ಧರ್ಮದ ತಿರುಳು, ಸಾಹಿತ್ಯದ ಸತ್ವ ಮನುಜ ಹಿತ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಧರ್ಮಸ್ಥಳ ಲಕ್ಷದೀಪೋತ್ಸವ ಸಾಹಿತ್ಯ ಸಮ್ಮೇಳನದ 88ನೇ ಅಧಿವೇಶನ

 

ಧರ್ಮಸ್ಥಳ: ಬದುಕಿನಲ್ಲಿ ಸ್ಥಿತ್ಯಂತರಗಳು ಸಹಜ ಅದಕ್ಕೆ ಹೊಂದಿಕೊಂಡು ಮೌಲ್ಯಗಳೂ ಬದಲಾಗುತ್ತಿರುತ್ತವೆ. ಇಂಥಾ ಸಂದಿಗ್ಧ ಕಾಲದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಮಾಡಿ ಅವರು ಸನ್ಮಾರ್ಗಿಗಳಾಗುವಂತೆ ಪ್ರೇರಣೆ ನೀಡುವುದು ಧರ್ಮ ಮತ್ತು ಸಾಹಿತ್ಯದ ಜವಾಬ್ದಾರಿಯಾಗಿದೆ. ಧರ್ಮದ ತಿರುಳು, ಸಾಹಿತ್ಯದ ಸತ್ವ ಮನುಜ ಹಿತವೇ ಆಗಿದೆ. ಆದ್ದರಿಂದ ಜನರಲ್ಲಿ ನೈತಿಕತೆ, ಸಚ್ಛಾರಿತ್ರ್ಯಗಳು ಬೆಳೆಸುವ ಕಾರ್ಯವೂ ಇವುಗಳಿಂದಲೇ ಆಗಬೇಕಿದೆ ಎಂದು ಧರ್ಮಾಧಿಕಾರಿ ಹಾಗೂ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ನುಡಿದರು.

ಅವರು ಲಕ್ಷದೀಪೋತ್ಸವ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸಾಹಿತ್ಯ ಸಮ್ಮೇಳನದ 88ನೇ ಅಧಿವೇಶನದ ಸ್ವಾಗತ ಭಾಷಣದಲ್ಲಿ ಮಾತನಾಡಿದರು.

ಇಂದು ಪಂಚಭೂತಗಳು, ಪಂಚೇಂದ್ರಿಯಗಳು ಮಲಿನವಾಗದಂತೆ ಎಚ್ಚರಿಸುವ ಕಾರ್ಯ ಸಾಹಿತ್ಯದಿಂದಾಗುತ್ತಲೇ ಇದೆ. ’ಸ-ಹಿತವಾದುದು’ ಅಂದರೆ ಮಾನವ ಜೀವನಕ್ಕೆ ಹಿತವನ್ನುಂಟು ಮಾಡುವಂಥದ್ದೆ ಸಾಹಿತ್ಯವೆಂದು ಹೇಳಲಾಗಿದೆ. ಉತ್ತಮ ಸಾಹಿತ್ಯದ ಅಧ್ಯಯನದಿಂದ ಮಾನವನ ಬದುಕಿಗೆ ಅವಶ್ಯಕವಾದ ಉತ್ತಮ ನೈತಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳ ಸತ್ಪ್ರೇರಣೆ ದೊರೆಯುತ್ತದೆ ಎಂದರು.

ಸಾಂಸ್ಕೃತಿಕ ದಾಖಲೆಗಳು: 

ಜಾಗತೀಕರಣ ಮತ್ತು ಖಾಸಗೀಕರಣಗಳ ವರ್ತಮಾನ ಸಂದರ್ಭದಲ್ಲಿ ವ್ಯಷ್ಟಿ ಸಮಷ್ಟಿಯಾಗುವ, ವೈಯಕ್ತಿಕತೆಯು ಸಾಮಾಜಿಕವಾಗುವ, ಸ್ಥಳೀಯತೆಯು ಜಾಗತಿಕಗೊಳ್ಳುವ ಈಗಿನ ಸಂಧ್ಯಾಕಾಲದಲ್ಲಿ ಸಾಹಿತ್ಯ ಸಮ್ಮೇಳನದ ಅರ್ಥವಂತಿಕೆಯು ಹಿಂದೆಂದಿಗಿಂತಲೂ ಹೆಚ್ಚಿನ ಔಚಿತ್ಯವನ್ನು ಇಂದು ಪಡೆದಿದೆ.

