಂಕಷ್ಟದಲ್ಲಿವೆ. ಇದೀಗ ಹೊಸ ವರುಷ ಬಂದಿದ್ದು, ಸವಾಲುಗಳೊಂದಿಗೆ ಮುನ್ನಡೆಯಬೇಕಿದೆ. ಆತ್ಮವಿಶ್ವಾಸದೊಂದಿಗೆ ಸ್ವಾಭಿಮಾನದ ಜೀವನ ಸಾಗಿಸುತ್ತಾ, ಆತ್ಮನಿರ್ಭತರೆಯೊಂದಿಗೆ ಮುಂದೆ ನಡೆಯಬೇಕಿದೆ ಎಂದು ಹೇಳಿದರು.

ಉದ್ಯಮಿ ರಾಜೇಶ್ ಪೈ ಮಾತನಾಡಿ, ಉತ್ತಮ ವ್ಯಕ್ತಿಗಳ ನಂಟಿನಿಂದ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ಪ್ರಭಾವಿ ವ್ಯಕ್ತಿಗಳು ನಮ್ಮ ಜೀವನ ಧನಾತ್ಮಕವಾಗಿ ಬದಲಾಗಲು ಪ್ರೇರಣೆ ನೀಡುತ್ತಾರೆ. ಸಿಕ್ಕಿರುವ ಅವಕಾಶಗಳ ಸದುಪಯೋಗದೊಂದಿಗೆ ಜೀವನದಲ್ಲಿ ಅಭಿವೃದ್ಧಿ ಹೊಂದುವುದು ಅಗತ್ಯ ಎಂದು ಹೇಳಿದರು.

ಲೆಕ್ಕಪತ್ರ ಪರಿಶೋಧಕ ಅನಂತಕೃಷ್ಣ ಮಾತನಾಡಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ಹೊಸ ವರ್ಷಕ್ಕೆ ಹೊಸ ವಸ್ತುಗಳು ಲೋಕಾರ್ಪಣೆಯಾಗಲಿದೆ. ಈ ಮೂಲಕ ಇನ್ನೂ ಹಲವು ಪದಾರ್ಥಗಳನ್ನು ಸಿರಿ ಸಂಸ್ಥೆ ಉತ್ಪಾದನೆ ನಡೆಸಲಿದೆ ಎಂದರು.
ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಿರಿ ಗ್ರಾಮೋದ್ಯೋಗ ಸಂಸ್ಥೆ ತನ್ನ ಹಲವು ಕೇಂದ್ರಗಳ ಮೂಲಕ ಹಲವು ಪದಾರ್ಥಗಳ ಉತ್ಪಾದನೆ ನಡೆಸುತ್ತಿದೆ. ಈ ಬಾರಿ ಮಸಾಲೆ ಮಿಕ್ಸ್ ಪದಾರ್ಥಗಳನ್ನು ಮಾರುಕಟ್ಟೆಗೆ ನೂತನವಾಗಿ ಪರಿಚಯಿಸಲಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. 380 ಸಿರಿ ಮಳಿಗೆಗಳನ್ನು ಹೊಂದಿದ್ದು, 3 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿದೆ ಎಂದರು.
ಸಿರಿ ಆಯೋಜಿಸಿದ್ದ ಲಕ್ಕಿ ಕೂಪನ್ ಅದೃಷ್ಟಶಾಲಿಗಳ ಆಯ್ಕೆ ನಡೆಯಿತು. ನಿವೃತ್ತರಾದ ಸುಗಂಧಿನಿ ಅವರನ್ನು ಗೌರವಿಸಲಾಯಿತು.

ಸಿರಿ ಮಿಲೆಟ್ ಕೆಫೆ ಮೇಲ್ವಿಚಾರಕ ರಾಮ್ ಕುಮಾರ್ ನಿರೂಪಿಸಿ, ಗ್ರಾಮೀಣ ಮಳಿಗೆ ಯೋಜನಾಧಿಕಾರಿ ವಿನ್ಸೆಂಟ್ ಪಿಂಟೋ ಲಕ್ಕಿ ಕೂಪನ್ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಿರಿ ಆಡಳಿತ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ವಂದಿಸಿದರು.

error: Content is protected !!