ಬೆಳ್ತಂಗಡಿ: ಅಮಲು ಪದಾರ್ಥ ಸೇವಿಸಿ ವಾಹನ ಅಪಘಾತವೆಸಗಿದ ಪರಿಣಾಮ ಶಿಕ್ಷಕಿಯೊಬ್ಬರ ದಾರುಣ ಸಾವಿಗೆ ಕಾರಣನಾಗಿದ್ದ ಆರೋಪಿ ಚಾಲಕನಿಗೆ ನ್ಯಾಯಾಲಯ ಒಂದೂವರೆ ವರ್ಷ ಜೈಲು ಶಿಕ್ಷೆ ಖಾಯಂ ಮತ್ತು ನಗದು ದಂಡ ವಿಧಿಸಿ ತೀರ್ಪು ನೀಡಿದೆ. ಸುಮಿತ್ ಮೊರಾಬ್ ಎಂಬಾತನೇ ಇದೀಗ ಅಪರಾಧ ಸಾಬೀತಾಗಿರುವ ಚಾಲಕ.
ಈತ 28.2.2017 ರಂದು ಉಜಿರೆ ಕೆಳಗಿನ ಪೆಟ್ರೋಲ್ ಬಂಕ್ ಬಳಿ ತಾನು ಚಲಾಯಿಸುತ್ತಿದ್ದ ವ್ಯಾನ್ ಅನ್ನು ಮಾಚಾರು ನಿವಾಸಿ ಅಬೂಬಕ್ಕರ್ ಅವರು ಚಲಾಯಿಸುತ್ತಿದ್ದ ರಿಕ್ಷಾ ಕ್ಕೆ ಗುದ್ದಿದ್ದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಲಾಯಿಲ ಸೈಂಟ್ ಮೇರಿ ಶಾಲೆಯ ಶಿಕ್ಷಕಿಯಾಗಿದ್ದ ಅಶ್ವಿನಿ ಅವರ ಸಾವಿಗೆ ಕಾರಣನಾಗಿದ್ದ. ಅಂದು ರಿಕ್ಷಾ ದಲ್ಲಿದ್ದ ಸುಳ್ಯ ತಾಲೂಕಿನ ನಿವಾಸಿಗಳಾದ ಸುಮಯ್ಯಾ ಮತ್ತು ಅವರ ಪುತ್ರ ಮುಹಮ್ಮದ್ ಷಾನ್ ಅವರಿಗೆ ಗಾಯಗಳಾಗಿತ್ತು.
ರಿಕ್ಷಾ ಚಾಲಕರಾಗಿದ್ದ ಅಬೂಬಕ್ಕರ್ ಅವರು ಮಾಚಾರಿನಲ್ಲಿನ ಮನೆಗೆ ಆಮಿನಾ ಮತ್ತು ಹಸೀನಾ ಅವರನ್ನು ಇಳಿಸಿ ಹೋಗುತ್ತಿದ್ದ ಸಂದರ್ಭ ಈ ಅಪಘಾತ ವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಅಂದಿನ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ನಾಗೇಶ್ ಕದ್ರಿ ಅವರು ಆರೋಪಿ ವ್ಯಾನ್ ಚಾಲಕ ಸುಮಿತ್ ಮೊರಾಬ್ ಅವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಾ ಪಟ್ಟಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಆರೋಪಿ ವಿರುದ್ಧದ ಆರೋಪವನ್ನು ಖಚಿತಪಡಿಸಿಕೊಂಡು ಮೋಟಾರು ವಾಹನ ಕಾಯ್ದೆ 3 ಪ್ರತ್ಯೇಕ ಸೆಕ್ಷನ್‌ನಡಿ ಶಿಕ್ಷೆ ಪ್ರಕಟಿಸಿದೆ.
ಸೆಕ್ಷನ್ ಒಂದರಲ್ಲಿ 1 ವರ್ಷ ಜೈಲು,5 ಸಾವಿರ ರೂ. ದಂಡ, ಇನ್ನೊಂದರಲ್ಲಿ 3 ತಿಂಗಳು ಜೈಲು, ಮತ್ತು 1 ಸಾವಿರ ರೂ ದಂಡ, ಹಾಗೂ ಮತ್ತೊಂದು ಸೆಕ್ಷನ್‌ನಲ್ಲಿ 3 ತಿಂಗಳು ಜೈಲು ಮತ್ತು 500 ರೂ.ದಂಡ ವಿಧಿಸಿ ತೀರ್ಪು ನೀಡಿದೆ.