ಬೆಳ್ತಂಗಡಿ: ಉಜಿರೆಯ ಬಾಲಕ ಅನುಭವ್ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು, ಪ್ರಕರಣ ತನಿಖಾಧಿಕಾರಿಗಳ ಸಮಯೋಚಿತ ನಿರ್ಧಾರದಿಂದ ಬಾಲಕ ಅನುಭವ್ ಕೂದಲೆಳೆ ಅಂತರದಿಂದ ದೊಡ್ಡಮಟ್ಟದ ಅಪಾಯದಿಂದ ಪಾರಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಕೆಲ ನಿಮಿಷಗಳು ತಡವಾಗಿ ಕೋಲಾರಕ್ಕೆ ತಲುಪಿದರೂ, ಅಪಹರಣಕಾರರು ಬಾಲಕನನ್ನು ಆಂಧ್ರಪ್ರದೇಶದತ್ತ ಕೊಂಡೊಯ್ದು ಪ್ರಕರಣ ಮತ್ತಷ್ಟು ಜಟಿಲವಾಗುವ ಸಾಧ್ಯತೆಗಳಿದ್ದವು. ಆದರೆ ಎಸ್.ಪಿ. ಲಕ್ಷ್ಮೀ ಪ್ರಸಾದ್ ಸೇರಿದಂತೆ ತನಿಖಾಧಿಕಾರಿಗಳ ಕಠಿಣ ಪರಿಶ್ರಮ ಹಾಗೂ ದಿಟ್ಟ ನಿರ್ಧಾರದಿಂದ ಬಾಲಕ ಅನುಭವ್ ಸುರಕ್ಷಿತವಾಗಿ ತನ್ನ ಪೋಷಕರ ಮಡಿಲು ಸೇರುವಂತಾಗಿದೆ. ಈ ಕುರಿತ ಸಮಗ್ರ ಮಾಹಿತಿ ‘ಪ್ರಜಾಪ್ರಕಾಶ’ ವೀಕ್ಷಕರಿಗಾಗಿ.
ಡಿ. 17ರಂದು ಸಂಜೆ ಬಾಲಕ ಅಪಹರಣಗೊಂಡ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಅಪಹರಣಕಾರರು ಬಾಲಕನ ಬಿಡುಗಡೆಗಾಗಿ ಬಿಟ್ ಕಾಯಿನ್ ಮೂಲಕ 17 ಕೋಟಿ. ರೂ.ಗಳ ಬೇಡಿಕೆ ಇಟ್ಟಿದ್ದರು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೂ ಬಾಲಕ ಎಲ್ಲಿದ್ದಾನೆ ಎನ್ನುವ ಖಚಿತ ಮಾಹಿತಿ ಲಭಿಸಿರಲಿಲ್ಲ. ಡಿ.18ರಂದು ಬೆಳಗ್ಗೆ ದ.ಕ. ಎಸ್.ಪಿ. ಲಕ್ಷ್ಮೀ ಪ್ರಸಾದ್ ಅವರು ಅಪಹರಣ ನಡೆದ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿ, 5 ತಂಡಗಳನ್ನು ರಚಿಸಿದ್ದರು.
ತನಿಖಾಧಿಕಾರಿಗಳ ತಂಡ ರಚನೆ:
ದ.ಕ. ಎಸ್.ಪಿ. ಲಕ್ಷ್ಮೀ ಪ್ರಸಾದ್ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ವೆಲೈಂಟೆನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ 5 ತಂಡ ರಚಿಸಲಾಗಿತ್ತು. ಡಿಸಿಬಿಐ ನಿರೀಕ್ಷಕ ಚೆಲುವರಾಜು, ಡಿ.ಎಸ್.ಬಿ ನಿರೀಕ್ಷಕ ರವಿ ಬಿ.ಎಸ್., ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಬೆಳ್ತಂಗಡಿ ಎಸ್.ಐ ನಂದಕುಮಾರ್, ಧರ್ಮಸ್ಥಳ ಎಸ್.ಐ. ಪವನ್ ಕುಮಾರ್, ಉಪ್ಪಿನಂಗಡಿ ಎಸ್.ಐ. ಈರಯ್ಯ, ಬೆಳ್ತಂಗಡಿ ಸಂಚಾರಿ ಎಸ್.ಐ. ಕುಮಾರ್ ಕಾಂಬ್ಳೆ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯ ಭಾಗವಾಗಿದ್ದರು.
