ನಾಳೆ ಸಂಜೆ ಧರ್ಮಸ್ಥಳದಲ್ಲಿ ಸರ್ವಧರ್ಮ 88ನೇ ಅಧಿವೇಶನ: ಭಾನುವಾರ ರಾತ್ರಿ 9ಕ್ಕೆ ಕಂಚಿಮಾರುಕಟ್ಟೆ ಉತ್ಸವ

ಬೆಳ್ತಂಗಡಿ: ಸರ್ವಧರ್ಮಗಳ ಸಂಗಮ ಕ್ಷೇತ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಸಂದರ್ಭ ನಡೆಯುವ ಸರ್ವಧರ್ಮ 88ನೇ ಅಧಿವೇಶನ ಡಿ. 13 ಭಾನುವಾರ ಸಂಜೆ 5 ಗಂಟೆಗೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಚಾಲನೆಗೊಳ್ಳಲಿದೆ.

ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಗಳವರು ಅಧ್ಯಕ್ಷತೆ ವಹಿಸುವರು.

ಧರ್ಮಾಧಿಕಾರಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಲಿದ್ದು, ಖ್ಯಾತ ಕಥೆಗಾರ ಬೆಂಗಳೂರಿನ ಕೇಶವ ಮಳಗಿ, ಉಡುಪಿ ಧರ್ಮಪ್ರಾಂತ್ಯದ ಸಾ.ಸಂಪರ್ಕ ಅಧಿಕಾರಿ ರೆ.ಫಾ.ಚೇತನ್ ಲೋಬೋ ಉಪನ್ಯಾಸ ನೀಡಲಿದ್ದಾರೆ.

ಸಮ್ಮೇಳನದ ಬಳಿಕ ರಾತ್ರಿ 8 ರಿಂದ 10 ಗಂಟೆಯವರೆಗೆ ಬೆಂಗಳೂರಿನ ಸಂಗೀತ ಕಲಾರತ್ನ ಡಾ.ಆರ್. ಮಂಜುನಾಥ ತಂಡದಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.

ಶ್ರೀಮಂಜುನಾಥಸ್ವಾಮಿಯ ಕೆರೆಕಟ್ಟೆ ಉತ್ಸವ:
ಕಾರ್ತಿಕಮಾಸದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಎರಡನೇ ದಿನದ ಶ್ರೀಮಂಜುನಾಥಸ್ವಾಮಿಯ ಕೆರೆಕಟ್ಟೆ ಉತ್ಸವ ಶುಕ್ರವಾರ ರಾತ್ರಿ ನೆರವೇರಿತು. ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಹೊಂದಿದರು. ಮೂರನೇ ದಿನ ಶನಿವಾರದಂದು ಶ್ರೀ ಮಂಜುನಾಥಸ್ವಾಮಿಯ ಲಲಿತೋದ್ಯಾನ ಉತ್ಸವ ನಡೆಯಲಿದೆ. ನಾಲ್ಕನೇ ದಿನ ಭಾನುವಾರ ರಾತ್ರಿ 9 ಗಂಟೆಗೆ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ.

ಲಕ್ಷ ದೀಪೋತ್ಸವದ ಎರಡನೇ ದಿನ ಶುಕ್ರವಾರವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಸ್ವರ್ಣಪಲ್ಲಕ್ಕಿಯಲ್ಲಿ ಕೆರೆಕಟ್ಟೆ ಉತ್ಸವಕ್ಕೆ ಮೆರವಣಿಗೆ ಮೂಲಕ ಸಾಗಿತು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಕೆರೆಕಟ್ಟೆಯಲ್ಲಿ ಉತ್ಸವ ನಡೆದ ಬಳಿಕ ದೇವಸ್ಥಾನಕ್ಕೆ ಮರಳಿದ ದೇವರನ್ನು ಬೆಳ್ಳಿರಥದಲ್ಲಿ ದೇವಸ್ಥಾನದ ಸುತ್ತ ಒಂದು ಸುತ್ತು ಉತ್ಸವ ನಡೆಯಿತು. ಭಕ್ತರು ಈ ರಥೋತ್ಸವವನ್ನು ಭಕ್ತಿಭಾವದಿಂದ ಎಳೆಯುವ ಮೂಲಕ ಧನ್ಯತೆ ಹೊಂದಿದರು.

ಲಕ್ಷ ದೀಪೋತ್ಸವ ಸಂದರ್ಭ ನಡೆಯುವ ಮೂರನೇ ದಿನ ಲಲಿತಕಲಾ ಗೋಷ್ಠಿಯಲ್ಲಿ ಸಂಜೆ 7 ರಿಂದ ಸಾದ್ವಿನಿ ಕೊಪ್ಪ ತಂಡದಿಂದ ಸುಗಮ ಸಂಗೀತ ಹಾಗೂ ರಾತ್ರಿ 8-30 ರಿಂದ ಸತ್ಯನಾರಾಯಣ ರಾಜು ಅವರಿಂದ ರಾಮಕಥಾ ನೃತ್ಯ ರೂಪಕ ನಡೆಯಲಿದೆ.

error: Content is protected !!