ಉಡುಪಿ: ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕ್ವಿಜ್ ಆಧಾರಿತ ಕಾರ್ಯಕ್ರಮದಲ್ಲಿ ಉಡುಪಿ ಮೂಲದ ವಿದ್ಯಾರ್ಥಿಯೊಬ್ಬರು 50 ಲಕ್ಷ ರೂ. ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾನೆ ಎಂದು ವರದಿಯೊಂದು ತಿಳಿಸಿದೆ.
ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ನ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ ‘ಕೌನ್ ಬನೇಗಾ ಕರೋಡ್ ಪತಿ’ ಕ್ವಿಝ್ ಸ್ಪರ್ಧೆಯಲ್ಲಿ 50 ಲಕ್ಷ ರೂ. ಗೆದ್ದಿದ್ದಾನೆ.
ದೇಶದ ಎಂಟು ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಹಾಟ್ ಸೀಟ್ ನಲ್ಲಿ ಅಮಿತಾಭ್ ಬಚ್ಚನ್ ಕೇಳುವ 15 ಪ್ರಶ್ನೆಗಳ ಪೈಕಿ ಅನಮಯ 14 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ 50 ಲಕ್ಷ ರೂ. ತನ್ನದಾಗಿಸಿಕೊಂಡಿದ್ದಾನೆ. 15ನೇ ಪ್ರಶ್ನೆಗೆ 1 ಕೋಟಿ ರೂ. ಗೆಲ್ಲುವ ಅವಕಾಶವಿತ್ತಾದರೂ, ಖಚಿತವಾದ ಉತ್ತರ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಆಟದಿಂದ ಕ್ವಿಟ್ ಆಗುವ ನಿರ್ಧಾರ ಕೈಗೊಂಡಿದ್ದಾನೆ. ಆದ್ದರಿಂದ ಒಂದು ಕೋಟಿ ರೂ. ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ. ಆದರೂ ಮಹತ್ವದ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿ ದೇಶದ ಗಮನ ಸೆಳೆದಿದ್ದಾರೆ.