ವಿವಿಧ ಪ್ರದೇಶಗಳಿಗೆ ತನಿಖಾಧಿಕಾರಿಗಳ ತಂಡ:
ಅಪಹರಣ ನಡೆದ ಸಮಯದಿಂದ ತನಿಖಾಧಿಕಾರಿಗಳ ತಂಡ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆಗಿಳಿಯುತ್ತದೆ. ಎಸ್.ಐ. ಪವನ್ ನೇತೃತ್ವದ ತಂಡ ಚಿಕ್ಕಮಗಳೂರು, ಮೂಡಿಗೆರೆಯತ್ತ ತೆರಳಿದರೆ, ಕುಮಾರ್ ಕಾಂಬ್ಳೆಯವರ ತಂಡ ಹಾಸನ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಇತ್ತ ನಂದಕುಮಾರ್ ಅವರನ್ನೊಳಗೊಂಡ ತಂಡ ಉಜಿರೆ, ಚಾರ್ಮಾಡಿ, ಸೌತಡ್ಕ ಮೊದಲಾದ ಕಡೆ ಹುಡುಕಾಟ ಜತೆ ಮನೆಯವರೊಂದಿಗೆ ನಿರಂತರ ಸಂಪರ್ಕ ಇರಿಸಿ, ಅಪಹರಣಕಾರರ ಮಾಹಿತಿ ಸಂಗ್ರಹಿಸುತ್ತಿದ್ದರು. ಆದರೆ ಯಾವುದೇ ಧನಾತ್ಮಕ ಉತ್ತರಗಳು ಲಭಿಸುವುದಿಲ್ಲ, ಆದರೆ ಪೊಲೀಸರು ಮಾತ್ರ ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ.
ತನಿಖಾಧಿಕಾರಿಗಳ ಸಮಯೋಚಿತ ನಡೆ:
ದ.ಕ. ಎಸ್.ಪಿ. ಲಕ್ಷ್ಮೀ ಪ್ರಸಾದ್ ಅವರ ಜಾಣ ನಡೆಯೇ ಪ್ರಕರಣ ಬೇಧಿಸಲು ನೆರವಾಯಿತು ಎಂಬ ಅಂಶವನ್ನು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಜೊತೆ ಬೆಳ್ತಂಗಡಿ ಎಸ್.ಐ. ಆಗಿದ್ದು ಪ್ರಸ್ತುತ ಡಿ.ಎಸ್.ಬಿ ನಿರೀಕ್ಷಕ ರವಿ ಬಿ.ಎಸ್. ಅವರೂ ಕೈ ಜೋಡಿಸಿದ್ದು ತನಿಖೆಯ ಗತಿ ಹೆಚ್ಚಲು ನೆರವಾಯಿತು. ಎಸ್ಪಿಯವರ ನಿರ್ದೇಶನದಲ್ಲಿ ಪ್ರಕರಣ ಅತೀ ಶೀಘ್ರದಲ್ಲಿ ಸುಖಾಂತ್ಯವಾಯಿತು ಎಂದು ತಿಳಿದುಬಂದಿದೆ.
