ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ನಾಳೆ ಡಿ.27ರಂದು ಚುನಾವಣೆ ನಡೆಯಲಿದ್ದು ಮಸ್ಟರಿಂಗ್ ಕೇಂದ್ರವಾದ ಉಜಿರೆ ಎಸ್.ಡಿ.ಎಂ. ಪಿಯು ಕಾಲೇಜಿನಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು.
ಮಸ್ಟರಿಂಗ್ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ. ಮತ್ತು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿ, ಕರ್ತವ್ಯ ನಿರತರಿಗೆ ಮಾರ್ಗದರ್ಶನ ನೀಡಿದರು. ಉಜಿರೆ ಎಸ್.ಡಿ.ಎಂ ಪಿ.ಯು.ಕಾಲೇಜು ಹಾಗೂ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಮಸ್ಟರಿಂಗ್ ಕೇಂದ್ರಗಳಿದ್ದು, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮತಗಟ್ಟೆಗಳ ಭದ್ರತೆ ಪರಿಶೀಲಿಸಿದರು.
ಅಂಚೆ ಮತದಾನಕ್ಕೆ ಅವಕಾಶ:
ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ಅಂಚೆ ಮತದಾನ ಮಾಡಲು ಮಸ್ಟರಿಂಗ್ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸಿಬ್ಬಂದಿ ಮತ ಚಲಾಯಿಸಿ, ಕರ್ತವ್ಯಕ್ಕೆ ಹಾಜರಾದರು.
46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದ್ದು, ಒಟ್ಟು 1,439 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಚುನಾವಣೆಗೆ ಒಟ್ಟು 1,605 ಮಂದಿ ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಸಿಬ್ಬಂದಿ ಮತಪೆಟ್ಟಿಗೆ ಹಿಡಿದು ತಮ್ಮ ತಮ್ಮ ಮತಗಟ್ಟೆಗೆ ತೆರಳಿದರು.
ಮತಗಟ್ಟೆ ಸಿಬ್ಬಂದಿ ವಿವರ:
ಮತಗಟ್ಟೆ ಅಧಿಕಾರಿ-321 (ಪಿಆರ್‌ಒ), ಒಂದನೇ ಮತಗಟ್ಟೆ ಅಧಿಕಾರಿ-321 (ಎಪಿಆರ್‌ಒ), 2ನೇ, 3ನೇ ಮತಗಟ್ಟೆ ಅಧಿಕಾರಿ- 642, ಡಿ ಗ್ರೂಪ್ ಸಿಬಂದಿ- 321 ಒಟ್ಟು 1,605 ಮಂದಿಯನ್ನು ನೇಮಿಸಲಾಗಿದೆ.
ಕೊರೋನಾ ಸೋಂಕಿತರಿಗೂ ಅವಕಾಶ:
ತಾಲೂಕಿನಲ್ಲಿ ಕೊರೋನಾ ಸೋಂಕಿತರಿದ್ದು, ಎಲ್ಲರಿಗೂ ಪಿಪಿಇ ಕಿಟ್ ಸರಕಾರದ ವತಿಯಿಂದ ಒದಗಿಸಲಾಗಿದೆ. ಸೋಂಕಿತರು ಪಿಪಿಇ ಕಿಟ್ ಧರಿಸಿ, ಕೊನೆಯ ಒಂದು ಗಂಟೆ ಅವಧಿಯೊಳಗೆ ಮತ ಚಲಾವಣೆಯನ್ನು ನಿಗದಿತ ಮತಗಟ್ಟೆಯಲ್ಲಿ ಮಾಡಬಹುದಾಗಿದೆ.
ವಾಹನ ವ್ಯವಸ್ಥೆ:
ಮತಗಟ್ಟೆಗಳಿಗೆ ತೆರಳಲು 58 ಸಾರಿಗೆ ಬಸ್, 15 ಮ್ಯಾಕ್ಸಿಕ್ಯಾಬ್, 14 ಜೀಪ್ ಗಳನ್ನು ನಿಯೋಜಿಸಲಾಗಿತ್ತು. ಬಾಂಜಾರುಮಲೆ, ಎಳನೀರು ಹಾಗೂ ಶಿಶಿಲ ಮತಗಟ್ಟೆ ಸಿಬ್ಬಂದಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು.
ಮಸ್ಟರಿಂಗ್ ಕೇಂದ್ರದಿಂದ ನಡೆದು ಬಂದರು:
ಮಸ್ಟರಿಂಗ್ ಕೇಂದ್ರದಿಂದ ವಾಹನ ನಿಲುಗಡೆ ಸ್ಥಳಕ್ಕೆ ಸುಮಾರು 700 ಮೀಟರ್ ದೂರವಿದ್ದು, ಸಿಬ್ಬಂದಿ ಬಿರು ಬಿಸಿಲಿನಲ್ಲಿ ಭಾರವಾದ ಪೆಟ್ಟಿಗೆಗಳನ್ನು ಹೊತ್ತುಕೊಂಡು ನಡೆದು ಸಾಗುವಂತಾಯಿತು.
ಅಧಿಕಾರಿಗಳು ಮತದಾನ ಪ್ರಕ್ರಿಯೆ ಸುಸೂತ್ರವಾಗಿ, ಶಾಂತಿಯುತವಾಗಿ ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.