ಬೆಳ್ತಂಗಡಿ: ಗ್ರಾ.ಪಂ ಸಾರ್ವತ್ರಿಕ ಚುನಾವಣೆ-2020 ಡಿ.27ರಂದು ನಡೆಯಲಿದ್ದು, ತಾಲೂಕಿನ 46 ಗ್ರಾಮ ಪಂಚಾಯತ್ ಗಳಲ್ಲಿ ಸದಸ್ಯರ ಆಯ್ಕೆ ನಡೆಯಲಿದೆ. ಇದರ ಅಂಗವಾಗಿ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.
ತರಬೇತಿ:
ಚುನಾವಣಾ ಪೂರ್ವ ತಯಾರಿಯಾಗಿ ತಾಲೂಕಿನ ಎಲ್ಲ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಡಿ.9ರಂದು ಉಜಿರೆ ಎಸ್.ಡಿ.ಎಂ ಪ.ಪೂರ್ವ ಕಾಲೇಜು ಸಭಾಂಗಣದಲ್ಲಿ ತರಬೇತಿ ನಡೆಯಿತು.
ತಹಶಿಲ್ದಾರ್ ಮಹೇಶ್ ಜೆ. ತರಬೇತಿ ಉದ್ಘಾಟಿಸಿದರು. ಎಸ್.ಡಿ.ಎಂ ಪ.ಪೂ ಕಾಲೇಜು ಪ್ರಭಾರ ಪ್ರಾಂಶುಪಾಲ ಪ್ರಮೋದ್ ಕುಮಾರ್ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಕೋರಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಧರಣೇಂದ್ರ ಕೆ. ಜೈನ್ ಪುಂಜಾಲಕಟ್ಟೆ ಮತ್ತು ಮಹೇಶ್ ಎ ಬೆಳಾಲು ಪೆರ್ಲ ಬೈಪಾಡಿ ತರಬೇತಿ ನಡೆಸಿಕೊಟ್ಟರು.
ತರಬೇತಿಯಲ್ಲಿ ತಾಲೂಕಿನ 292 ಮತಗಟ್ಟೆಗಳಿಗೆ ನಿಯುಕ್ತರಾಗಿರುವ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಅಧಿಕಾರಿಗಳಿಗೆ ಮತಪೆಟ್ಟಿಗೆ ಬಳಕೆ ತರಬೇತಿ, ವಿವಿಧ ನಮೂನೆಗಳ ವಿತರಣೆ, ಕೋವಿಡ್ -19 ರ ಸುರಕ್ಷತಾ ಕಿಟ್ ವಿತರಣೆ ನಡೆಯಿತು.
292 ಮತಗಟ್ಟೆಗಳು ಸಜ್ಜು:
ತಾಲೂಕಿನಲ್ಲಿ ಇನ್ನೂ ಅವಧಿ ಮುಕ್ತಾಯವಾಗದ ವೇಣೂರು, ಆರಂಬೋಡಿ ಎರಡು ಗ್ರಾ.ಪಂ ಹೊರತುಪಡಿಸಿ ಉಳಿದ 46 ಗ್ರಾ.ಪಂ ಗಳಿಗೆ ಡಿ.27 ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಕೋವಿಡ್ ನಿಯಮಾವಳಿಯಂತೆ ಮತಗಟ್ಟೆಗಳನ್ನು ವಿಂಗಡಿಸಲಾಗಿದ್ದು, 1ಸಾವಿರಕ್ಕಿಂತ ಹೆಚ್ಚು ಮತದಾರರು ಇರುವ 91 ಹೆಚ್ಚುವರಿ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಈ ಬಾರಿ ಆಶಾ ಕಾರ್ಯಕರ್ತೆಯರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು, ಮತಗಟ್ಟೆ ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಮತದಾರರು ಇದ್ದರೆ, ಅವರಿಗೆ ಚುನಾವಣೆಯ ದಿನದ ಕೊನೆಯ ಒಂದು ಗಂಟೆಯಲ್ಲಿ ಮತಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ.
ಚುನಾವಣಾ ಶಿರಸ್ತೇದಾರ ನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.