ಮಗುವಿನ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟರು:
ಕೋಲಾರ ಜಿಲ್ಲೆ ಸಮೀಪ ಮಗು ಇರುವ ಸುಳಿವು ಪೊಲೀಸರಿಗೆ ಲಭಿಸುತ್ತದೆ. ಈ ಸಂದರ್ಭ ಬೆಳ್ತಂಗಡಿ ಎಸ್.ಐ. ನಂದಕುಮಾರ್, ಸಿಬ್ಬಂದಿಗಳಾದ ಇಬ್ರಾಹಿಂ, ಬಿನ್ನಿ, ಚರಣ್ ರಾಜ್ ಹಾಗೂ ಉಜಿರೆ ಸ್ಥಳೀಯ ನಿವಾಸಿ ಚಾಲಕ ಅಜಯ್ ಶೆಟ್ಟಿ ಅವರನ್ನು ಒಳಗೊಂಡ ತಂಡ ಕೋಲಾರದತ್ತ ತೆರಳುತ್ತದೆ. ಆದರೆ ಈ ತಂಡದಲ್ಲಿ ಎಸ್.ಐ. ಹೊರತುಪಡಿಸಿ ಸಿಬ್ಬಂದಿಗಳ ಬಳಿ ಆಯುಧಗಳು ಇರುವುದಿಲ್ಲ. ಅಪಹರಿಸಿದವರ ಬಳಿ ಯಾವ ಆಯುಧಗಳಿವೆ ಎಂಬ ಮಾಹಿತಿಯೂ ಇರುವುದಿಲ್ಲ. ಆದರೆ ಮಗುವನ್ನು ಸುರಕ್ಷಿತವಾಗಿ ಕರೆತರಬೇಕು ಎಂಬ ಉದ್ದೇಶದಿಂದ ಮುನ್ನಡೆದು ಕೋಲಾರದತ್ತ ಸಾಗುತ್ತಾರೆ.
ಪೊಲೀಸರಿಗೆ ಅಜಯ್ ಶೆಟ್ಟಿ ಸಹಕಾರ:
ಹಿರಿಯ ಅಧಿಕಾರಿಗಳ ತಂಡದ ಆದೇಶದಂತೆ ಆದಷ್ಟು ಶೀಘ್ರವಾಗಿ ಕೋಲಾರಕ್ಕೆ ತೆರಳಬೇಕಿತ್ತು. ಆದರೆ ಎರಡು ದಿನಗಳ ಕಾಲ ಊಟ, ತಿಂಡಿ, ನಿದ್ದೆ ಇಲ್ಲದೆ ಪೊಲೀಸರು ಕಂಗಾಲಾಗಿದ್ದರು. ಈ ಸಂದರ್ಭ ಸ್ಥಳೀಯ ಸಮಾಜ ಸೇವಕ ರಾಮಚಂದ್ರ ಶೆಟ್ಟಿಯವರ ಪುತ್ರ ಹಲವಾರು ಆಫ್ ರೋಡ್ ರ್ಯಾಲಿಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ ಅಜಯ್ ಶೆಟ್ಟಿ ಅವರು ನೆರವಾಗಿದ್ದು, ತಮ್ಮ ಫಾರ್ಚುನರ್ ಕಾರಿನಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರನ್ನು ಕರೆದೊಯ್ಯಲು ಹೊರಟಿದ್ದಾರೆ. ಅಜಯ್ ಅವರ ಕುರಿತು ಅರಿತಿದ್ದರಿಂದ ಪೊಲೀಸರು ಇವರನ್ನು ಕರೆದುಕೊಂಡು ಸಾಗುತ್ತಾರೆ. ಚಾರ್ಮಾಡಿ, ಮೂಡಿಗೆರೆ ಮಾರ್ಗವಾಗಿ ಕೋಲಾರಕ್ಕೆ ತೆರಳುತ್ತಾರೆ.
ವಾರಂತ್ಯವಾದ್ದರಿಂದ ಸವಾಲು ಹೆಚ್ಚಾಗಿತ್ತು:
ಅಜಯ್ ಶೆಟ್ಟಿ ಅವರು ತಿಳಿಸುವಂತೆ, ಎಸ್.ಐ. ಹಾಗೂ ತಂಡ ಮಗುವನ್ನು ಹೇಗಾದರೂ ಉಳಿಸಲೇ ಬೇಕು ಎಂಬ ದೃಢ ನಿರ್ಧಾರದಿಂದ ಸಾಗಿದ್ದೆವು. ವಾರಾಂತ್ಯವಾದ್ದರಿಂದ ಚಾಲನೆ ವೇಳೆ ಸವಾಲುಗಳು ಹೆಚ್ಚಾಗಿದ್ದವು. ಟೋಲ್‍ಗೇಟ್ ಗಳಲ್ಲಿ ವಾಹನಗಳು ಹೆಚ್ಚಿದ್ದವು. ನೆಲಮಂಗಲದಿಂದ ಟ್ರಾಫಿಕ್ ಇದ್ದು, ಚಾಲನೆ ನಿಜಕ್ಕೂ ಸವಾಲಾಗಿತ್ತು. ಆದರೂ ನಾವು ಆದಷ್ಟು ಶೀಘ್ರ ನಮ್ಮ ಗುರಿಮುಟ್ಟುವಂತಾಗಿ, ಮಗುವನ್ನು ರಕ್ಷಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು.