ಶ್ರೀ ಕ್ಷೇತ್ರದಲ್ಲಿ ನಡೆಯುತ್ತ ಬಂದಿರುವ ಧರ್ಮ, ಸಾಹಿತ್ಯ ಹಾಗೂ ಲಲಿತಕಲಾ ಗೋಷ್ಠಿಗಳು ಸಾಂಸ್ಕೃತಿಕ ದಾಖಲೆಗಳೂ ಆಗಿ ಸಾರ್ಥಕವೆನಿಸುತ್ತವೆ ಎಂದರು.

ಗುರು’ ಎಂದರೆ ಜ್ಞಾನದ ಅರಿವು ಎಂಬ ಭಾವ: 

ಧರ್ಮ ಮತ್ತು ಸಾಹಿತ್ಯ ಮಾನವರ ಏಳಿಗೆಗೆ ಪೂರಕ ಮತ್ತು ಪ್ರೇರಕ. ನಮ್ಮಲ್ಲಿ ಆಚರಿಸುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ ಉದ್ದೇಶವೂ ಸರ್ವರ ಹಿತ ಹಾಗೂ ಸುಂದರ ಸಮ – ಸಹಬಾಳ್ವೆಯ ಜೊತೆಗೆ ಭಾಷಾ ಸಾಮರಸ್ಯ, ಭಾಷಾಭಿಮಾನದ ಜೊತೆಜೊತೆಗೆ ಮಾನವೀಯ ಗುಣಗಳ ಉದ್ದೀಪನ. ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ. ಅವರವರ ದರುಶನಕೆ ಅವರವರ ವೇಷದಲಿ ಅವರವರಿಗೆಲ್ಲ ಗುರು ನೀನೊಬ್ಬನೆ ಅವರವರ ಭಾವಕ್ಕೆ | ಅವರವರ ಪೂಜೆಗಂ ಅವರವರಿಗೆಲ್ಲ ದೇವ ನೀನೊಬ್ಬನೆ. ಈ ಅರ್ಥವತ್ತಾದ ಸಾಲುಗಳಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವವಿದೆ. ಜನಸಾಮಾನ್ಯರಲ್ಲಿ ಅವರವರ ಭಾವ ಭಕುತಿಯಂತೆ ಭಗವಂತನನ್ನು ಸ್ತುತಿಸುವರು. ಇಲ್ಲಿ ’ಗುರು’ ಎಂದರೆ ದೇವರು. ’ಗುರು’ ಎಂದರೆ ಜ್ಞಾನದ ಅರಿವು ಎಂಬ ಭಾವ. ಅಂದರೆ ತನ್ನನ್ನು ತಾನು ಅರಿತು ಬಾಳಬೇಕು ಅರಿವೇ ಗುರು ಎಂಬ ದಿವ್ಯ ಸಂದೇಶ ನಮ್ಮ ಜಾನಪದ ಸಾಹಿತ್ಯದಲ್ಲಿ ಈ ಮೊದಲೇ ದಾಖಲಾಗಿದೆ.

ಲಾಕ್ ಡೌನ್ ನಲ್ಲಿ ಮಸ್ತಕ ಪ್ರವೇಶಿಸಿದ ಪುಸ್ತಕ: 

