ಧರ್ಮಸ್ಥಳದಲ್ಲಿ ಪರಿಸರ ಸ್ನೇಹಿ ‌’ಗೋವು ಗೂಡ್ಸ್’- ‘ಗೋವು ಕಾರ್’: ‘ಕಸದಿಂದ ರಸ’ ಕಲ್ಪನೆಯಲ್ಲಿ ‌ಅನ್ವೇಷಣೆ

 

ಧರ್ಮಸ್ಥಳ: ಶಬ್ದ ಮಾಡದೆ, ಹೊಗೆ ಉಗುಳದೆ ಎರಡು ಆಕರ್ಷಕ ವಾಹನಗಳು ಚಲಿಸುತ್ತಿತ್ತು. ಈ ಪರಿಸರ ಸ್ನೇಹಿ ವಾಹನಗಳ ಗುಟ್ಟು ಏನು? ತಾಂತ್ರಿಕ ವಿನ್ಯಾಸ ಮೊದಲಾದವುಗಳನ್ನು ಕುತೂಹಲದಿಂದ ಗಮನಿಸಿದರೆ ಅನಾಯಾಸವಾಗಿ ಎಳೆಯುತ್ತಿರುವ ಗೋವುಗಳು ಕಾಣುತ್ತವೆ. ಒಂದು ವಾಹನದಲ್ಲಿ ಎರಡು ಎತ್ತುಗಳು, ಇನ್ನೊಂದು ವಾಹನದಲ್ಲಿ ಒಂದೇ ಬಸವ. ಇದು ಶ್ರೀ ಕ್ಷೇತ್ರ ಧರ್ಮಸ್ಥಳ ಯಾತ್ರಿಕರ ಸೆಳೆಯುವ ’ಗೋವು ಗೂಡ್ಸ್ ರಿಕ್ಷಾ-ಗೋವು ಕಾರ್’ನ ವಿಶೇಷತೆ..

ಉತ್ತರ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಜಟಕಾ ಬಂಡಿಗಳು ಕಂಡು ಬರುತ್ತವೆ. ಅದರೊಂದಿಗೆ ಎತ್ತಿನಗಾಡಿಗಳೂ ಕಾಣ ಸಿಗುತ್ತದೆ. ಆದರೆ ಧರ್ಮಸ್ಥಳದಲ್ಲಿ ಯಾತ್ರಿಕರಿಗೆ ನೋಡ ಸಿಗೋದು ಮಾತ್ರ ಆಧುನಿಕ ವಿನ್ಯಾಸದೊಂದಿಗೆ ಅತ್ಯಾಕರ್ಷವಾಗಿ ರಚನೆಗೊಂಡ ಗೋವು ವಾಹನಗಳು. ಇದು ಧರ್ಮಸ್ಥಳದ ವಿಶೇಷತೆ. ಸ್ಥಳೀಯ ಹಾಗೂ ನೂತನ ಅನ್ವೇಷಣೆಗಳಿಗೆ ಆದ್ಯತೆ ನೀಡುವುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿಶೇಷತೆ.

ವಿಶೇಷ ಆಕರ್ಷಣೆ:
ಕಸದಿಂದ ರಸವನ್ನು ಹೇಗೆ ಉಪಯೋಗಿಬಹುದು ಎಂಬುದಕ್ಕೆ ಇದು ಉದಾಹರಣೆ. ದೇವಸ್ಥಾನ ಸುತ್ತಮುತ್ತ ರಾಜ ಗಾಂಭೀರ್ಯದಿಂದ ಸುತ್ತಾಟ ನಡೆಸುವ ಈ ದೃಶ್ಯಗಳನ್ನು ಯಾತ್ರಿಕರು ಮೊಬೈಲ್‌ಗಳಲ್ಲಿ ಸೆರೆ ಹಿಡಿದು, ಆನಂದಿಸುತ್ತಿದ್ದಾರೆ. ಈ ಅಪರೂಪದ ದೃಶ್ಯ ಪಾರಂಪರಿಕ ಜೀವನಶೈಲಿಯನ್ನು ಆಧುನಿಕ ತಂತ್ರಜ್ಞಾನದ ಜೊತೆಗೆ ಮಿಳಿತಗೊಳಿಸಿ ಮತ್ತೆ ಜನರಿಗೆ ನೆನಪಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬದ್ಧತೆಯನ್ನು ಮತ್ತೊಮ್ಮೆ ನೆನಪಿಸುತ್ತದೆ.