4 ಗಂಟೆಯಲ್ಲೇ ಕೋಲಾರ ತಲುಪಿಸಿದ ಅಜಯ್:
ರಾತ್ರಿ 11 ಗಂಟೆ ಸುಮಾರಿಗೆ ಉಜಿರೆಯಿಂದ ಫಾರ್ಚುನರ್ ವಾಹನ ಹೊರಟಿದ್ದು, ಸುಮಾರು 400 ಕಿ.ಮೀ. ಗೂ ಹೆಚ್ಚು ದೂರವನ್ನು ಕೇವಲ 3 ಗಂಟೆ 56 ನಿಮಿಷಗಳಲ್ಲಿ ತಲುಪುವಂತಾಗಿದೆ. ಯಾವುದೇ ಟ್ರಾಫಿಕ್ ವಿನಾಯಿತಿ ಇಲ್ಲದೆಯೂ ಅತಿ ಶೀಘ್ರವಾಗಿ ಸಾಗಿದರು. ಅಜಯ್ ಅವರ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು, ಪೊಲೀಸರಿಂದ ಶ್ಲಾಘನೆ ವ್ಯಕ್ತವಾಗಿದೆ. ದ.ಕ. ಎಸ್.ಪಿ. ಲಕ್ಷ್ಮೀ ಪ್ರಸಾದ್ ಅವರೂ ಅಜಯ್ ಅವರನ್ನು ಕಂಡು ಸಮಯೋಚಿತ ಸಹಾಯಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಮಾಸ್ತಿ ಪೊಲೀಸರ ಸಹಕಾರ:
ದ.ಕ. ಪೊಲೀಸರಿಗೆ ಆರೋಪಿಗಳು ಕೋಲಾರ ಜಿಲ್ಲೆಯಲ್ಲಿ ಇರುವ ಮಾಹಿತಿ ಪಡೆದು ಕೋಲಾರ ಎಸ್.ಪಿ. ಅವರ ಸಹಕಾರದೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ. ಕೊಲಾರ ಪೊಲೀಸರೂ ಸಹಕಾರ ನೀಡಿದ್ದಾರೆ. ಮಾಸ್ತಿ ಠಾಣೆಯ ಎಸ್.ಐ. ಅವರು ನಂದಕುಮಾರ್ ಅವರ ತಂಡಕ್ಕೆ ತಮ್ಮ ಸಹಕಾರ ನೀಡಿ, ಅವರ ಜೊತೆ ಮಗುವಿದ್ದ, ಮನೆಯ ಬಳಿಗೆ ತೆರಳಿದ್ದಾರೆ.
ಅಪಾಯದ ಮುನ್ಸೂಚನೆ ತಿಳಿಸಿದ ಸ್ಥಳೀಯ ಎಸ್.ಐ.:
ಕೂರ್ನ ಹಳ್ಳಿಯ ಮನೆಯಲ್ಲಿರುವ ವಿಚಾರ ತಿಳಿಸಿದ ಕೂಡಲೇ ಸ್ಥಳೀಯ ಎಸ್.ಐ. ದ.ಕ. ತಂಡಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ. ಮಗು ಇರುವ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ನಮ್ಮ ತಂಡಕ್ಕೆ ಅಪಾಯನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಮುಖ್ಯವಾಗಿ ಕೋಲಾರ ಸುತ್ತಮುತ್ತ ದುಡ್ಡಿಗಾಗಿ ಏನನ್ನೂ ಮಾಡುವ ಅಪಾಯಕಾರಿ ಗುಂಪುಗಳಿದ್ದು, ಪೂರ್ವತಯಾರಿ ಇಲ್ಲದೆ ಹೋದಲ್ಲಿ ಅಪಾಯ ಉಂಟಾಗಬಹುದು. ಆದ್ದರಿಂದ ಬೆಳಗ್ಗಿನವರೆಗೆ ಕಾಯುವಂತೆ ಸೂಚಿಸಿದ್ದಾರೆ. ಆದರೆ ಈ ತಂಡದ ನೇತೃತ್ವ ವಹಿಸಿದ್ದ ನಂದಕುಮಾರ್ ಅವರು ಮಗುವಿನ ಜೀವ ಮುಖ್ಯ ಎಂಬುದನ್ನು ಮನವರಿಕೆ ಮಾಡಿಸಿ, ಕಾರ್ಯಾಚರಣೆಗಿಳಿದಿದ್ದಾರೆ ಎನ್ನುತ್ತಾರೆ ತಂಡದಲ್ಲಿದ್ದ ಸಿಬ್ಬಂದಿ.