ಈಗಿನ ದಿನಗಳಲ್ಲಿ ಅರಿವು ಮೂಡಿಸಲು ಪುಸ್ತಕಗಳು ಬಹು ಸಹಕಾರಿಯಾಗಿವೆ. ಇತ್ತೀಚಿನ ಕೊರೋನಾ ಲಾಕ್‌ಡೌನ್ ಸಂದರ್ಭಗಳಲ್ಲಿ ಅತೀ ಹೆಚ್ಚು ಪುಸ್ತಕಗಳನ್ನು ಓದುವಂತಾಯಿತು. ನಮ್ಮ ಗ್ರಂಥಾಲಯದ ಪೂರ್ಣ ಉಪಯೋಗವಾದದ್ದು ನಮಗೆ ಈ ಸಂದರ್ಭದಲ್ಲಿಯೆ. ಈ ಬಾರಿಯ ಕೊರೋನಾ ಸಮಯದಲ್ಲಿ ಅತೀ ಹೆಚ್ಚು ಪುಸ್ತಕಗಳನ್ನು ಸ್ವೀಕರಿಸಿದ್ದೇನೆ ಹಾಗೂ ಅವುಗಳನ್ನು ಓದಿದ್ದೇನೆ. ನಮ್ಮಂತೆ ಅನೇಕ ಪುಸ್ತಕ ಪ್ರಿಯರ ಮನೆಯ ಮೂಲೆಗಳಲ್ಲಿ ಇಟ್ಟಿದ್ದ ಪುಸ್ತಕ ರಾಶಿಗಳು ಧೂಳು ಕೊಡವಿಕೊಂಡು ಹೊರ ಬಂದದ್ದಲ್ಲದೆ ಅನೇಕರ ಮಸ್ತಕಗಳಿಗೆ ಪ್ರವೇಶಿಸಿವೆ. ಪುಸ್ತಕಗಳನ್ನು ಮಸ್ತಕಗಳಿಗೆ ತುಂಬಿದಾಗಲೇ ನಮಗೆ (ಅರಿವಿನ) ಜ್ಞಾನದ ದಾರಿ ಗೋಚರವಾಗತೊಡಗುತ್ತದೆ. ಆದ್ದರಿಂದ ನಾವು ಸರ್ವರಲ್ಲಿ ಆಗ್ರಹ ಪೂರ್ವಕವಾಗಿ ಹೇಳುತ್ತೇವೆ. ನಿಮ್ಮ ಆಸಕ್ತಿಯ ವಿಷಯಗಳನ್ನು ವಿಂಗಡಿಸಿ ಆ ವಿಭಾಗದಲ್ಲಿರುವ, ಪ್ರಕಟಣೆಗೊಂಡಿರುವ, ಹೆಚ್ಚು ಪುಸ್ತಕಗಳನ್ನು ಖರೀದಿಸಿ ಓದಿರಿ ಹಾಗೂ ಮುಂದಿನ ಪೀಳಿಗೆಗೂ ಈ ಅಭಿರುಚಿ/ ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳಲು ಪ್ರೇರೇಪಿಸಿ. ಆಗ ಮಾತ್ರವೇ ಸಾಹಿತ್ಯದ ವಿವಿಧ ಮಜಲುಗಳ ಪರಿಚಯ ಸಮಾಜದ ಸಮಕಾಲೀನ ವಾಸ್ತವತೆಗಳಿಗೆ ಸ್ಪಂದಿಸುವ ಮನಸ್ಸುಗಳ ನಿರ್ಮಾಣವಾಗುತ್ತದೆ.

ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಲು ’ಜ್ಞಾನತಾಣ’: 

