ಬಾಂಜಾರುಮಲೆ ಬಳಿ‌‌ ಹಗಲಲ್ಲೇ ಒಂಟಿ‌ ಸಲಗದ ಓಡಾಟ: ಅಧಿಕಾರಿಗಳಿಗೆ ನೇರ ದರ್ಶನ

 

ಮುಂಡಾಜೆ: ಚುನಾವಣೆಯ ಮತಗಟ್ಟೆ ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ಒಂಟಿ ಸಲಗ ಎದುರಾದ ಘಟನೆ ಬಾಂಜಾರುಮಲೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಕೇಂದ್ರದಿಂದ 35 ಕಿ.ಮೀ. ದೂರದಲ್ಲಿರುವ ಬಾಂಜಾರುಮಲೆ ಪ್ರದೇಶ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ, ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 10 ಕಿ.ಮೀ. ಒಳ ಭಾಗದಲ್ಲಿದೆ. ಕಾಡಿನಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಸುಮಾರು 45 ಮನೆಗಳ 260ರಷ್ಟು ಮತದಾರರಿಗೆ ಬಾಂಜಾರುಮಲೆ ಸಮುದಾಯ ಭವನದಲ್ಲಿ ಮತಗಟ್ಟೆ ಇದೆ. ಇಲ್ಲಿಗೆ ಚುನಾವಣಾಧಿಕಾರಿ ರಘು, ಸಹಾಯಕ ಚುನಾವಣಾಧಿಕಾರಿ ಅಜಿತ್, ನೆರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಹಾಗೂ ಸಿಬ್ಬಂದಿ ಮತಗಟ್ಟೆ ಪರಿಶೀಲನೆಗೆ ತೆರಳಿದ ಸಂದರ್ಭ ಒಂಟಿ ಸಲಗ ಎದುರಾಗಿದೆ.

ವಾಹನದ ಮೂಲಕ ಹೋಗುತ್ತಿದ್ದಾಗ ರಸ್ತೆಯಲ್ಲಿ ಒಂಟಿ ಸಲಗ ಕಂಡುಬಂದಿದ್ದು, ಸಮೀಪವಿದ್ದ ಇನ್ನೊಂದು ಕವಲು ರಸ್ತೆಯಲ್ಲಿ ವಾಹನವನ್ನು ಕೊಂಡೊಯ್ದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ.

ನೆರಿಯ ಪಿಡಿಒ ಗಾಯತ್ರಿ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಒಂಟಿ ಸಲಗವನ್ನು ರಸ್ತೆ ಮಧ್ಯೆ ಕಂಡಾಗ ಒಂದಿಷ್ಟು ಭಯವಾಯಿತು. ಅದೃಷ್ಟವಶಾತ್ ಸಮೀಪವೇ ಕವಲು ರಸ್ತೆ ಇದ್ದುದರಿಂದ ವಾಹನವನ್ನು ಆ ಮಾರ್ಗದಲ್ಲಿ ಚಲಾಯಿಸಲಾಯಿತು. ಸಲಗ ರಸ್ತೆಯಿಂದ ಕಾಡಿಗೆ ತೆರಳುವ ತನಕ ಸುಮಾರು ಅರ್ಧಗಂಟೆ ಕಾದು ಬಳಿಕ ಮರಳಿದೆವು ಎಂದು ತಿಳಿಸಿದ್ದಾರೆ.

error: Content is protected !!