ಅಪಹರಿಸಿದವರ ಮನೆಯತ್ತ:
ಮಾಸ್ತಿ ಠಾಣೆಯಿಂದ ಅಲ್ಲಿನ ಎಸ್‍ಐ ಹಾಗೂ ಸಿಬ್ಬಂದಿ ಜೊತೆ ಮಗುವನ್ನು ಅಪಹರಿಸಿ ಇಟ್ಟಿದ್ದ ಕೂರ್ನಹಳ್ಳಿಯ ಮನೆಬಳಿಗೆ ಪೊಲೀಸರು ಧಾವಿಸಿದ್ದಾರೆ. ಮಗು ಇರಿಸಿದ್ದ ಮನೆಯ ಸುತ್ತಮುತ್ತ ನೂರಾರು ಮನೆಗಳಿದ್ದು, ಮಗುವನ್ನು ರಕ್ಷಿಸುವ ಉದ್ದೇಶದಿಂದ ಮುನ್ನಡೆದು ಮನೆಯ ಒಳಗೆ ನುಗ್ಗಿದ್ದಾರೆ.
ನಿದ್ದೆಯ ಮಂಪರಿನಲ್ಲಿದ್ದರು:
ಕುಟುಂಬಸ್ಥರಿದ್ದ ಮನೆಯಾಗಿದ್ದು, ಮಗುವಿನ ಬಗ್ಗೆ ಸಮರ್ಪಕ ಮಾಹಿತಿ ನೀಡದೆ ತಂಗಿದ್ದರು. ಮಗುವನ್ನು ಕರೆದುಕೊಂಡು ಬಂದಿದ್ದರಿಂದ ನಿದ್ರೆಗೆ ಜಾರಿದ್ದರು. ಪೊಲೀಸರು ಮನೆಗೆ ಬರುವ ಸುಳಿವು ಇರದೆ ಇದ್ದುದರಿಂದ ಮನೆಗೆ ಯಾರು ಆಗಮಿಸಿದ್ದಾರೆ ಎಂಬುದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದರು. ಒಟ್ಟಿನಲ್ಲಿ ಉಜಿರೆಯಿಂದ ತೆರಳಿದ್ದ 5 ಮಂದಿ ಹಾಗೂ ಸ್ಥಳೀಯ ಇಬ್ಬರು ಪೊಲೀಸರ ಜೊತೆಗೆ ಸೇರಿಕೊಂಡು ಮಗುವನ್ನು ರಕ್ಷಿಸಿದ್ದಾರೆ.