ಶ್ರೀ ಕ್ಷೇತ್ರ ಧರ್ಮಸ್ಥಳ ಪುಸ್ತಕ ಹಾಗೂ ಓದುವ ಸಂಸ್ಕೃತಿಯನ್ನು ನಿರಂತರವಾಗಿ ಬೆಳೆಸಿಕೊಂಡು ಬರುತ್ತಿದೆ. ಕ್ಷೇತ್ರದಿಂದ ಪ್ರಕಟವಾಗುವ ಮಂಜುವಾಣಿ ಮಾಸ ಪತ್ರಿಕೆಯು ನಾಡಿನಲ್ಲಿ ಧರ್ಮ ಮತ್ತು ಸಾಹಿತ್ಯಾಭಿರುಚಿಯನ್ನು ಮೂಡಿಸುತ್ತಿದೆ. ಗ್ರಾಮೀಣ ಬದುಕಿನ ಕೃಷಿ ಹಾಗೂ ಜನರನ್ನು ಬಲಗೊಳಿಸುವ ಪ್ರಯತ್ನವನ್ನು ’ನಿರಂತರ’ ಮಾಸ ಪತ್ರಿಕೆ ಮಾಡುತ್ತಿದ್ದು, ನಾಡಿನೆಲ್ಲೆಡೆ 8 ಲಕ್ಷಕ್ಕೂ ಹೆಚ್ಚು ಪ್ರಸಾರವಿದೆ. ಹೇಮಾವತಿ ಹೆಗ್ಗಡೆಯವರು ಸಾಹಿತ್ಯ ಹಾಗೂ ಬದುಕನ್ನು ಒಂದೇ ಎಂದು ಭಾವಿಸಿದವರು. ಈ ನೆಲೆಯಲ್ಲಿ ಅವರು ದೀನ ದುರ್ಬಲರಿಗೆ ಸಹಾಯವಾಗುವ ’ವಾತ್ಸಲ್ಯ’ ಎಂಬ ಯೋಜನೆಯನ್ನು ರೂಪಿಸಿದ್ದು, ಒಂಬತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ಅಶಕ್ತರಿಗೆ ₹9 ಕೋಟಿಯಷ್ಟು ಮಾಸಾಶನ ಕೊಡಲಾಗುತ್ತಿದೆ. ಅಲ್ಲದೆ 10 ಸಾವಿರ ಮಂದಿ ಕಡು ಬಡವರಿಗೆ ಜೀವನಾವಶ್ಯಕ ವಸ್ತುಗಳನ್ನು ಈ ಕೊರೋನಾ ಸಂದರ್ಭದಲ್ಲಿ ನೀಡಲಾಗಿದೆ. ಗ್ರಾಮೀಣ ಜನರಿಗೆ ಉಪಯೋಗವಾಗಲು 250ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಲು ’ಜ್ಞಾನತಾಣ’ ಕಾರ್ಯಕ್ರಮದಡಿಯಲ್ಲಿ 20 ಸಾವಿರ ಟ್ಯಾಬ್ ಹಾಗೂ 10 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದ ಹಿಂದುಳಿದವರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ’ಸುಜ್ಞಾನ ನಿಧಿ’ ಯೋಜನೆಯಡಿಯಲ್ಲಿ ಈವರೆಗೆ 34897 ವಿದ್ಯಾರ್ಥಿಗಳಿಗೆ ₹48.91 ಕೋಟಿ ಶಿಷ್ಯವೇತನ ನೀಡಲಾಗಿದೆ. ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ಮೂಡಿಸುವ ದೃಷ್ಟಿಯಿಂದ 70 ಲಕ್ಷ ಮಹಿಳೆಯರಿಗೆ ಸ್ವ-ಉದ್ಯೋಗ, ಪರಿಸರಪ್ರಜ್ಞೆ, ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ ಹಾಗೂ ನಾಗರಿಕ ಸೌಲಭ್ಯಗಳ ಕುರಿತು ತರಬೇತಿಯನ್ನು ನೀಡಲಾಗಿದೆ ಎಂದರು.

ಗ್ರಾಮೀಣ ಜನರಲ್ಲಿ ಸಾಹಿತ್ಯ ಅಭಿರುಚಿ ಸೃಷ್ಟಿ: 

ನಮ್ಮ ನಾಡಿನ ಮಹತ್ವದ ಪುಣ್ಯಕ್ಷೇತ್ರಗಳಲ್ಲಿ ಧರ್ಮಸ್ಥಳವೂ ಒಂದಾಗಿದ್ದು, ’ಸರ್ವಧರ್ಮ ಸಮನ್ವಯದ’ ಕ್ಷೇತ್ರವೆಂಬ ಮನ್ನಣೆ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 1933ರಲ್ಲಿ ಶ್ರೀ ಮಂಜಯ್ಯ ಹೆಗ್ಗಡೆಯವರು ಪ್ರಾರಂಭಿಸಿದ ಈ ಸಮ್ಮೇಳನಗಳು 87 ವಸಂತಗಳನ್ನು ಪೂರ್ಣಗೊಳಿಸಿದ್ದು, ಈ ವಿಶೇಷ ಸಂದರ್ಭಗಳಲ್ಲಿ ಕ್ಷೇತ್ರಕ್ಕೆ ಅನೇಕ ಶ್ರೇಷ್ಠ ಸಾಹಿತಿಗಳನ್ನು, ವಿದ್ವಾಂಸರನ್ನು ಸ್ವಾಗತಿಸಿ ಅವರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ, ಸಾಹಿತ್ಯದ ಪರಿಚಯ ಹಾಗೂ ಅಭಿರುಚಿಯನ್ನು ಗ್ರಾಮದ ಜನರಲ್ಲಿ ಮತ್ತು ಕ್ಷೇತ್ರಕ್ಕೆ ಬರುವ ಭಕ್ತಾದಿಗಳಲ್ಲಿ ಉಂಟು ಮಾಡುವ ಪ್ರಯತ್ನ ಮಾಡಿದ್ದೇವೆ. ಒಂದು ಸಮ್ಮೇಳನವು ಯಾಕಾಗಿ ಮತ್ತು ಹೇಗೆಲ್ಲ ಜನೋಪಯೋಗಿ ಆಗಬಹುದು ಎಂಬುದು ನಾವಿಂದು ಚಿಂತಿಸಬೇಕಾದ ಅಂಶವೇ ಆಗಿದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ವಿದ್ವಾಂಸ ವೇದ ಭೂಷಣ ಡಾ. ಎಸ್.‌ರಂಗನಾಥ್ ಸಮ್ಮೇಳನ ಉದ್ಘಾಟಿಸಿದರು. ಬೆಂಗಳೂರು ಹಿರಿಯ ಸಾಹಿತಿ ಹಾಗೂ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು.