ಗೋವು ಕಾರ್:
ಗೋವು ಕಾರ್ ಅನ್ನು ಹಿಂಬದಿಯಿಂದ ಗಮನಿಸಿದರೆ ಪಕ್ಕನೆ ಗೊತ್ತಾಗುವುದಿಲ್ಲ. ಧರ್ಮಾಧಿಕಾರಿ ಡಾ.ಹೆಗ್ಗಡೆಯವರು ಪ್ರಾಯೋಗಿಕವಾಗಿ ಪರಿಸರ ಸ್ನೇಹಿಯಾದ ಕಲ್ಪನೆಯೊಂದಿಗೆ, ಭಾರತೀಯ ಸಂಸ್ಕೃತಿಯಂತೆ ದೇವಾಲಯಗಳಲ್ಲಿ ಪಾವಿತ್ರತೆ ಹೆಚ್ಚಿಸುವ ದೃಷ್ಟಿಯಿಂದಲೂ ಇದನ್ನು ರಚಿಸಲಾಗಿದೆ. ಡಾ. ಹೆಗ್ಗಡೆಯವರ ಕಲ್ಪನೆ, ಮಾರ್ಗದರ್ಶನದಂತೆ ಹರ್ಷೇಂದ್ರ ಕುಮಾರ್ ಅವರ ಸಲಹೆ ಸೂಚನೆಯಂತೆ ಕಾರ್ ಮ್ಯೂಸಿಯಂ ನೋಡಿಕೊಳ್ಳುವ ದಿವಾಕರ್‌ ಅವರ ತಂಡ ಪರಿಸರಸ್ನೇಹಿ ಗೋವು ಗೂಡ್ಸ್ ಹಾಗೂ ಗೋವು ಕಾರನ್ನು ತಯಾರಿಸಿದೆ.

‘ನಂದಿ‌’ ಕಲ್ಪನೆ:
ಸಾಮಾನು ಸಾಗಾಟದ ಗೂಡ್ಸ್ ರಿಕ್ಷಾದ ಮುಂಭಾಗವನ್ನು ತೆಗೆದು ಹಿಂಭಾಗವನ್ನು ಉಳಿಸಿಕೊಂಡು ಗೋವು ಗೂಡ್ಸ್ ರಿಕ್ಷಾವನ್ನು ಅನ್ವೇಷಣೆ ಮಾಡಲಾಗಿದೆ. ಯಾವುದೇ ಇಂಧನದ ಅಗತ್ಯವಿಲ್ಲದೆ, ಎತ್ತಿನ ಬಲದಿಂದ ಓಡಾಡುವ ಪರಿಸರ ಸ್ನೇಹಿಯೂ ಹೌದು. ಇದನ್ನೆಳೆಯುವ ‘ಪೊಂಗನೂರು’ ತಳಿಯ ಬಸವನಿಗೆ ಬಸವಳಿಕೆಯಾಗದಂತೆ ಈ ಪರಿವರ್ತಿತ ಗಾಡಿಗೆ ಆಧುನಿಕ ರಬ್ಬರ್ ಚಕ್ರಗಳು, ಹೈಡ್ರಾಲಿಕ್ ಬ್ರೇಕ್ ಹಾಗೂ ಪಾರ್ಕಿಂಗ್ ಜ್ಯಾಕ್ ಕೂಡ ಅಳವಡಿಸಲಾಗಿದೆ. ಹೀಗಾಗಿ ಎಳೆಯುವ ವೇಳೆ ಎತ್ತಿಗೆ ಅತ್ಯಂತ ಹಗುರ ಅನುಭೂತಿಯಾಗುವ ವಿನ್ಯಾಸ ಈ ಗಾಡಿಯಲ್ಲಿದೆ. ಈಶ್ವರನ ವಾಹನ ‘ನಂದಿ’. ಆ ಕಲ್ಪನೆಯಯಲ್ಲಿ ತಯಾರಾದ ಗೋವು ಗೂಡ್ಸ್ ದೇವರಿಗೆ ಪೂಜಾ ಸಾಮಾಗ್ರಿಯನ್ನು ಒಯ್ಯುವ ವಾಹನವಾಗಿದೆ. ದಿನನಿತ್ಯದ ಅಗತ್ಯವಾದ ಪೂಜಾ ಸಾಮಾಗ್ರಿಯನ್ನು ಜಮಾ ಉಗ್ರಾಣದಿಂದ ಶ್ರೀಮಂಜುನಾಥಸ್ವಾಮಿಯ ದೇವಳದ ವರೆಗೆ ತರಲು ಬಳಸಲಾಗುತ್ತದೆ.