ನಿದ್ದೆ ಮಾಡಿದ್ದ ಅನುಭವ್:
ಕಾರ್ಯಾಚರಣೆ ಬಗ್ಗೆ ಬಾಲಕ ಅನುಭವ್ ಮಾಹಿತಿ ನೀಡಿದ್ದು, ಅಪಹರಣಕಾರರು ಮರುದಿನ ಅನುಭವ್ ಗೆ ಹೊಸ ಬಟ್ಟೆ ಕೊಡಿಸಿ, ಆಂಟಿಯ ಮನೆಗೆ ಕರೆದೊಯ್ಯುವುದಾಗಿ ನಂಬಿಸಿದ್ದರು. ಬಳಿಕ ವಿಶ್ರಾಂತಿಗಾಗಿ ನಿದ್ದೆಗೆ ಜಾರಿದ್ದರು. ಅನುಭವ್ ಗೆ ಎಚ್ಚರವಾಗುವ ಸಂದರ್ಭ ಪೊಲೀಸರು ಆರೋಪಿಗಳನ್ನು ಹಿಡಿದಿದ್ದರು ಎಂಬುದಾಗಿ ತಿಳಿಸಿದ್ದಾರೆ. ಪೊಲೀಸರು ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು ತಮ್ಮ ವಾಹನಗಳಲ್ಲಿ ಕುಳ್ಳಿರಿಸಿದ್ದಾರೆ.
ಸ್ಥಳೀಯರಿಂದ ತನಿಖಾಧಿಕಾರಿಗಳಿಗೆ ದಿಗ್ಬಂಧನ:
ಕಾರ್ಯಾಚರಣೆ ಸಂದರ್ಭ ಅಪಹರಣಕಾರರ ಮನೆಯಲದಲಿದ್ದವರು ಅರಚಿಕೊಂಡಿದ್ದಾನೆ. ಕೆಲವೇ ಕ್ಷಣದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಸ್ಥಳೀಯರು ಕಾರ್ಯಾಚರಣೆ ನಡೆಸಲು ತೆರಳಿದ್ದ ಪೊಲೀಸರಿಗೆ ದಿಗ್ಭಂಧನ ಹಾಕಿದ್ದಾರೆ. ಒಂದೆಡೆ ಮಗುವಿನ ರಕ್ಷಣೆ ಮಾಡಬೇಕು, ಇನ್ನೊಂದೆಡೆ ಆರೋಪಿಗಳು ಪರಾರಿಯಾಗದಂತೆ ನೋಡಿಕೊಳ್ಳಬೇಕು, ಇವುಗಳ ನಡುವೆ ಸ್ಥಳೀಯರ ದಿಗ್ಬಂಧನ. ಇವೆಲ್ಲವನ್ನೂ ನಿಭಾಯಿಸಬೇಕು. ಕಾರ್ಯಾಚರಣೆಗೆ ಹೋದದ್ದು ಏಳು ಜನ, ಆರೋಪಿಗಳು ಆರು ಜನ. ಶಸ್ತ್ರಾಸ್ತ್ರಗಳೂ ಇಲ್ಲ. ಬೆಳ್ತಂಗಡಿ ತಂಡ ಸಮವಸ್ತ್ರದಲ್ಲಿ ಇಲ್ಲದೆ ಇದ್ದುದರಿಂದ ಸ್ಥಳೀಯರಿಗೂ ಗೊಂದಲ ಎದುರಾಗಿತ್ತು. ಮಾಸ್ತಿ ಠಾಣೆಯ ಎಸ್.ಐ ಮನವರಿಕೆ ಮಾಡಿದರೂ ಫಲ ನೀಡಿರಲಿಲ್ಲ. ಕೊನೆಗೂ ನಂದಕುಮಾರ್ ತಂಡ ಸ್ಥಳೀಯರ ಮಧ್ಯದಿಂದ ಜೀವದ ಹಂಗು ತೊರೆದು ಹರಸಾಹಸ ಪಟ್ಟು ಮಗು ರಕ್ಷಿಸಿ, ಆರೋಪಿಗಳನ್ನು ಬಂಧಿಸಿ, ಅಲ್ಲಿಂದ ಬಂದಿದ್ದಾರೆ.