**ಸಮ್ಮೇಳನದಲ್ಲಿ ಉಪನ್ಯಾಸ*

ಪಂಪನ ಆದಿ ಪುರಾಣದಲ್ಲಿ ಜೀವನ ವೃಷ್ಟಿ ವಿಚಾರವಾಗಿ ಮೈಸೂರಿನ ಪ್ರಾಧ್ಯಾಪಕಿ, ಸಂಸ್ಕೃತ ಚಿಂತಕಿ ಡಾ.ಜ್ಯೋತಿ ಶಂಕರ್, ಲಿಪಿ-ಭಾಷೆ ಹಾಗೂ ಸಂಸ್ಕೃತಿ ವಿಚಾರವಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಉಪನ್ಯಾಸ ನೀಡಿದರು.

ಸಮ್ಮೇಳನದ ಅಧ್ಯಕ್ಷರು ಹಾಗೂ ಉದ್ಘಾಟಕರನ್ನು ಡಾ.ಹೆಗ್ಗಡೆಯವರು ಗೌರವಿಸಿದರು. ಲಕ್ಷ ದೀಪೋತ್ಸವ ಸ್ವಾಗತ ಸಮಿತಿ ಖಜಾಂಚಿ ಡಿ.ಹರ್ಷೇಂದ್ರ ಕುಮಾರ್ ಉಪನ್ಯಾಸಕರನ್ನು ಗೌರವಿಸಿದರು.

ಪುಸ್ತಕಗಳ ಬಿಡುಗಡೆ:

ಇದೇ ಸಂದರ್ಭ ಧರ್ಮಸ್ಥಳ ಸಂಸ್ಕೃತಿ ಪ್ರತಿಷ್ಠಾನದ ಸಂಶೋಧಕ ಎಸ್.ಆರ್.‌ವಿಘ್ನರಾಜ್ ಅವರ ರಚಿಸಿದ ‘ ಪ್ರಾಚೀನ ಭಾರತೀಯ ಲಿಪಿಗಳು’ ಹಾಗೂ

ಅಂತರ್ ರಾಷ್ಟ್ರೀಯ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರು ರಚಿಸಿದ ‘ ಖಾನ್ ಕಂಪೌಂಡ್’ ಪುಸ್ತಕಗಳನ್ನು ಡಾ.ಡಿ.ವೀರೆಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಪ್ರಾಜೆಕ್ಟ್ ನಿರ್ದೇಶಕ ಡಿ.ಶ್ರೇಯಸ್ ಕುಮಾರ್ ಹಾಗೂ ನಂದೀಶ್ ಸನ್ಮಾನ ಪತ್ರ ವಾಚಿಸಿದರು.

ಹೇಮಾವತಿ ವೀ. ಹೆಗ್ಗಡೆ, ಸ್ವಾಗತ ಸಮಿತಿ ‌ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಅಮಿತ್ ಕುಮಾರ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ‌ ನಿರ್ವಹಿಸಿ, ರುಡ್ ಸೆಟ್ ನಿರ್ದೇಶಕ ಪಿ.ಸಿ. ಹಿರೇಮಠ ವಂದಿಸಿದರು.

error: Content is protected !!