ಆರ್ ಎನ್ ಶೆಟ್ಟಿ ನಿಧನ: ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ

ಧರ್ಮಸ್ಥಳ: ಮುರುಡೇಶ್ವರ ನಿರ್ಮಾತೃ ಶಿಕ್ಷಣ ಪ್ರೇಮಿ ಆರ್ ಎನ್ ಶೆಟ್ಟಿ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು‌ ಸಂತಾಪ ಸೂಚಿಸಿದ್ದಾರೆ.

ಆರ್. ಎನ್. ಶೆಟ್ಟಿಯವರ ನಿಧನದ ವಾರ್ತೆಯನ್ನು ತಿಳಿದು ವಿಷಾದವಾಯಿತು. ಅವರು ನಾನು ಮೆಚ್ಚಿದ ವ್ಯಕ್ತಿ. ಸಂಪಾದನೆ ಎರಡು ಕೈಯಲ್ಲಿ ಮಾಡಿ ನಾಲ್ಕು ಕೈಯಲ್ಲಿ ದಾನ ಮಾಡು ಎಂಬ ಮಾತಿನನ್ವಯದಂತೆ ಶೈಕ್ಷಣಿಕವಾಗಿ ಯಾವುದೇ ಪದವಿ ಪಡೆಯದಿದ್ದರೂ ಪ್ರಸಿದ್ಧರಾದ ಅವರು ಆಡಳಿತ ತರಬೇತಿದಾರರಿಗೆ ಶಿಕ್ಷಣ ಕೊಡುವಷ್ಟು ತಜ್ಞರಾಗಿದ್ದರು. ಅಂತೆಯೇ ಮುರುಡೇಶ್ವರ ಕ್ಷೇತ್ರವನ್ನು ಏಕಾಗ್ರತೆಯಿಂದ ಅಭಿವೃದ್ಧಿ ಪಡಿಸಿ ಎಲ್ಲರೂ ಒಮ್ಮೆ ವೀಕ್ಷಿಸಲೇ ಬೇಕಾದ ಪವಿತ್ರ ಕ್ಷೇತ್ರವಾಗಿ ಪರಿವರ್ತಿಸಿದರು ಎಂದರು.

ವ್ಯವಹಾರ, ಧಾರ್ಮಿಕತೆ ಎಲ್ಲಾ ರಂಗದಲ್ಲಿಯೂ ಯಶಸ್ಸು ಪಡೆದು ಮಾದರಿ ಅನ್ನಿಸಿಕೊಂಡಿದ್ದರು. ದಾನದಲ್ಲಿಯೂ ಎತ್ತಿದ ಕೈ. ಆದರೆ ಹೆಚ್ಚು ಪ್ರಚಾರ ಬಯಸದೆ ದಾನವನ್ನು ಮಾಡಿ ತಾನು ದಾನ ನೀಡಿದ ಕಾರ್ಯಗಳು ಅಥವಾ ಕಟ್ಟಡಗಳು ವ್ಯವಸ್ಥಿತವಾಗಿ ರೂಪುಗೊಂಡು ನಡೆಸುವಂತೆ ಮಾರ್ಗದರ್ಶನ ನೀಡುತ್ತಿದ್ದರು. ಆದರ್ಶ ಜೀವನವನ್ನು ನಡೆಸಿದ ಶೆಟ್ಟಿಯವರ ಜೀವನ ಇತರರಿಗೆ ಮಾದರಿ ಆಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.

ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮುರುಡೇಶ್ವರ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದರು.

error: Content is protected !!