ಕೆಲ ನಿಮಿಷಗಳಲ್ಲಿ ಆಂಧ್ರದತ್ತ ಪರಾರಿ ಸಾಧ್ಯತೆ:
ಮಾಸ್ತಿ ಬಳಿ ತಮಿಳುನಾಡು ಹಾಗೂ ಆಂದ್ರಪ್ರದೇಶದ ಗಡಿ ಭಾಗವಾಗಿದ್ದು, ಆರೋಪಿಗಳು ಮಗುವನ್ನು ಆಂಧ್ರಪ್ರದೇಶದತ್ತ ಸಾಗಿಸಲು ವ್ಯವಸ್ಥೆ ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೆಲ ನಿಮಿಷ ತಡವಾಗಿದ್ದರೂ ಆಂಧ್ರ ಗಡಿಯಾಚೆ ತೆರಳುತ್ತಿದ್ದದರು. ಬಳಿಕ ಪ್ರಕರಣ ಇನ್ನಷ್ಟು ಜಟಿಲವಾಗುವ ಸಾಧ್ಯತೆಗಳೂ ಇತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ನಾಲ್ವರು ಮುಖ್ಯ ಆರೋಪಿಗಳು:
ಬಂಧನವಾದವರಲ್ಲಿ ನಾಲ್ವರು ಮುಖ್ಯ ಆರೋಪಿಗಳು ಅನುಭವ್‍ನನ್ನು ಕರೆದುಕೊಂಡು ಹೋಗಿದ್ದಾರೆ. ಉಜಿರೆಯಿಂದ ಕೋಲಾರ ತಲುಪುವವರೆಗೆ ಇವರ ಪಾತ್ರ ಪ್ರಮುಖವಾಗಿತ್ತು. ಆದರೆ ಬಳಿಕ ಕೋಲಾರದ ಕೂರ್ನಹಳ್ಳಿಯಲ್ಲಿ ಅಪಹರಣಕಾರರಿಗೆ ಆಶ್ರಯ ನೀಡಿದ ಆರೋಪದಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಊಟ, ನಿದ್ದೆಯಿಲ್ಲ, ಮೂತ್ರ ಶಂಕೆಯೂ ಮಾಡದ ಪೊಲೀಸರು!:
ಡಿ.17ರಂದು ಸಂಜೆ ಘಟನೆ ನಡೆದಿದ್ದು, ಎಸ್.ಪಿ. ಸೇರಿದಂತೆ ತನಿಖಾಧಿಕಾರಿಗಳ ತಂಡ ನಿದ್ದೆಬಿಟ್ಟು ಹಗಲಿರುಳು ಕಾರ್ಯನಿರ್ವಹಿಸಿದೆ. ಕೋಲಾರಕ್ಕೆ ಕಾರ್ಯಾಚರಣೆಗೆ ತೆರಳಿದ ತಂಡದ ಸಿಬ್ಬಂದಿಯೊಬ್ಬರು ತಿಳಿಸುವಂತೆ ಎಲ್ಲಿ ವಾಹನ ನಿಲ್ಲಿಸಿದರೆ ತಡವಾಗುತ್ತದೋ ಎಂಬ ಉದ್ದೇಶದಿಂದ ಊಟ, ನಿದ್ದೆ ಬಿಟ್ಟು, ಮೂತ್ರ ಶಂಕೆಯನ್ನೂ ಮಾಡದೆ ಕಾರ್ಯನಿರ್ವಹಿಸಲಾಗಿದೆ ಎಂದಿದ್ದಾರೆ.
ಸಾರ್ವಜನಿಕರ ಶ್ಲಾಘನೆ:
ಮಗುವನ್ನು ಉಳಿಸಿಕೊಳ್ಳಬೇಕು, ಯಾವುದೇ ಹಾನಿಯಾಗದಂತೆ ರಕ್ಷಿಸಬೇಕು ಎನ್ನುವ ಪೊಲೀಸರ ಅಚಲ ನಿರ್ಧಾರದಿಂದಲೇ ಬಾಲಕ ಅನುಭವ್ ಸುರಕ್ಷಿತವಾಗಿ ಮನೆ ಸೇರುವಂತಾಗಿದೆ ಎನ್ನಲಾಗುತ್ತಿದೆ. ಪೊಲೀಸರ ಈ ದಿಟ್ಟ ಕ್ರಮ ಹಾಗೂ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಾಲಕ ಅನುಭವ್‍ನನ್ನು ಸುರಕ್ಷಿತಾಗಿ ಕರೆತಂದ ದ.ಕ. ಪೊಲೀಸರಿಗೆ ‘ಪ್ರಜಾಪ್ರಕಾಶ’ ತಂಡದ ಬಿಗ್ ಸೆಲ್ಯೂಟ್.