ಗಾಡಿ ಎಳೆಯುವ ‘ಓಂಗೋಲ್’ ಎತ್ತುಗಳು:
‘ಗೋವು ಕಾರ’ನ್ನು ಮಂಗಳೂರಿನಿಂದ ತರಿಸಿದ್ದ ಹಳೆಯ ಅಂಬಾಸೆಡರ್ ಕಾರಿನ ಹಿಂಭಾಗವನ್ನು ಉಳಿಸಿಕೊಂಡು, ಮುಂಭಾಗದಲ್ಲಿ ಗೋವುಗಳಿಗೆ ಎಳೆಯಲು ಸಾಧ್ಯವಾಗುವಂತೆ ರಚನೆ ಮಾಡಲಾಗಿದೆ. ‘ಓಂಗೋಲ್’ ತಳಿಯ ಎರಡು ಎತ್ತುಗಳನ್ನು ಉಪಯೋಗಿಸಲಾಗಿದೆ. ಚಕ್ರಗಳಿಗೆ, ವಿಭಿನ್ನ ವಿನ್ಯಾಸದ ವ್ಹೀಲ್ ಕ್ಯಾಪ್ ಹಾಕಲಾಗಿದ್ದು, ವಾಹನ ನಿಲ್ಲಲು ಸಹಾಯವಾಗುವಂತೆ ಬ್ರೇಕನ್ನೂ ಅಳವಡಿಸಲಾಗಿದೆ. ಮಂಜೂಷಾ ಕಾರು ಸಂಗ್ರಹಾಲಯದ ಸಿಬ್ಬಂದಿಗಳು ಮತ್ತು ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಪಾತ್ರ ಇದರಲ್ಲಿದೆ.

ದೇಶಿ ತಳಿ ಗೋವುಗಳೇ ಆಕರ್ಷಣೆ:
ಆಧುನಿಕ ವಿನ್ಯಾಸಗಳಿಂದ ಗೂಡ್ಸ್ ರಿಕ್ಷಾ ಮತ್ತು ಕಾರ್ ಜನರ ಗಮನ ಸೆಳೆಯುತ್ತಿದ್ದರೆ ಅದನ್ನು ನಿರಾಯಾಸವಾಗಿ ಎಳೆಯುವ ಎತ್ತುಗಳು(ಬಸವ) ಅಷ್ಟೇ ಶ್ರೇಷ್ಠತೆಯನ್ನು ಪಡೆದಿದೆ. ಗೋವು ಕಾರಿಗೆ ಎರಡು ಎತ್ತುಗಳನ್ನು ಉಪಯೋಗಿಸಿದರೆ, ಗೋವು ಗೂಡ್ಸ್ ರಿಕ್ಷಾಗೆ ಒಂಟಿ ಬಸವ ಮಾತ್ರ.

ವಿಶೇಷತೆ:
ಕ್ಷೇತ್ರದ ಗೋಶಾಲೆಯ ನೋಡಿಕೊಳ್ಳುವ ಯೋಗೀಶ್ ಭಟ್ ನೀಡುವ ಮಾಹಿತಿಯಂತೆ ನಮ್ಮ ದೇಶದಲ್ಲಿ ೪೦ ದೇಶಿಯ ತಳಿಗಳಿದೆ. ಅದರಲ್ಲಿ ಪುಂಗನೂರು ತಳಿ ಶ್ರೇಷ್ಠತೆಗೆ ಹೆಸರುವಾಸಿ. ತೆಲಂಗಾಣದ ತಳಿಯೆಂದೇ ಕರೆಯಲಾಗುತ್ತದೆ. ತಿರುಮಲ ತಿಮ್ಮಪ್ಪನಿಗೆ ಇದೇ ತಳಿಯ ಹಾಲು ಅಭಿಷೇಕಕ್ಕೆ ನೀಡಲಾಗುತ್ತದೆ. ಅದೇ ತಳಿಯ ಬಸವನ್ನು ಗೋವು ಗೂಡ್ಸ್ ರಿಕ್ಷಾಕ್ಕೆ ಬಳಸಲಾಗಿದೆ.
ಗೋವು ಕಾರ್‌ಗೆ ಇನ್ನೊಂದು ದೇಶಿಯ ತಳಿಯಾದ ತೆಲಂಗಾಣದ ಓಂಗೋಲ್ ತಳಿಯನ್ನು ಉಪಯೋಗಿಸಲಾಗಿದೆ. ಇದು ಕೆಲಸದ ಹೋರಿಗಳಾದ್ದು, ಭಾರವನ್ನು ಹೊರವಷ್ಟು ಗಟ್ಟಿಗ ಜಾತಿಯದ್ದು. ಗೋಶಾಲೆಯಲ್ಲಿ ಇದಕ್ಕೆಂದು ಶೆಡ್ ಮಾಡಲಾಗಿದೆ. ಮೂಲೆಗುಂಪಾಗುತ್ತಿರುವ ವಾಹನಗಳು, ಅಪರೂಪದ ತಳಿಯ ಗೋವುಗಳನ್ನು ಬಳಸಿ ಈ ಸುಂದರ ವಾಹನ ಸೃಷ್ಟಿಗೊಂಡಿದೆ ಎನ್ನುತ್ತಾರೆ.

error: Content is protected !!