ಬೆಳ್ತಂಗಡಿ: ಜಾಮ್, ಜಾಮ್, ಜಾಮ್… ಇದು ಗುರುವಾಯನಕೆರೆ ಸುತ್ತಮುತ್ತ, ಡಿ.9ರಂದು ಗುರುವಾರ ಮಧ್ಯಾಹ್ನ ಕಂಡುಬಂದ ದ್ವಿಚಕ್ರ ಸವಾರರು ಹಾಗೂ ವಾಹನ ಚಾಲಕರು ಕಥೆ, ವ್ಯಥೆ… ರಸ್ತೆಯುದ್ದಕ್ಕೂ ಸುಮಾರು ಎರಡು ಕಿಲೋಮೀಟರ್ ದೂರ ಸಾಲುಗಟ್ಟಿ ವಾಹನಗಳು ನಿಂತಿದ್ದು, ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು..
ವಿವಿಧ ಕಾರ್ಯಕ್ರಮಗಳಿಗೆ, ಸಭೆ ಸಮಾರಂಭಗಳಿಗೆ ತೆರಳುವವರು, ಖಾಸಗಿ ಪ್ರಯಾಣಿಕರು, ಸಾರ್ವಜನಿಕರು ಟ್ರಾಫಿಕ್ ಜಾಮ್ ಬಿಸಿ ಅನುಭವಿಸುವಂತಾಯಿತು.
ಕಿರಿದಾದ ರಸ್ತೆ:
ಗುರುವಾಯನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ರಸ್ತೆ ಕಿರಿದಾಗಿರುವುದರಿಂದ ಸಮಸ್ಯೆ ಎದುರಾಗುತ್ತಿದೆ. ಮುಖ್ಯವಾಗಿ ಗುರುವಾಯನಕೆರೆ ಜಂಕ್ಷನ್ ಆಗಿದ್ದು, ವಾಹನಗಳು ತಿರುವು ಪಡೆದು ಸಾಗುವ ಸಂದರ್ಭ ಸಮಸ್ಯೆ ಎದುರಾಗುವುದು ಸಾಮಾನ್ಯ ಎಂಬಂತಾಗಿದೆ. ಕೊರೋನಾ ಬಳಿಕ ಖಾಸಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದು, ಮಧ್ಯಾಹ್ನ ಖಾಸಗಿ ಕಾರ್ಯಕ್ರಮ ಮುಗಿಸಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿ ಸವಾರರು ಸಂಕಷ್ಟ ಪಡುವಂತಾಯಿತು.
ಹೆಚ್ಚಿದ ವಾಹನ ದಟ್ಟಣೆ:
ಗುರುವಾರ ಖಾಸಗಿ ಕಾರ್ಯಕ್ರಮಗಳು ಇದ್ದ ಕಾರಣ ವಾಹನದಟ್ಟಣೆ ಹೆಚ್ಚಾಗಿತ್ತು ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ, ಧರ್ಮಸ್ಥಳ, ಬೆಳ್ತಂಗಡಿ, ಚಿಕ್ಕಮಗಳೂರು, ಉಡುಪಿ, ಕಾರ್ಕಳ, ಮೂಡಬಿದಿರೆ, ವೇಣೂರು, ಮಂಗಳೂರು, ಉಪ್ಪಿನಂಗಡಿ, ಪುತ್ತೂರು ಮೊದಲಾದ ಪ್ರದೇಶಗಳಿಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚರಿಸುವ ಸಂದರ್ಭ ಮಾರ್ಗ ಬದಲಾವಣೆ ಮಾಡಬೇಕಾಗುತ್ತದೆ, ಆದರೆ ಜಂಕ್ಷನ್ ನಲ್ಲಿ ಗೊಂದಲ ಏರ್ಪಟ್ಟು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಜೊತೆಗೆ ಜೈನ್ ಪೇಟೆ, ಗುರುವಾಯನಕೆರೆ ಸುತ್ತಮುತ್ತಲಿನ ಸಭಾ ಮಂಟಪಗಳಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭ ಸಂಚಾರ ನಿಯಮ ಪಾಲನೆಯಲ್ಲಿ ವ್ಯತ್ಯಾಸವಾಗುತ್ತಿರುವುದೂ ಕಾರಣ ಎಂದು ಸವಾರರು ದೂರಿದ್ದಾರೆ.
ಸುಮಾರು ಮೂರು ಗಂಟೆ ಟ್ರಾಫಿಕ್ ಜಾಮ್:
ಗುರುವಾರ ಮಧ್ಯಾಹ್ನ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು 3 ಗಂಟೆಗೂ ಹೆಚ್ಚು ಕಾಲ ಸವಾರರು ಪರದಾಡುವಂತಾಯಿತು. ಇತ್ತ ಬೆಳ್ತಂಗಡಿ ಠಾಣೆ ಪೊಲೀಸರು ಹಾಗೂ ಟ್ರಾಫಿಕ್ ಠಾಣೆ ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಪೊಲೀಸರು ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ, ಗುರುವಾಯನಕೆರೆ ಜಂಕ್ಷನ್, ಜೈನ್ ಪೇಟೆ ಮೊದಲಾದ ಕಡೆ ನಿಂತು ವಾಹನಗಳು ಸರಾಗವಾಗಿ ಸಾಗುವಂತೆ ಮಾಡಲು ಹರಸಾಹಸಪಟ್ಟರು.
ಸೂಕ್ತ ಯೋಜನೆ ರೂಪಿಸದಿದ್ದಲ್ಲಿ ಸಮಸ್ಯೆ ಹೆಚ್ಚಳ:
ವಾರಾಂತ್ಯದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವುದು ಸಹಜ, ಆದರೆ ಯಾವುದೇ ಸರಕಾರಿ ರಜೆ ಇಲ್ಲದೆಯೂ, ವಾರದ ಮಧ್ಯೆ ಈ ರೀತಿ ಟ್ರಾಫಿಕ್ ಜಾಮ್ ಉಂಟಾಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ಬಿಂಬಿಸುತ್ತದೆ. ಮುಂದೆ ಸೂಕ್ತ ಯೋಜನೆ ರೂಪಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡದಿದ್ದಲ್ಲಿ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ, ದಿನಪೂರ್ತಿ ಟ್ರಾಫಿಕ್ ಜಾಮ್ ಉಂಟಾದರೂ ಅಚ್ಚರಿ ಪಡಬೇಕಿಲ್ಲ.
ಸಂಬಂಧಿಸಿದ ಇಲಾಖೆಗಳು ಈ ಬಗ್ಗೆ ಕ್ರಮಕೈಗೊಂಡು ಮಾರ್ಗಸೂಚಿ ಸಿದ್ಧಪಡಿಸಿದಲ್ಲಿ ಪರಿಸ್ಥಿತಿ ಕೊಂಚಮಟ್ಟಿಗೆ ಸುಧಾರಿಸುವ ಸಾಧ್ಯತೆಗಳಿವೆ.